ಯಾದಗಿರಿ ಜಿಲ್ಲಾ ಉತ್ಸವ ನಡೆಸದೆ ನಿರ್ಲಕ್ಷ್ಯ: ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ
ಯಾದಗಿರಿ: ಪಕ್ಕದ ರಾಯಚೂರಿನಲ್ಲಿ ಜಿಲ್ಲಾ ಉತ್ಸವಕ್ಕೆ ಭರದಿಂದ ತಯಾರಿಗಳು ನಡೆದಿದ್ದರೂ, ಜಿಲ್ಲೆಯಾಗಿ 16 ವರ್ಷಗಳಾಗುತ್ತಿದ್ದರೂ ಯಾದಗಿರಿಯಲಲ್ಲಿ ಈ ಬಗ್ಗೆ ಅಸಡ್ಡೆ ತೋರಿಸುತ್ತಿರುವುದೇಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಭೀಮುನಾಯಕ್, ಈ ಹಿಂದೆ ಜಿಲ್ಲಾ ಉತ್ಸವ ಮಾಡಲು ಹಣ ಬಿಡುಗಡೆಯಾಗಿದ್ದರೂ ಮಾಡದೇ ಬೇಜವಬ್ದಾರಿ ಪ್ರದರ್ಶಿಸಿದ್ದರಿಂದ ಉತ್ಸವ ನಡೆಯಲಿಲ್ಲ. ಆದರೆ ಈಗ ಯಾವುದೇ ಸಮಸ್ಯೆ ಇಲ್ಲದಿದ್ದರೂ ಉತ್ಸವ ನಡೆಸಲು ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಬೀದರ್ ಉತ್ಸವ ಸೇರಿದಂತೆ ವಿವಿಧ ಜಿಲ್ಲೆಗಳ ಉತ್ಸವಗಳು ಮುಗಿದಿದೆ. ರಾಯಚೂರು ಜಿಲ್ಲಾ ಉತ್ಸವವೂ ಜನವರಿ ಕೊನೆಯ 3 ದಿನಗಳ ಕಾಲ ನಡೆಯಲು ಭರದಿಂದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಉತ್ಸವ ನಡೆಸಲು ಜನಪ್ರತಿನಿಧಿಗಳು ಉಸ್ತುವಾರಿ ಸಚಿವರು ಅದರಲ್ಲೂ ವಿಶೇಷವಾಗಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಜಿಲ್ಲೆಯ ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದರು.
ಈಗಾಗಲೇ ಎಲ್ಲ ರೀತಿಯಿಂದಲೂ ಹಿಂದುಳಿದ ಜಿಲ್ಲೆಗೆ ಕನಿಷ್ಟ ಜಿಲ್ಲಾ ಉತ್ಸವ ಆಚರಣೆ ಮಾಡುವ ಮೂಲಕ ಜನರಲ್ಲಿ ಉತ್ಸಾಹ ಹುಮ್ಮಸ್ಸು ತುಂಬಬೇಕಾದ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಸಂತೋಷ ಕುಮಾರ ನಿರ್ಮಲಕರ್, ಪ್ರಕಾಶ ಪಾಟೀಲ್ ಜೈಗ್ರಾಮ್, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ವೆಂಕಟೇಶ ನಾಯಕ ಬೈರಿಮಡ್ಡಿ, ಚೆನ್ನಬಸಪ್ಪ ತಳವಾರ, ಬಸ್ಸು ಜಗನ್ನಾಥ, ಅಂಬ್ರೇಷ್ ಹತ್ತಿಮನಿ, ವಿಶ್ವರಾಜ ಪಾಟೀಲ್ ಹೊನಗೇರಾ, ಜನಾರ್ಧನ್ ಬಡಿಗೇರ, ರವಿ ಜಮ್ಮಾರ, ಕಾಶಿನಾಥ ನಾನೇಕ, ರಮೇಶ ಡಿ. ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.