×
Ad

ಯಾದಗಿರಿ | ಬಸವ ಗೀತೆ 9 ಸಂಪುಟ ಬಿಡುಗಡೆ

ಲೌಕಿಕ ಭೋಗ ಹಿತಾಸಕ್ತಿಗಳತ್ತ ಬದುಕಿನ ಪಯಣ : ಬಸವರಾಜಸ್ವಾಮಿ

Update: 2026-01-12 22:23 IST

ಯಾದಗಿರಿ, ಜ. 12: ದೈಹಿಕ ಬಯಕೆಗಳ ಹಿತಾಸಕ್ತಿಗಳತ್ತ ಎಲ್ಲರೂ ವಾಲುತ್ತಿರುವುದರಿಂದ ಅರಿವು, ಆಚಾರ ಮರೆಯಾಗುತ್ತಿದೆ. ಇದರ ಪರಿಣಾಮ ದುಃಖ ದುಮ್ಮಾನಗಳತ್ತ ಬದುಕು ಸಾಗುತ್ತಿದೆ ಎಂದು ಶರಣರು ಎಚ್ಚರಿಸಿದ್ದಾರೆ ಎಂದು ಸಾಹಿತಿ ಬಸವರಾಜ ಸ್ವಾಮಿ ಹೇಳಿದರು.

ಜಿಲ್ಲಾ ಕನ್ನಡ ಮತ್ತು ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರದ ಸಹಯೋಗದಲ್ಲಿ ಕಸಾಪ ಭವನದಲ್ಲಿ ಆಯೋಜಿಸಲಾಗಿದ್ದ ತಾವೇ ರಚಿಸಿದ ಬಸವ ಗೀತೆ 9 ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಸಂಪುಟಗಳಲ್ಲಿ ಶರಣರ ವಚನಗಳ ಸಾರವನ್ನು ವಿವರಿಸಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಂಬಾರ ಮಾಡಿದ್ದು ಕಬ್ಬಿಣದ ಪೀಠ. ಆದರೆ ಎಲ್ಲರೂ ಆ ಭೌತಿಕ ಪೀಠದ ಮೇಲೆ ಕೂಡಲು ಹೆಣಗುತ್ತಿದ್ದಾರೆಯೇ ಹೊರತು ಜ್ಞಾನ ಪೀಠದ ಮೇಲೆ ಕೂಡಬೇಕು ಎಂಬ ಅರಿವು ಮೂಡುತ್ತಿಲ್ಲ ಎಂದರು.

ಲಿಂಗ ಎಂದರೆ ಜ್ಞಾನ. ಆದರೆ ಇಂದು ನಾವು ಲಿಂಗಾಯತರಾಗುತ್ತಿದ್ದೇವೆಯೇ ಹೊರತು ಲಿಂಗವಾಗುತ್ತಿಲ್ಲ. ಇನ್ನಿತರರು ಬೌದ್ಧರಾಗುತ್ತಿದ್ದಾರೆ, ಆದರೆ ಬುದ್ಧರಾಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದ ಅವರು, ಇಂದು ಅಜ್ಞಾನ ಆಳುತ್ತಿದೆ. ವಿಜ್ಞಾನದ ಮೂಲಕ ಭೌತಿಕ ಸುಖಭೋಗದ ಬದುಕಿನ ಎತ್ತರಕ್ಕೆ ಏರಿದರೂ ವಿವೇಕದ ಎತ್ತರಕ್ಕೆ ಏರಲಾಗುತ್ತಿಲ್ಲ.ಬದಲಿಗೆ ಪ್ರಪಾತಕ್ಕೆ ಜಾರುತ್ತಿದ್ದೇವೆ ಎಂದು ಬಸವರಾಜ ಸ್ವಾಮಿ ಹೇಳಿದರು.

ರಾಯಚೂರಿನ ನಿವೃತ್ತ ಉಪನ್ಯಾಸಕ ಬಿ.ಜಿ.ಹುಲಿ, ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿದರು. ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಕಸಾಪ, ಶಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಜಿಲ್ಲಾ ಸರ್ಜನ್ ಡಾ. ಭಗವಂತ ಅನವಾರ, ಬಸವ ಕೇಂದ್ರದ ಅಧ್ಯಕ್ಷ ಸಿದ್ದಣ್ಣ ಬಾಡದ ಇದ್ದರು. ಉಪನ್ಯಾಸಕ ಸಿದ್ದರಾಜರೆಡ್ಡಿ ನಾಲ್ವಾರ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News