×
Ad

ಸುರಪುರ | ಅಧಿಕ ದರಕ್ಕೆ ಬೀಜ-ಗೊಬ್ಬರ ಮಾರಾಟ ಮಾಡಿದರೆ ಕಠಿಣ ಕ್ರಮ: ಎಡಿಎ ರಾಮನಗೌಡ ಪಾಟೀಲ

Update: 2026-06-16 19:33 IST

ಸುರಪುರ: ತಾಲೂಕಿನಲ್ಲಿನ ಯಾವುದೇ ಬೀಜ ಹಾಗೂ ರಸಗೊಬ್ಬರ ಮಾರಾಟಗಾರರು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ನಡೆಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ ಎಚ್ಚರಿಕೆ ನೀಡಿದರು.

ಪಟ್ಟಣದ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಂದ ಅಧಿಕ ದರ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಇಲಾಖೆಗೆ ಬರುತ್ತಿವೆ. ಇಂತಹ ಪ್ರಕರಣಗಳು ದೃಢಪಟ್ಟರೆ ಸಂಬಂಧಿಸಿದ ಅಂಗಡಿಗಳ ಪರವಾನಗಿಯನ್ನು ಅಮಾನತು ಅಥವಾ ರದ್ದುಪಡಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಯಾವುದೇ ಕೃಷಿ ಪರಿಕರ ಅಥವಾ ರಸಗೊಬ್ಬರ ಮಾರಾಟ ಮಾಡಿದಾಗ ಜಿಎಸ್‌ಟಿ ರಸೀದಿ ನೀಡುವುದು ಕಡ್ಡಾಯವಾಗಿದೆ. ಬಿಳಿ ಹಾಳೆಯಲ್ಲಿ ಬರೆದು ರಸೀದಿ ನೀಡುವುದು ಅಥವಾ ಬಿಲ್ ನೀಡದೇ ವ್ಯವಹಾರ ನಡೆಸುವುದು ಕಂಡುಬಂದರೆ ಅಂತಹ ಅಂಗಡಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಬೀಜ ಮತ್ತು ರಸಗೊಬ್ಬರ ಮಾರಾಟಗಾರರು, ಕೆಲವೊಮ್ಮೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರೂ ರೈತರಿಂದ ದೂರುಗಳು ಬರುತ್ತವೆ. ಹೀಗಾಗಿ ಯಾವುದೇ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕೃಷಿ ತಾಂತ್ರಿಕ ಅಧಿಕಾರಿ ಭೀಮರಾಯ ಹವಾಲ್ದಾರ, ಬೀಜ-ಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷರು ಹಾಗೂ ವಿವಿಧ ಅಂಗಡಿಗಳ ಮಾಲಕರು ಉಪಸ್ಥಿತರಿದ್ದರು.

ಸೂರಜ್ ಫರ್ಟಿಲೈಜರ್ ಪರವಾನಗಿ ಅಮಾನತು

ರಸಗೊಬ್ಬರಕ್ಕೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿ ಪ್ರತಿಭಟನೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಯಿತು. ಪರಿಶೀಲನೆ ವೇಳೆ ಸೂರಜ್ ಫರ್ಟಿಲೈಜರ್ ಅಂಗಡಿಯಿಂದ ಜಿಎಸ್‌ಟಿ ಬಿಲ್ ನೀಡದಿರುವುದು ಪತ್ತೆಯಾಗಿದ್ದು, ಈ ಕಾರಣದಿಂದ ಅಂಗಡಿಯ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News