×
Ad

ಶಹಾಪುರ | ಜಯಮ್ಮ ಸಂಶಯಾಸ್ಪದ ಸಾವು ಪ್ರಕರಣ : ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ

Update: 2026-01-12 22:20 IST

ಶಹಾಪುರ : ಗೋಗಿ (ಕೆ) ಗ್ರಾಮದ ಮಹಿಳೆ ಜಯಮ್ಮ ಎಂಬವರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅತ್ಯಾಚಾರ ನಡೆಸಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಧರಣಿ ನಡೆಸಲಾಯಿತು.

ಜಿಲ್ಲಾ ಸಂಚಾಲಕ ನಿಂಗಣ್ಣ ಎಂ. ಗೋನಾಲ ಮಾತನಾಡಿ, ಜಯಮ್ಮ ಅವರು ತಮ್ಮ ಗಂಡ ಹಾಗೂ ಮೂವರು ಪುತ್ರರೊಂದಿಗೆ ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 2025ರ ಡಿ. 23ರಂದು ಮಧ್ಯಾಹ್ನ 12:30ರ ಸುಮಾರಿಗೆ ಹಣ ವಿದ್‌ಡ್ರಾ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಶಹಾಪುರಕ್ಕೆ ಬಂದ ಜಯಮ್ಮ ಮನೆಗೆ ಹಿಂದಿರುಗಲಿಲ್ಲ. ಮರುದಿನ ಅಂದರೆ ಡಿ.24ರಂದು ಬೆಳಗ್ಗೆ ಶಹಾಪುರ ನಗರದ ಇಂದಿರಾನಗರ ಹೊರವಲಯದಲ್ಲಿ ಜಾಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಅದು ಜಯಮ್ಮ ಅವರದ್ದೇ ಎಂಬುದು ದೃಢಪಟ್ಟಿತು. ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಜಯಮ್ಮನ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ ಎಂದರು.

ಜಾಲಿ ಗಿಡದ ಕೊಂಬೆಗಳು ಬಲಿಷ್ಠವಾಗಿಲ್ಲ, ಶವದ ಕುತ್ತಿಗೆ ಮೇಲ್ಭಾಗದಲ್ಲಿ ಗುರುತುಗಳಿದ್ದು, ಕಾಲುಗಳು ನೆಲಕ್ಕೆ ಸಮೀಪದಲ್ಲಿದ್ದವು. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಜಯಮ್ಮರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಬಳಿಕ ನೇಣು ಬಿಗಿದಂತೆ ತೋರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ನಿಂಗಣ್ಣ ಹೇಳಿದರು.

ಈ ಬಗ್ಗೆ ಡಿ.30ರಂದು ಶಹಾಪುರ ಪೊಲೀಸ್ ಠಾಣೆಯ ಆರಕ್ಷಕ ನೀರೀಕ್ಷಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಸಮರ್ಪಕ ಉತ್ತರ ನೀಡಿಲ್ಲ. ಜೊತೆಗೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ನಿಂಗಣ್ಣ ಆರೋಪಿಸಿದರು.

ಆದ್ದರಿಂದ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಿ, ಕರ್ತವ್ಯ ಲೋಪ ತೋರಿದ ಶಹಾಪುರ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚೆನ್ನಪ್ಪ ಆನೆಗುಂದಿ, ಎಸ್.ಎಂ. ಸಾಗರ, ದಾವಲ್ ಸಾಬ್ ನದಾಫ್, ಮಾದೇವಪ್ಪ ದಿಗ್ಗಿ, ಶಿವಕುಮಾರ್ ದೊಡ್ಡಮನಿ, ಮಾನಪ್ಪ ಮುದ್ರಿಕಿ, ಭೀಮಶಂಕರ್ ಕಟ್ಟೆಮನಿ, ದುರ್ಗಮ್ಮ ಕಟ್ಟಿಮನಿ, ರಮೇಶ್ ಗಾಂಜಿ, ಹಣಮಂತ ಕಟ್ಟಿಮನಿ, ತಾಯಪ್ಪ ಕನ್ನಳ್ಳಿ, ಬಸವರಾಜ ನಾಟೇಕರ, ಧರ್ಮಣ್ಣ ಧೀವಳಗುಡ್ಡ, ಭೀಮರಾಯ ರಾಜಾಪುರ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News