ಯಾದಗಿರಿ | ಅರ್ಹ ಪಡಿತರು ಆಹಾರ ಧಾನ್ಯ ಪಡೆಯುವಲ್ಲಿ ವಂಚಿತರಾಗದಿರಲಿ : ಮನೋಜ್ ಜೈನ್
ಯಾದಗಿರಿ : ಜಿಲ್ಲೆಯ ಅರ್ಹ ಪಡಿತರ ಚೀಟಿದಾರರು ಕಳೆದ ಆರು ತಿಂಗಳಿಂದ ಪಡಿತರ ಆಹಾರಧಾನ್ಯ ಪಡೆಯದೇ ಇರುವುದರ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಳೆದ ಆರು ತಿಂಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರರು ಪಡಿತರ ಆಹಾರಧಾನ್ಯ ಪಡೆದಿಲ್ಲ. ವಲಸೆ ಕಾರಣ ಸೇರಿದಂತೆ ಈ ಕುರಿತು ಪರಿಶೀಲನೆ ನಡೆಸಿ ಆಯಾ ನ್ಯಾಯ ಬೆಲೆ ಅಂಗಡಿ, ಗ್ರಾಮ ಪಂಚಾಯತ್ ವಾರು ಸಂಬಂಧಿಸಿದವರ ಪಟ್ಟಿ ಪ್ರಚಾರಪಡಿಸಿ, ಪಡಿತರ ಆಹಾರಧಾನ್ಯ ಪಡೆಯುವಂತೆ ಎಚ್ಚರಿಕೆ ನೀಡಬೇಕು.
ಪಡಿತರ ಪಡೆಯಲು ವಿಫಲವಾದಲ್ಲಿ ಅಂತಹವರ ರೇಷನ್ ಕಾರ್ಡ್ ಅಮಾನತ್ತು ಬಗ್ಗೆ ಹಾಗೂ ಅರ್ಹ ಪಡಿತರ ಚೀಟಿದಾರರು ಸಕಾಲಕ್ಕೆ ಆಹಾರಧಾನ್ಯ ಪಡೆಯುವ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಳಪೆ ಗುಣಮಟ್ಟ ಬೀಜ, ರಸಗೊಬ್ಬರ ಮಾರಾಟವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಕುರಿತು ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ ಅವರು, ಕೃಷಿ ಸಂಬಂಧಿತ ಅಂಗಡಿ ಮಾಲಕರು, ಡೀಲರ್ಸ್ ಹಾಗೂ ಸಂಘ ಸಂಸ್ಥೆಗಳಿಗೆ ಈ ಕುರಿತು ಎಚ್ಚರಿಕೆ ನೋಟಿಸ್ ರವಾನಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು. ನಿವೇಶನ ಇದ್ದವರಿಗೆ ಮನೆ ನಿರ್ಮಾಣಕ್ಕೆ ವಿವಿಧ ವಸತಿ ಯೋಜನೆಯಡಿ ನೀಡಲಾಗುವ ಅನುದಾನ ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಜಿಯೋ ಟ್ಯಾಗಿಂಗ್ ಕಡ್ಡಾಯವಾಗಿ ಸರಿಯಾಗಿ ಮಾಡುವಂತೆ ಸೂಚಿಸಿದ ಅವರು, ಲೋಪ ಕಂಡು ಬಂದಲ್ಲಿ ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಓ ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಸುರಕ್ಷಾ ಯೋಜನೆಯಡಿ ಪ್ರತಿಯೊಬ್ಬ ವೇತನದಾರರು, ಕುಟುಂಬಸ್ಥರು ನೋಂದಾಯಿಸಿಕೊಳ್ಳಬೇಕು. ಮಾಶಾಸನ, ವೇತನ, ನಿವೃತ್ತಿ, ಆರೋಗ್ಯ ಸಂಬಂಧಿತ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ವಿಷಯಗಳಲ್ಲಿ ವಿಳಂಬ ಧೋರಣೆ ಸಹಿಸಲಾಗುವುದಿಲ್ಲ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಮುಂಬರುವ ಪಕೃತಿ ವಿಕೋಪ, ಅತಿವೃಷ್ಟಿ, ನೆರೆ ಎದುರಿಸಲು ಹಾಗೂ ಕುಡಿಯುವ ನೀರು, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಜಿ.ಪಂ ಸಿಇಓ ಲವೀಶ್ ಒರಡಿಯಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.