×
Ad

ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನಿಗಾ ವಹಿಸಿ; ಜಿಲ್ಲಾಧಿಕಾರಿ ಹರ್ಷಲ್ ಭೋಯರ್

Update: 2025-12-17 18:34 IST

ಯಾದಗಿರಿ: ಜಿಲ್ಲೆಯಲ್ಲಿನ ಶಾಲಾ, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳ ಆವರಣದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ಮಾಡದಂತೆ ಕಟ್ಟುನಿಟ್ಟಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ತಂಬಾಕು ನಿಯಂತ್ರಣ ಕಾಯ್ದೆಗಳ ಅನುಷ್ಠಾನ ಕುರಿತಂತೆ ತಾಲೂಕು ಮಟ್ಟದ ಹಾಗೂ ಪ್ರಾಧಿಕೃತ ತನಿಖಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಹರ್ಷಲ್ ಭೋಯರ್, ಮಕ್ಕಳು ಹಾಗೂ ಯುವಜನಾಂಗ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಬೇಕು. ಮದ್ಯಪಾನ, ಮಾದಕವಸ್ತುಗಳು ಹಾಗೂ ಈ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮ ಘೋರವಾಗಿದೆ. ಇದರಿಂದಾಗಿ ತಂಬಾಕು ಉತ್ಪನ್ನಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. 

ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಅವರು ಮಾತನಾಡಿ,  ಕೋಟ್ಪಾ ಕಾಯ್ದೆ -2003ರಿಂದ ಜಾರಿಯಲ್ಲಿದೆ. ಕೋಟ್ಪಾ ತಿದ್ದುಪಡಿ 2024 ಕಾಯ್ದೆ ಅನ್ವಯ ದಂಡ ಹಾಗೂ ಶಿಕ್ಷೆಗೆ ಅವಕಾಶವಿದೆ. ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಹಾಗೂ 1000ರೂ. ಗಳವರೆಗೆ ದಂಡವಿದೆ. 21 ವರ್ಷದೊಳಗಿನ ಮಕ್ಕಳು ಬೀಡಿ, ಸಿಗರೇಟು, ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಸೇವಿಸಬಾರದು ಹಾಗೂ ಮಾರಾಟ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ, ತಂಬಾಕು ಉತ್ಪನ್ನಗಳ ಸೇವನೆಗೆ ನಿಷೇಧವಿದ್ದು, ಪಾನ್ ಗುಟ್ಕಾ ಉಗುಳುವುದಕ್ಕೂ ಕಾಯ್ದೆಯಡಿ ದಂಡ ಶಿಕ್ಷೆಗೆ ಅವಕಾಶವಿದೆ ಎಂದು ಹೇಳಿದರು.  

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ, ಜಿಲ್ಲಾ ಆರ್. ಸಿ.ಹೆಚ್ ಅಧಿಕಾರಿ ಮಲ್ಲಪ್ಪ, ತಾಲೂಕು ಆರೋಗ್ಯಾಧಿಕಾರಿ ಹಣುಮಂತ ರೆಡ್ಡಿ, ಡಿಎಲ್ಓ ಕಾರ್ಯಕ್ರಮ ಅಧಿಕಾರಿ ಬಾ.ಪದ್ಮಾನಂದ ಗಾಯಕವಾಡ, ಜಿಲ್ಲಾ ಕನ್ಸಲ್ಟಂಟ್ ಮಹಾಲಕ್ಷ್ಮಿ ಸಜ್ಜನ್ ಉಪಸ್ಥಿತರಿದ್ದರು. ಉಪ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News