ಯಾದಗಿರಿ| ಮೈಲಾರಲಿಂಗೇಶ್ವರ ಜಾತ್ರೆ ಹಿನ್ನೆಲೆ: ಪೊಲೀಸರಿಂದ ಶಾಂತಿ ಸಭೆ
ಯಾದಗಿರಿ: ಮೈಲಾರಲಿಂಗೇಶ್ವರರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆಯ ಮಾರ್ಗದ ಮಧ್ಯದಲ್ಲಿರುವ ಕೆರೆ ಏರಿಯಲ್ಲಿ ಪೂಜೆ ಸಲ್ಲಿಸುವ ವೇಳೆ ಗಲಾಟೆ ಮಾಡಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಸುರೇಶ್ ನಾಯಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆಯಲಿರುವ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಮೈಲಾಪುರ, ಹಳಿಗೇರಾ, ರಾಮಸಮುದ್ರ, ಹೊಸಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮುಖಂಡರೊಂದಿಗೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಸುರೇಶ್ ನಾಯಕ್, ಜಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದರೆ ಲಾಠಿ ಚಾರ್ಜ್ ಸೇರಿದಂತೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ. ಸಾರ್ವಜನಿಕರು ಪೊಲೀಸರಿಗೆ ಸಹಕರಿಸಿ ಶಾಂತಿಯುತವಾಗಿ ಜಾತ್ರೆ ನಡೆಸುವಂತೆ ಮನವಿ ಮಾಡಿದರು. ಜಾತ್ರಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.
ಪ್ರತಿಯೊಂದು ಗ್ರಾಮಕ್ಕೂ ಸಂಪ್ರದಾಯದಂತೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು. ಯಾವ ಗ್ರಾಮದಿಂದ ಯಾರು ಪೂಜೆ ಸಲ್ಲಿಸಲು ಬರುತ್ತಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ಮುಂಚಿತವಾಗಿ ನೀಡಬೇಕು. ಈ ಸಂಬಂಧ ಪಿಎಸ್‌ಐಗಳು ಗ್ರಾಮಗಳ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಸುರೇಶ್ ರಾಣಪ್ಪ ಅಂಕಲಗಿ ಮಾತನಾಡಿ, ಗ್ರಾಮಗಳ ಮುಖಂಡರು ಪರಸ್ಪರ ಚರ್ಚಿಸಿ ಒಮ್ಮತದಿಂದ ಪೂಜೆ ಸಲ್ಲಿಸುವವರ ಹೆಸರುಗಳನ್ನು ಪೊಲೀಸರಿಗೆ ನೀಡಬೇಕು. ಗಲಭೆಗಳಿಗೆ ಅವಕಾಶ ನೀಡದೆ ಶಾಂತಿಯಿಂದ ಜಾತ್ರೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪಿಎಸ್‌ಐ ಹನುಮಂತ ಬಂಕಲಿಗಿ ಮಾತನಾಡಿ, ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಹೊರುವವರು ಒಂದೇ ರೀತಿಯ ಬಟ್ಟೆ ಧರಿಸಬೇಕು. ಇದರಿಂದ ದೇವರ ಸೇವಾದಾರರನ್ನು ಗುರುತಿಸಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಾಮಾನ್ಯರಂತೆ ಹಿಂದಕ್ಕೆ ತಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ವರ್ಷ ನಡೆದಂತೆ ಈ ವರ್ಷ ಗಲಾಟೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅನುಚಿತ ವರ್ತನೆ ಕಂಡುಬಂದಲ್ಲಿ ಯಾವುದೇ ವಿನಾಯಿತಿ ನೀಡದೆ ಪ್ರಕರಣ ದಾಖಲಿಸಲಾಗುವುದು. ಜನರ ಓಡಾಟಕ್ಕೆ ಅಡ್ಡಿಯಾಗುವಂತೆ ಮನೆಗಳ ಮುಂದೆ ಅಂಗಡಿಗಳನ್ನು ಹಾಕಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದರು.