ವಿದ್ಯಾರ್ಥಿಗಳು ಅಭ್ಯಾಸದ ಜೊತೆ ಕ್ರೀಡೆಯಲ್ಲೂ ತೊಡಗಿ: ಮನೋಹರ್ ರಾಠೋಡ್
ಯಾದಗಿರಿ: ವಿದ್ಯಾರ್ಥಿಗಳು ಓದಿನ ಜತೆ ಕ್ರೀಡೆಗಳಲ್ಲೂ ತೊಡಗಿಸಿಕೊಂಡು ಅದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢತೆ ಸಾಧಿಸಿ ಎಂದು ಜಿಲ್ಲಾ ಅಗ್ನಿಶಾಮಕ ದಳದ ಅಧೀಕ್ಷಕ ಮನೋಹರ್ ರಾಠೋಡ್ ಸಲಹೆ ನೀಡಿದರು.
ನಗರದ ಖಂಡೇಲ್ ವಾಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕ ಕ್ರೀಡಾ ಕಾರ್ಯಕ್ರಮದಲ್ಲಿ ಮಾತನಾಡಿದ ಮನೋಹರ್ ರಾಠೋಡ್, ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಅತಿಯಾಗಿ ಮೊಬೈಲ್ ಬಳಸುತ್ತಿದ್ದು ಮನೆಯಲ್ಲಿ ಮಕ್ಕಳಲ್ಲೂ ಮೊಬೈಲ್ ಬಳಕೆ ಹೆಚ್ಚಿದೆ. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಿ' ಎಂದು ಹೇಳಿದರು.
ಸಂಪಾದಕರ ಸಂಘದ ಅಧ್ಯಕ್ಷ ಸಿದ್ದಪ್ಪ ಲಿಂಗೇರಿ ಮಾತನಾಡಿ, 'ಕ್ರೀಡೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಫಲಿತಾಂಶ ಏನೇ ಆದರೂ ಚಿಂತಿಸದೆ ಭಾಗವಹಿಸಿ. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಕ್ರೀಡಾ ಚಟುವಟಿಕೆ ಕ್ಷೀಣಿಸುತ್ತಿದೆ. ಕ್ರೀಡೆಗಳಿಂದ ಅನೇಕ ಆರೋಗ್ಯ ಲಾಭಗಳಿವೆ' ಎಂದು ಹೇಳಿದರು.
ಪಿಐ ಮಂಜುಳಾ ಸುರಪುರ ಮಾತನಾಡಿ, 'ಜಗತ್ತಿನ ಹಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಅದೇ ರೀತಿ ವಿದ್ಯಾರ್ಥಿನಿಯರು ಕ್ರೀಡೆಗಳಲ್ಲಿ ಭಾಗವಹಿಸಿ, ಸಾಧಕರಾಗಿ ನಾಡಿಗೆ ಕೀರ್ತಿ ತರಬೇಕು' ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥೆ ಸರಳಾ ಖಂಡೇಲ್ವಾಲ್, ಆಡಳಿತಾಧಿಕಾರಿ ಅವ್ಯಕ್ತ ಖಂಡೆಲ್ವಾಲ, ವಿಜಯಕುಮಾರ್ ಕುಲಕರ್ಣಿ ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.