×
Ad

Yadgiri | ವಾಲ್ಮೀಕಿ ದೇವಸ್ಥಾನದ ಪಿಐಡಿ ಸಂಖ್ಯೆ ರದ್ದು ಆದೇಶ ಹಿಂಪಡೆಯಲು ಆಗ್ರಹಿಸಿ ಮನವಿ

Update: 2026-06-16 19:26 IST

ಯಾದಗಿರಿ: ತಾಲೂಕಿನ ಮಲ್ಹಾರ ಗ್ರಾಮದ ಗ್ರಾಮಠಾಣ ವ್ಯಾಪ್ತಿಯಲ್ಲಿರುವ ಸುಮಾರು 40 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನಕ್ಕೆ ಗ್ರಾಮ ಪಂಚಾಯಿತಿಯಿಂದ ನೀಡಲಾಗಿರುವ ಪಿಐಡಿ ಸಂಖ್ಯೆಯನ್ನು ರದ್ದುಪಡಿಸುವ ಆದೇಶವನ್ನು ಹಿಂಪಡೆದು ಖಾತೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ (ಸಿಇಒ) ಮಂಗಳವಾರ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಸಾಹೇಬಗೌಡ ನಾಯಕ, ದೇವಸ್ಥಾನವು ಹಲವು ದಶಕಗಳಿಂದ ಗ್ರಾಮಠಾಣ ಪ್ರದೇಶದಲ್ಲಿದ್ದು, ಭೂದಾಖಲೆ ಇಲಾಖೆಯ ಸರ್ವೆ, ಸ್ಕೆಚ್ ಹಾಗೂ ಪಂಚನಾಮೆ ಆಧಾರದ ಮೇಲೆ ಮಲ್ಹಾರ ಗ್ರಾಮ ಪಂಚಾಯಿತಿಯು ನಮೂನೆ-9 ಮತ್ತು ನಮೂನೆ-11ಎ ಜೊತೆಗೆ ಪಿಐಡಿ ಸಂಖ್ಯೆ 153001001500120123 ನೀಡಿದೆ ಎಂದು ತಿಳಿಸಿದರು.

ಭೂಮಾಪಕರು, ಎಡಿಎಲ್ಆರ್ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಡ್ರೋನ್ ತಂತ್ರಜ್ಞಾನದ ಮೂಲಕ ಭೂಮಾಪನ ನಡೆಸಿ, ದಾಖಲೆಗಳ ಪರಿಶೀಲನೆಯ ಬಳಿಕ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ನಿರ್ಣಯದ ಆಧಾರದ ಮೇಲೆ ಪಿಐಡಿ ಸಂಖ್ಯೆ ಮಂಜೂರು ಮಾಡಲಾಗಿದೆ ಎಂದು ಅವರು ವಿವರಿಸಿದರು.

ಆದರೆ, ಪಿಐಡಿ ಸಂಖ್ಯೆಯನ್ನು ರದ್ದುಪಡಿಸುವಂತೆ ತಾಲೂಕು ಪಂಚಾಯಿತಿಗೆ ಸೂಚಿಸಿರುವ ಕ್ರಮದಿಂದ ಗ್ರಾಮದಲ್ಲಿ ಅನಗತ್ಯ ಗೊಂದಲ ಮತ್ತು ಅಶಾಂತಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿತ ಆದೇಶವನ್ನು ತಕ್ಷಣ ಹಿಂಪಡೆದು ದೇವಸ್ಥಾನದ ಪಿಐಡಿ ಸಂಖ್ಯೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಪಿಐಡಿ ಸಂಖ್ಯೆ ರದ್ದುಪಡಿಸುವ ನಿರ್ಧಾರವನ್ನು ಹಿಂಪಡೆಯದಿದ್ದರೆ ಗ್ರಾಮಸ್ಥರೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ, ದೊಡ್ಡಯ್ಯ ನಾಯಕ ಹಳಗೇರಾ, ಶರಣಪ್ಪ ಜಾಕನಳ್ಳಿ, ಸಿದ್ದಪ್ಪ ಕೂಯಿಲೂರ, ಶೇಖಪ್ಪ ಮಲ್ಹಾರ, ಲಕ್ಷ್ಮಣ ಜೀನಕೇರಾ, ಸಿದ್ದಪ್ಪ ಕ್ಯಾಸಪನಳ್ಳಿ, ಕಿರಲಿಂಗ ಹತ್ತಿಕುಣಿ, ಬಸ್ಸು ಬೆಳಗುಂದಿ, ಮೊನೇಶ ಬೆಳಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News