ಯಾದಗಿರಿ | ಶಿಕ್ಷಣವೇ ದೊಡ್ಡ ಆಸ್ತಿಯಾಗಿದೆ : ಶಾಸಕ ಶರಣಗೌಡ ಕಂದಕೂರ
ಯಾದಗಿರಿ : ಮತಕ್ಷೇತ್ರದ ಜನತೆ ನನ್ನ ಮೇಲಿಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಗುರಮಠಕಲ್ ತಾಲೂಕಿನ ಯಂಪಾಡ್ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಮತ್ತು ಕೆಕೆಆರ್ ಡಿಬಿ ವತಿಯಿಂದ 40 ಲಕ್ಷ ರೂ. ಅನುದಾನದಲ್ಲಿ ರೈಸಿಂಗ್ ಪೈಪ್ ಲೈನ್ ಶಾಶ್ವತ ನೀರು ಸರಬರಾಜು ಕಾಮಗಾರಿ 1.90 ಕೋಟಿ ರೂ. ವೆಚ್ಛದಲ್ಲಿ ಯಂಪಾಡ ತಂಡಾದಿಂದ ಚಿಂತನಳ್ಳಿ ತಾಂಡಾವರೆಗೆ ರಸ್ತೆ ಸುಧಾರಣೆ ಕಾಮಗಾರಿ ಹಾಗೂ ಕೆ.ಹೊಸಳ್ಳಿ ಗ್ರಾಮದಲ್ಲಿ ಮೋಟ್ನಳ್ಳಿ ತಾಂಡಾದಿಂದ ಕೋಟಗೇರಾ ವರೆಗೆ ಆಯ್ದ ಭಾಗಗಳಲ್ಲಿ 2 ಕೋಟಿ ರೂ. ವೆಚ್ಛದಲ್ಲಿ ಸಿಸಿ ರಸ್ತೆ ಹಾಗೂ 25 ಲಕ್ಷ ರೂ ವೆಚ್ಛದಲ್ಲಿ ಚರಂಡಿ ಮತ್ತು ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ನನ್ನ ಅವಧಿಯಲ್ಲಿ ಗುರಮಠಕಲ್ ಮತಕ್ಷೇತ್ರ ಹಿಂದುಳಿದಿದೆ ಎಂಬ ಹಣೆಪಟ್ಟಿ ಕಳಚುವುದು ನನ್ನ ಮೊದಲ ಗುರಿಯಾಗಿದೆ. ನನ್ನ ತಂದೆ ನಾಗನಗೌಡ ಕಂದಕೂರ ಅವರು ಇದ್ದಾಗಿನಿಂದಲೂ ಈ ಭಾಗದ ಜನತೆ ನಮ್ಮನ್ನು ಪ್ರೀತಿಯಿಂದ ಕಂಡಿದ್ದಾರೆ. ಚುನಾವಣೆ ಬಂದಾಗ ಮಾತ್ರ ನಾನು ರಾಜಕೀಯ ಮಾಡುತ್ತೇನೆ. ನಂತರ ಏನಿದ್ದರೂ ಅಭಿವೃದ್ಧಿ ಚಿಂತನೆ ನನ್ನದು. ಈಗಾಗಲೇ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಾರ್ವಜನಿಕರ ಸಹಕಾರ ಅತೀಮುಖ್ಯ ಎಂದು ಪ್ರತಿಪಾದಿಸಿದರು.
ಪಾಲಕರು ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ. ನೀವು ಎಷ್ಟೇ ಆಸ್ತಿ ಸಂಪಾದನೆ ಮಾಡಿದರೂ ಅದು ಉಳಿಯುವುದಿಲ್ಲ. ಶಿಕ್ಷಣವೇ ದೊಡ್ಡ ಆಸ್ತಿಯಾಗಿದೆ. ಇನ್ನೂ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ದಯವಿಟ್ಟು ಮದುವೆ ಮಾಡಬೇಡಿ. 18 ವರ್ಷಕ್ಕಿಂದ ಮೊದಲೇ ಮದುವೆ ಮಾಡುವುದು ಕಾನೂನು ಬಾಹಿರ. ಈ ಬಗ್ಗೆ ಜಾಗೃತರಾಗಬೇಕಿದೆ ಎಂದು ಮನವಿ ಮಾಡಿದರು.
ಕ್ಷೇತ್ರದ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ 30-40 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ದಯವಿಟ್ಟು ಅಧಿಕಾರಿ, ಸಿಬ್ಬಂದಿಗಳಿಗೆ ಯಾರೂ ಲಂಚ ಕೊಡಬೇಡಿ. ಅಧಿಕಾರಿಗಳು ಸಹ ಕಾಲಮಿತಿಯೊಳಗೆ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ತಹಶೀಲ್ದಾರ್, ಶಿವರಾಜ, ಜಿ.ತಮ್ಮಣ್ಣ, ಶಂಭುಲಿಂಗಪ್ಪ ಅರುಣಿ, ನರಸಪ್ಪ ಕವಡೆ, ಮೋಟ್ನಳ್ಳಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ನಾಗರಡ್ಡಿ ಇದ್ದರು.
ಭಾಷಣಕ್ಕೆ ಬ್ರೇಕ್, ಕೆಲಸ ಜಾಸ್ತಿ :
ಯಾವುದೇ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಾನು ಹೆಚ್ಚು ಭಾಷಣ ಮಾಡದೆ, ಆ ಸಮಯವನ್ನು ಜನರ ಸಮಸ್ಯೆ ಆಲಿಸಲು ಮೀಸಲಿಡುವ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಗ್ರಾಮದ ಮಹಿಳೆಯರ ಸಮಸ್ಯೆ ಮತ್ತು ವೃದ್ದಾಪ್ಯ ವೇತನ ಸಿಗುವಂತಾಗಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೋಟ್ ನಳ್ಳಿ ಮತ್ತು ಕೋಟಗೇರಾ ಗ್ರಾಮದಲ್ಲಿ ಶಾಲಾ ಕಟ್ಟಡ ಮತ್ತು ಕೋಟಗೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕೋಣೆ ಉದ್ಘಾಟಿಸಲಾಗಿದೆ ಎಂದರು.
ಸಧ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಿಗೂ ಭೇಟಿ ಕೊಟ್ಟು ನಿಮ್ಮ ಅಹವಾಲು ಸ್ವೀಕರಿಸುವೆ ಎಂದರು.
ಗುರಮಠಕಲ್ ಕ್ಷೇತ್ರದ ಪ್ರತಿ ಗ್ರಾಮದಲ್ಲಿನ ವಾರ್ಡ್ ಗಳಲ್ಲಿ ಸೋಲಾರ್ ದೀಪ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭ್ಯುದಯಕ್ಕೆ ಮೊದಲ ಆದ್ಯತೆ ನೀಡಿದ್ದೇನೆ.
-ಶರಣಗೌಡ ಕಂದಕೂರ ಗುರುಮಠಕಲ್ ಶಾಸಕ