ಶಹಾಪುರ | ಚರಂಡಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆಗೆ ಆಗ್ರಹ : ನಗರಸಭೆ ಅಧಿಕಾರಿಗಳ ವಿರುದ್ಧ ಯುವ ಸೇನೆ ಆಕ್ರೋಶ
ಶಹಾಪುರ: ನಗರದ ವಿವಿಧ ವಾರ್ಡ್ಗಳಲ್ಲಿ ಚರಂಡಿ ಸ್ವಚ್ಛತೆ ಕೈಗೊಳ್ಳದಿರುವುದು ಹಾಗೂ ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಬೀದಿ ದೀಪಗಳು ಸಮರ್ಪಕವಾಗಿ ಉರಿಯದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಲ್ಯಾಣ ಕರ್ನಾಟಕ ಯುವ ಸೇನೆ, ನಗರಸಭೆ ಅಧಿಕಾರಿಗಳು ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದೆ.
ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳ ಚರಂಡಿಗಳಲ್ಲಿ ಕಸ, ಕಡ್ಡಿಗಳು ತುಂಬಿಕೊಂಡಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳದ ಕಾರಣ ತೀವ್ರ ದುರ್ವಾಸನೆ ಹರಡುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ. ರಸ್ತೆ ಬದಿಗಳಲ್ಲಿಯೂ ಕಸ ಸಂಗ್ರಹವಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಇನ್ನೊಂದೆಡೆ, ಬಸವೇಶ್ವರ ವೃತ್ತದಿಂದ ಯಾದಗಿರಿ ಮಾರ್ಗವಾಗಿ ವಾಲ್ಮೀಕಿ ವೃತ್ತದವರೆಗೆ ಇರುವ ಬೀದಿ ದೀಪಗಳು ರಾತ್ರಿ ವೇಳೆ ಸಮರ್ಪಕವಾಗಿ ಉರಿಯುತ್ತಿಲ್ಲ. ಇದರಿಂದ ರಸ್ತೆ ಕತ್ತಲಲ್ಲಿ ಮುಳುಗುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಲ್ಲಿ ಸುರಕ್ಷತೆಯ ಆತಂಕವೂ ಎದುರಾಗಿದೆ.
ನಗರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಎಲ್ಲ ವಾರ್ಡ್ಗಳ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆ ಬದಿಯ ಕಸವನ್ನು ತೆರವುಗೊಳಿಸುವುದರ ಜೊತೆಗೆ, ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತದವರೆಗಿನ ಬೀದಿ ದೀಪಗಳು ಪ್ರತಿದಿನ ಸಂಜೆ ಸಮಯಕ್ಕೆ ಸರಿಯಾಗಿ ಉರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಯುವ ಸೇನೆಯ ತಾಲೂಕು ಅಧ್ಯಕ್ಷ ಕಾಶಪ್ಪ ಹಳಿಸಗರ ಒತ್ತಾಯಿಸಿದ್ದಾರೆ.
ಸಮಸ್ಯೆಗಳನ್ನು ತಕ್ಷಣ ಪರಿಹರಿಸದಿದ್ದರೆ ನಗರಸಭೆ ಕಚೇರಿ ಎದುರು ಧರಣಿ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.