ಸುರಪುರ | ವಿದ್ಯಾರ್ಥಿಗಳು ದೊಡ್ಡ ಕನಸು ಕಂಡು ಗುರಿ ಸಾಧನೆಗೆ ಶ್ರಮಿಸಬೇಕು: ಡಾ.ನಿವೇದಿತಾ ಭಾವಿಮನಿ
‘ನಾನು ನನ್ನ ಕನಸು’ ಕಾರ್ಯಕ್ರಮ
ಸುರಪುರ: ವಿದ್ಯಾರ್ಥಿಗಳು ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪದೊಂದಿಗೆ ಮುನ್ನಡೆಯುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಯಾದಗಿರಿ ಜಿಲ್ಲೆಯ ಕೀರ್ತಿ ಹೆಚ್ಚಿಸಿರುವ ಡಾ. ನಿವೇದಿತಾ ಸಿ. ಭಾವಿಮನಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ‘ನಾನು ನನ್ನ ಕನಸು’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣುವುದರ ಜತೆಗೆ ಅವುಗಳನ್ನು ನನಸಾಗಿಸಿಕೊಳ್ಳಲು ನಿರ್ದಿಷ್ಟ ಗುರಿ ಹೊಂದಬೇಕು. ಯಾವುದೇ ಸಾಧನೆಗೆ ನಿರಂತರ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಜೀವನಾನುಭವಗಳು ಪ್ರಮುಖವಾಗಿವೆ. ಶಿಕ್ಷಕರ ಮಾರ್ಗದರ್ಶನ ಮತ್ತು ಸತತ ಪ್ರಯತ್ನದಿಂದ ಸಾಧನೆಯ ಶಿಖರವೇರಲು ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸುರಪುರ ತಾಲೂಕು ಅಧ್ಯಕ್ಷ ಖಾದರ್ ಪಟೇಲ್, ಯಾದಗಿರಿ ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಿರಾದಾರ್, ಸಮರ್ಥ ಫೌಂಡೇಶನ್ ವಿಭಾಗೀಯ ಸಂಯೋಜಕ ಬಸವಾನಂದ ಮುಧೋಳ, ರಮೇಶ್, ಶಿಕ್ಷಕರಾದ ದೇವಪ್ಪ, ಆನಂದಕುಮಾರ, ಮಹೇಶ್ ಹುಜರಾತಿ, ಈರಮ್ಮ, ಸರಸ್ವತಿ, ಫೌಜೀಯಾಬೇಗಂ, ಮಲ್ಲಮ್ಮ, ನಜ್ಮಾ ಬೇಗಂ, ಸಾಬೇರಾಬೇಗಂ, ಆನಂದ, ಯಲ್ಲಮ್ಮ, ಲಕ್ಷ್ಮೀ, ಲಾಲಬೀ ಸೇರಿದಂತೆ ಬಿ.ಎಡ್. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.