×
Ad

ಯಾದಗಿರಿ | ಗೊಗಡಿಹಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ಎಐಡಿಎಸ್‌ಒ ಆಗ್ರಹ

Update: 2026-06-08 22:26 IST

ಯಾದಗಿರಿ: ಸುರಪುರ ತಾಲೂಕಿನ ಗೊಗಡಿಹಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಕ್ಷಣವೇ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕು ಮತ್ತು ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಡಿಡಿಪಿಐ) ಕಚೇರಿ ಮುಂದೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಶಾಲಾ ಮಕ್ಕಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.

ಗೊಗಡಿಹಾಳದ ಈ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಒಟ್ಟು 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇಡೀ ಶಾಲೆಗೆ ಕೇವಲ ಒಬ್ಬರೇ ಖಾಯಂ ಶಿಕ್ಷಕರಿದ್ದಾರೆ. ಇಲ್ಲಿನ ಏಕೈಕ ಶಿಕ್ಷಕರು ಐದೂ ತರಗತಿಗಳನ್ನು ಒಟ್ಟಿಗೆ ನಿಭಾಯಿಸುತ್ತಿರುವುದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೋಧಕ ಸಿಬ್ಬಂದಿಯ ಕೊರತೆಯಷ್ಟೇ ಅಲ್ಲದೆ, ಶಾಲೆಗೆ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಸುಸಜ್ಜಿತ ಶೌಚಾಲಯ ಹಾಗೂ ಆಟದ ಮೈದಾನದ ಸೌಲಭ್ಯವಿಲ್ಲದೆ ಮಕ್ಕಳು ಪ್ರತಿದಿನ ಪರದಾಡುವಂತಾಗಿದೆ ಎಂದು ಪೋಷಕರು ದೂರಿದರು.

ಪ್ರತಿಭಟನೆಯನ್ನುದ್ದೇಶಿಸಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ. ಕೆ. ಮಾತನಾಡಿ, "ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಮತ್ತು ಅಲ್ಲಿನ ವಿದ್ಯಾರ್ಥಿಗಳ ಭವಿಷ್ಯವನ್ನು ಉಳಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಅಧಿಕಾರಿಗಳು ಕೇವಲ ಭರವಸೆ ನೀಡದೆ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು" ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗೊಗಡಿಹಾಳ ಗ್ರಾಮದ ಲಕ್ಷ್ಮೀಬಾಯಿ, ದೇವಮ್ಮ, ರೇಣುಕಾ, ಶಾಂತಮ್ಮ, ಶೋಭಾ, ಮಲ್ಲಮ್ಮ, ಯಲ್ಲಮ್ಮ, ಭೀಮಣ್ಣ, ರಾಯಪ್ಪ, ವೆಂಕಟೇಶ, ದೇವಿಂದ್ರ, ಸುಭಾಷ್ ಪೂಜಾರಿ, ಜಮಾಲಸಾಬ್, ಶರಣಗೌಡ, ಸೋಮಣಗೌಡ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News