×
Ad

ಸುರಪುರ | ವಿದ್ಯುತ್ ಖಾಸಗೀಕರಣ ವಿರೋಧಿಸಿ ಶಾಸಕ ರಾಜಾ ವೇಣುಗೋಪಾಲ್ ನಾಯಕರಿಗೆ ಮನವಿ

Update: 2026-06-13 20:53 IST

ಸುರಪುರ: ವಿದ್ಯುತ್ ಕ್ಷೇತ್ರದ ನಿರ್ವಹಣೆಯನ್ನು ಟಾಟಾ ಪವರ್ ಸೇರಿದಂತೆ ಖಾಸಗಿ ಕಂಪನಿಗಳಿಗೆ ವಹಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (ಕೆಇಬಿ ನೌಕರರ ಸಂಘ-659) ಹಾಗೂ ಸುರಪುರ ವಿಭಾಗದ ಸಿಬ್ಬಂದಿ ಶಾಸಕ ರಾಜಾ ವೇಣುಗೋಪಾಲ್ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಮನವಿ ಸ್ವೀಕರಿಸಿದ ಶಾಸಕ ರಾಜಾ ವೇಣುಗೋಪಾಲ್ ನಾಯಕ ಮಾತನಾಡಿ, ವಿದ್ಯುತ್ ಕ್ಷೇತ್ರದ ಯಾವುದೇ ಬದಲಾವಣೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರದ ಗಮನಕ್ಕೆ ವಿಷಯವನ್ನು ತರಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಶೈಲ್ ತಮದೊಡ್ಡಿ ಮಾತನಾಡಿ, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ವಿದ್ಯುತ್ ಮೂಲಸೌಕರ್ಯಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದು ನ್ಯಾಯಸಮ್ಮತವಲ್ಲ. ಇದು ಸಾರ್ವಜನಿಕ ಆಸ್ತಿಯ ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿದರು.

ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ಗ್ರಾಮೀಣ ಪ್ರದೇಶಗಳು ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಖಾಸಗಿ ಕಂಪನಿಗಳು ಹೆಚ್ಚಿನ ಲಾಭದಾಯಕ ನಗರ ಪ್ರದೇಶಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಭಾಗಗಳಲ್ಲಿ ಸೇವೆಗಳ ಗುಣಮಟ್ಟ ಕುಸಿಯುವ ಆತಂಕವಿದೆ ಎಂದು ಅವರು ಹೇಳಿದರು.

ಖಾಸಗಿ ಸಂಸ್ಥೆಗಳು ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುವುದರಿಂದ ವಿದ್ಯುತ್ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಇದರ ನೇರ ಪರಿಣಾಮ ಸಾಮಾನ್ಯ ಗ್ರಾಹಕರು ಹಾಗೂ ರೈತರ ಮೇಲೆ ಬೀಳಲಿದೆ. ರೈತರಿಗೆ ಸದ್ಯ ದೊರೆಯುತ್ತಿರುವ ಉಚಿತ ಅಥವಾ ರಿಯಾಯಿತಿ ದರದ ವಿದ್ಯುತ್ ಸೌಲಭ್ಯಗಳಿಗೂ ಧಕ್ಕೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಜನತೆ, ರೈತರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ವಿದ್ಯುತ್ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿಯೇ ಮುಂದುವರಿಯಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜೆಸ್ಕಾಂ ಸುರಪುರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೊಹಮ್ಮದ್ ರಫೀಕ್, ಹುಣಸಗಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕಳಕಪ್ಪ, ಶಾಖಾಧಿಕಾರಿ ಶಾಂತಪ್ಪ ಕುರಿ, ಸ್ಥಳೀಯ ಸಮಿತಿಯ ಅಧ್ಯಕ್ಷ ಮರೆಪ್ಪ ತೇಲ್ಕರ್, ಏಕನಾಥ್ ಪುಲ್ಸೆ ವೆಂಕಟೇಶ್, ನೀಲಕಂಠರಾಯ, ಶರಣಪ್ಪ ಮೈಲಾರಲಿಂಗ ರಾಜು ಬುರಾನ್ ಉದ್ದೀನ್ ಅಮ್ಜದ್ ಅಲಿ ಚಿದಾನಂದ ಸೇರಿದಂತೆ ಜೆಸ್ಕಾಂ ನ ಇತರ ನೌಕರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News