×
Ad

Yadgir | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ನಿಗಾವಹಿಸಿ : ಅಧಿಕಾರಿಗಳಿಗೆ ಮನೋಜ್ ಜೈನ್ ಸೂಚನೆ

Update: 2026-06-05 19:06 IST

ಯಾದಗಿರಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಂಬಂಧಿತ ಅಧಿಕಾರಿಗಳು ನಿರಂತರ ನಿಗಾ ವಹಿಸಿ, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಮೇ ತಿಂಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಶುದ್ಧ ಕುಡಿಯುವ ನೀರು ಜನರ ಹಕ್ಕಾಗಿದ್ದು, ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಯಾದಗಿರಿ, ಗುರುಮಠಕಲ್ ಹಾಗೂ ವಡಗೇರಾ ತಾಲೂಕಿನ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ವಿಶೇಷ ಗಮನ ಹರಿಸುವಂತೆ ಸೂಚಿಸಿದ ಅವರು, ನಗರ ಪ್ರದೇಶಗಳಲ್ಲಿಯೂ ನೀರಿನ ಸಮರ್ಪಕ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೈತರಿಗೆ ಕಡಿಮೆ ನೀರು ಮತ್ತು ಕಡಿಮೆ ರಸಗೊಬ್ಬರ ಬಳಕೆಯಲ್ಲಿ ಹೆಚ್ಚು ಇಳುವರಿ ನೀಡುವ ಪರ್ಯಾಯ ಬೆಳೆಗಳ ಕುರಿತು ಜಾಗೃತಿ ಮೂಡಿಸಬೇಕು. ಬೀಜ ಹಾಗೂ ರಸಗೊಬ್ಬರಗಳ ಸಮಾನ ಹಂಚಿಕೆಗೆ ಆದ್ಯತೆ ನೀಡಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಸ್ವಚ್ಛತೆ, ರಸ್ತೆ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗಳ ಗುಣಮಟ್ಟದ ಅನುಷ್ಠಾನಕ್ಕೂ ಒತ್ತು ನೀಡಿದ ಅವರು, ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ತೋರಿದ ಕೆಆರ್‌ಐಡಿಎಲ್ ಸಹಾಯಕ ನಿರ್ದೇಶಕರ ಅಮಾನತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಗೆ ಗೈರಾಗಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆಯೂ ಆದೇಶಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ಜಿಲ್ಲೆಯಲ್ಲಿ 471 ಆರ್ ಪ್ಲಾಂಟ್ಗಳ ಪೈಕಿ 332 ಕಾರ್ಯನಿರ್ವಹಿಸುತ್ತಿವೆ. ಬಾಕಿ ಇರುವ ಆರ್ ಓ ಪ್ಲಾಂಟ್ಗಳ ದುರಸ್ತಿ ಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಹೇಳಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News