"ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಸುಳ್ಳು ಪ್ರಚಾರ ನಡೆಸಿರುವವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ": ಸಚಿವ ಪ್ರಿಯಾಂಕ್ ಖರ್ಗೆ
ಕ್ರೀಡಾಪಟು ಮೇಲೆ ಪ್ರಿಯಾಂಕ್ ಖರ್ಗೆ ಅಣತಿಯಂತೆ ಎಫ್‌ಐಆರ್ ಎಂದು ಪ್ರಚಾರ
ಪ್ರಿಯಾಂಕ್ ಖರ್ಗೆ
ಯಾದಗಿರಿ: ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಅಂತರರಾಷ್ಟ್ರೀಯ ಕ್ರೀಡಾಪಟು ಲೋಕೇಶ್ ರಾಠೋಡ್ ಮೇಲೆ ಪ್ರಿಯಾಂಕ್ ಖರ್ಗೆ ಅವರೇ ಕೇಸ್ ಹಾಕಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಈ ಕುರಿತು ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಲೋಕೇಶ್ ರಾಠೋಡ್ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜ.5 ರಂದು ಪ್ರತಿಭಟನೆ ಮಾಡಿದ್ದರು. ಇದೀಗ ಲೋಕೇಶ್ ರಾಠೋಡ್ ಮೇಲೆ ಪ್ರಿಯಾಂಕ್ ಖರ್ಗೆ ಅವರೇ ಕೇಸ್ ಹಾಕಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರತಿಭಟನೆ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನಿಂದನೆ ಮಾಡಿದ ಆರೋಪದಲ್ಲಿ ಕಲ್ಯಾಣ ಕರ್ನಾಟಕ ಯೂತ್ ಅಸೋಸಿಯೇಷನ್ ಅಧ್ಯಕ್ಷ ಪುನೀತ್ ರಾಜ್ ಕಮತಗಿ ಹಾಗೂ ಸಂಘದ ಕಾರ್ಯದರ್ಶಿ ಮತ್ತು ಕ್ರೀಡಾಪಟು ಲೋಕೇಶ್ ರಾಠೋಡ್ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಈ ಮಧ್ಯೆ "ಸ್ಟೇಡಿಯಂ ಸರಿಪಡಿಸಿ ಎಂದಿದ್ದಕ್ಕೆ ಅಥ್ಲೆಟ್ ಮೇಲೆ ಕೇಸ್ ದಾಖಲಿಸಿದ ಪ್ರಿಯಾಂಕ್ ಖರ್ಗೆ, ಯುವಕರ ಮೇಲೆ ಖರ್ಗೆ ದಬ್ಬಾಳಿಕೆ" ಎಂಬ ಶೀರ್ಷಿಕೆಯಲ್ಲಿ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಛಲವಾದಿ ಟಿ ನಾರಾಯಣಸ್ವಾಮಿ ಎಂಬ ಫೇಸ್‌ಬುಕ್ ಖಾತೆಯಿಂದ ಈ ವೀಡಿಯೊ ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋದಲ್ಲಿ ಖರ್ಗೆ ಅವರು ಪ್ರಕರಣದ ಹಿಂದೆ ಇದ್ದಾರೆ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಹಳೆಯ ವಿಡಿಯೋ ತುಣುಕನ್ನು ಸಂಪಾದಿಸಿ ಕ್ರೀಡಾಪಟುವಿಗೆ ಬೆದರಿಕೆ ಹಾಕಿದಂತೆ ತೋರಿಸುವ ರೀತಿಯಲ್ಲಿ ಪ್ರಸಾರ ಮಾಡಲಾಗಿದೆ. ಈ ರೀತಿಯ ವೀಡಿಯೊ ವೈರಲ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಚಂದಪ್ಪ ಮುನಿಯಪ್ಪನೋರ ಅವರು ಪ್ರತಿಕ್ರಿಯಿಸಿ, ಇದು ಉದ್ದೇಶಪೂರ್ವಕ ರಾಜಕೀಯ ಪ್ರಚಾರ ಹಾಗೂ ಜನರನ್ನು ದಾರಿ ತಪ್ಪಿಸುವ ಯತ್ನವಾಗಿದೆ. ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ವಿಷಯಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಯನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ವಿಡಿಯೋ ಸತ್ಯಸತ್ಯತೆ ಪರಿಶೀಲಿಸಿ ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲೋಕೇಶ್ ರಾಠೋಡ್, ನಾನು ಕ್ರೀಡಾಪಟು, ನಾನು ಯಾರ ಪರನೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ರೀಡಾಂಗಣಕ್ಕೆ ಸಂಬಂಧಿಸಿದ ಪ್ರಿಯಾಂಕ್ ಖರ್ಗೆ ಅವರ ವೀಡಿಯೋ ವೈರಲ್ ಆಗಿರುವುದಕ್ಕೂ ನನ್ನ ಹೋರಾಟಕ್ಕೆ ಸಂಬಂಧವಿಲ್ಲ. ಇದು ರಾಜಕೀಯ ಅಜೆಂಡಾದ ಭಾಗವಾಗಿದೆ. ಬಿಜೆಪಿಯವರು ಹರಿಬಿಟ್ಟಿರಬಹುದು, ನನ್ನ ಹೋರಾಟ ಏನಿದ್ದರೂ ಯುವಕರಿಗೆ ಕ್ರೀಡಾಂಗಣದಲ್ಲಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬುದು ಅಷ್ಟೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ನಮ್ಮ ಹೆಸರಿನ ಮೇಲೆ ತಮ್ಮ ಅಧಿಕೃತ ಖಾತೆಯಿಂದ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲು ಮಾಡಲು ನಮ್ಮ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.