ಯಾದಗಿರಿ | ಫೆ.16ರಂದು ಉಚಿತ ಪ್ರವೇಶ, ಶಿಷ್ಯವೇತನ ಪರೀಕ್ಷೆ
ಯಾದಗಿರಿ : ಮುಂದಿನ ಶೈಕ್ಷಣಿಕ ವರ್ಷಕ್ಕೆ (2025-26 ನೇ) ಪ್ರಥಮ ವರ್ಷದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಬಯಸುವ ಪ್ರಸ್ತಕ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಮತ್ತು ಶಿಷ್ಯವೇತನ ಪರೀಕ್ಷೆ ಫೆ.16ರಂದು ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಡಿಯು ಸಂಸ್ಥೆಯ ಕಲಬುರಗಿ, ಸೇಡಂ, ಯಾದಗಿರಿ, ಶಹಾಪುರ, ದೋರನಹಳ್ಳಿ, ವಡಗೇರಾಗಳಲ್ಲಿ ಕಾಲೇಜುಗಳಲ್ಲಿ ಏಕಕಾಲಕ್ಕೆ ಫೆ.16ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಪ್ರವೇಶ ಪರೀಕ್ಷೆಗಾಗಿ ಮುಂಗಡವಾಗಿ ಹೆಸರು ನೊಂದಾಯಿಸಲು ಆಗದ ವಿದ್ಯಾರ್ಥಿಗಳು ಅಂದೇ ನೇರವಾಗಿ ಬಂದು ಹೆಸರು ಸೇರಿಸಿ ಪರೀಕ್ಷೆ ಬರೆಯಬಹುದು. ಎಸೆಸೆಲ್ಸಿ ಪಠ್ಯಾಧರಿತ ಆರು ವಿಷಯಗಳಿಗೆ ತಲಾ 15 ಪ್ರಶ್ನೆಗಳಿಗೆ ಉತ್ತರಿಸಬೇಕು. ಇದು 90 ಅಂಕಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.
ಈ ಪರೀಕ್ಷೆಯಲ್ಲಿ ಮತ್ತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆಂಟ್ ಮೇಲೆ ಪಿಯುಸಿ ಪ್ರಥಮ ವರ್ಷಕ್ಕೆ ಪ್ರವೇಶ ನೀಡಲಾಗುವುದು. ನಮ್ಮ ಆರು ಕಾಲೇಜುಗಳಲ್ಲಿ ತಲಾ ಹತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರದೇಶ ನೀಡಲಾಗುತ್ತಿದೆ. ಜೊತೆಗೆ ಉಳಿದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯತಿ ನೀಡಿ, ಶಿಷ್ಯವೇತನ ಕೊಡಿಸಲಾಗುವುದೆಂದು ಭೀಮಣ್ಣ ಮೇಟಿ ವಿವರಿಸಿದರು.
ಕಲ್ಯಾಣ ಕರ್ನಾಟಕ ಭಾಗದ ನಮ್ಮ ಪ್ರತಿಭಾವಂತ ವಿದ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ಹೆಚ್ಚಿಗೆ ಅಂಕ ಪಡೆದು ಬೇರೆ ಕಡೆಗೆ ಕಾಲೇಜು ಕಲಿಯಲು ಹೊಗುವುದು ತಪ್ಪಿಸಲು ಪ್ರತಿಭಾ ಪಲಾಯನ ಆಗಬಾರದೆಂಬ ಉತ್ತಮ ದೃಷ್ಟಿಕೋನದಿಂದ ಈ ವ್ಯವಸ್ಥೆ ಸಂಸ್ಥೆ ಮಾಡಿದೆ ಎಂದರು.
ನಮ್ಮ ಸಂಸ್ಥೆಯಲ್ಲಿ ಪಠ್ಯದ ಜೊತೆಗೆ ನಿಟ್, ಐಐಟಿ ಮತ್ತು ಸಿಇಟಿಗೆ ಪ್ರತ್ಯೇಕ ತರಬೇತಿ ನುರಿತ ಉಪನ್ಯಾಸಕರಿಂದ ನೀಡಲಾಗುತ್ತಿದೆ. ಶಹಾಪುರದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪಿಯು ವಿಜ್ಞಾನ ಕಾಲೇಜು ವಸತಿ ಸಹಿತ ಆರಂಭಿಸಲಾಗಿದೆ ಎಂದರು.
ಬಡ ಪ್ರತಿಭಾವಂತ ಮಕ್ಕಳಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಸಂಸ್ಥೆ ಸಹಾಯ ಮಾಡುತ್ತದೆ. ಈಗಾಗಲೇ ಇಂತಹ ಸಹಾಯ ಪಡೆದ ಅನೇಕರು ವೈದ್ಯರು, ಇಂಜಿನಿಯರಗಳಾಗಿದ್ದಾರೆಂದು ಭೀಮಣ್ಣ ಮೇಟಿ ಹೇಳಿದರು.
ಸಂಸ್ಥೆ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ, ಪ್ರಾಚಾರ್ಯ ಗೋಪಾಲಕೃಷ್ಣ ಇದ್ದರು.