ಯಾದಗಿರಿ | ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಯಾದಗಿರಿ : ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹವು ಮಕ್ಕಳಿಗೆ ಉನ್ನತ ಸಾಧನೆ ಮಾಡಲು ಶಕ್ತಿಯನ್ನು ನೀಡುತ್ತದೆ ಎಂದು ಅಂಜುಮಾನ್ ತಾರಕಿ ಉರ್ದು ಹಿಂದ್, ಅಖಿಲ ಭಾರತೀಯ ಉರ್ದು ಅಭಿವೃದ್ಧಿ ಸಂಘ ಯಾದಗಿರಿಯ ಅಧ್ಯಕ್ಷರಾದ ಡಾ.ರಫೀಕ್ ಸೌದಾಗರ್ ಅವರು ಅಭಿಪ್ರಾಯಪಟ್ಟರು
ಯಾದಗಿರಿ ನಗರದದಲ್ಲಿನ ಸೌದಾಗರ ಫಂಕ್ಷನ್ ಹಾಲ್ ನಲ್ಲಿ ನಡೆದ ಉರ್ದು ಮಾಧ್ಯಮದಲ್ಲಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
10ನೇ ತರಗತಿ ಪರೀಕ್ಷೆ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ನಿಮ್ಮ ಶೈಕ್ಷಣಿಕ ಜೀವನದಲ್ಲಿ ದೊಡ್ಡ ಮೈಲಿಗಲ್ಲು. ಈ ಯಶಸ್ಸು ನಿಮ್ಮ ಭವಿಷ್ಯದ ಕನಸುಗಳಿಗೆ ಒಂದು ದೃಢವಾದ ಅಡಿಪಾಯವನ್ನು ಹಾಕುತ್ತದೆ ಎಂದರು.
ಬೈತುಲ್ ಮಾಲ್ ಉಪಾಧ್ಯಕ್ಷ ವಹೀದ್ ಮಿಯಾನ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ನಿಮ್ಮನ್ನು ಕಾಯುತ್ತಿವೆ. ಯಾವಾಗಲೂ ನಿಮ್ಮ ಗುರಿಗಳನ್ನು ಎತ್ತರದಲ್ಲಿ ಇರಿಸಿಕೊಳ್ಳಿ, ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ ಎಂದರು
ನ್ಯಾಯವಾದಿ ಹಾಗೂ ರಬಿತ್ ಮಿಲ್ಲತ್ ಸಮಿತಿಯ ಅಧ್ಯಕ್ಷೆಯಾದ ಖಾಜಿ ಮುಹಮ್ಮದ್ ಇಮ್ತಿಯಾಜುದ್ದೀನ್ ಸಿದ್ದಿಕಿ ಅವರು ಮಾತನಾಡಿದರು.
ಈ ವೇಳೆ ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಜಿಲ್ಲಾ ಪ್ರಥಮ ಟಾಪರ್ ನೀಭಾ ತಬಸ್ಸುಮ್(572 ) ಮಹಾತ್ಮ ಗಾಂಧಿ ಉರ್ದು ಪ್ರೌಢಶಾಲೆ ಯಾದಗಿರಿ, ಜಿಲ್ಲಾ ದ್ವಿತೀಯ ಟಾಪರ್ ಸಾಬ್ರಾ ಬೇಗಂ(566) ಸರಕಾರಿ ಉರ್ದು ಪ್ರೌಢಶಾಲೆ ಸಗರ ತಾಲೂಕು ಶಹಾಪುರ, ಜಿಲ್ಲಾ ತೃತೀಯ ಟಾಪರ್ ಜೀನತ್ ಫಾತಿಮಾ(557) ಸರ್ಕಾರಿ ಉರ್ದು ಪ್ರೌಢಶಾಲೆ ಕೆಂಭಾವಿ ತಾಲೂಕು ಶೋರಾಪುರ ಜೊತೆಗೆ ತಾಲೂಕುಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.
ಮಮಮ್ಮದ್ ಬುರ್ಹಾನುದ್ದೀನ್ ಅಝರ್ ಸ್ವಾಗತಿಸಿದರು, ಸೈಯದ್ ಸಾಜಿದ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉರ್ದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರಿಫ್ ತಮ್ಮಾಪುರಿ, ಜಮಾತೆ ಇಸ್ಲಾಮಿ ಅಧ್ಯಕ್ಷ ಮೊಹಮ್ಮದ್ ಸಲಾವುದ್ದೀನ್ ಜಾಗೀದಾರ, ಲಿಟಲ್ ಏಂಜಲ್ ಶಾಲೆ ಅಧ್ಯಕ್ಷ ನುಝತ್ ಫಾತಿಮಾ, ರಬ್ಬಾನಿ ಬೇಗಂ, ರಿಫತ್ ಬೇಗಂ, ಇನ್ನಿತರು ಮುಖ್ಯ ಅತಿಥಿಗಳು ಉಪಸ್ಥಿತರಿದ್ದರು.