×
Ad

ಯಾದಗಿರಿ | ಭಾರೀ ಮಳೆ: ಕೃಷ್ಣ, ಭೀಮಾ ನದಿಗಳ ಪ್ರವಾಹದಂತಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆಗೆ ಡಿಸಿ ಸೂಚನೆ

Update: 2025-05-27 20:12 IST

ಡಾ.ಸುಶೀಲಾ ಬಿ.

ಯಾದಗಿರಿ : ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಭೀಮಾ ಹಾಗೂ ಕೃಷ್ಣಾ ನದಿಗಳ ವ್ಯಾಪ್ತಿಯಲ್ಲಿ ಗುರುತಿಸಿದ ಜಿಲ್ಲೆಯ 80 ಗ್ರಾಮಗಳ ನಾಗರಿಕರಲ್ಲಿ ಸೂಕ್ತ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೃಷ್ಣ ಮತ್ತು ಭೀಮಾ ನದಿ ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.

ಮಹಾರಾಷ್ಟ್ರ ಹಾಗೂ ನದಿಗಳ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ, ಈ ಹಿಂದಿನ ವರ್ಷಗಳಲ್ಲಿ ಬಂದಿದ್ದ ಪ್ರವಾಹದ ಅನುಭವ ಆಧಾರದ ಮೇಲೆ ನದಿ ದಡಕ್ಕೆ ಬರುವ ಗರಿಷ್ಠ ನೀರಿನ ಮಟ್ಟದ ಬಗ್ಗೆ ಮುಂಚಿತವಾಗಿ ಗುರುತಿಸಬೇಕು. ಈಗಾಗಲೇ ನೇಮಿಸಿದ ನೋಡಲ್ ಅಧಿಕಾರಿಗಳು ತಂಡಗಳೊಂದಿಗೆ ಮುಂಬರುವ ಎರಡು ದಿನಗಳಲ್ಲಿ ಸಂಬಂಧಿಸಿದ ಗ್ರಾಮಗಳಿಗೆ ಭೇಟಿ ನೀಡಿ ನದಿಯಲ್ಲಿ ಸಾರ್ವಜನಿಕರು ಇಳಿಯದಂತೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕೃಷ್ಣ, ಭೀಮಾ ನದಿ ನೀರು, ಸೊನ್ನ ಹಾಗೂ ಸನ್ನತಿ ಬ್ಯಾರೇಜ್ ನ ನೀರಿನ ಕುರಿತು ಆಯಾ ಗ್ರಾಮ ಸಹಾಯಕರು, ಆಡಳಿತಾಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬೀಟ್ ಪೋಲಿಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಬಂದಿದ್ದ ಗರಿಷ್ಠ ಮಟ್ಟದ ನೀರಿನ ಕುರಿತು ಡಿ-ಮಾರ್ಕೇಶನ್ ಮಾಡಬೇಕು. ನಿರಂತರ 24 ಗಂಟೆಗಳ ಕಾಲ ನೀರಿನ ಹರಿವು ಪ್ರಮಾಣ ಕುರಿತು, ಬರುವ ಎಚ್ಚರಿಕೆಗಳ ಬಗ್ಗೆ ನಿಗಾ ವಹಿಸಬೇಕೆಂದು ಸೂಚನೆ ನೀಡಿದರು.

ಜನ, ಜಾನುವಾರುಗಳ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆಗಳ ಬಗ್ಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನುರಿತ ಈಜುಗಾರರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಹಿರಿಯರು, ಮಹಿಳೆಯರು, ಗರ್ಭಿಣಿಯರು, ಮಕ್ಕಳಿಗೆ ಅವಶ್ಯಕ ಔಷಧಿ ಇರುವಂತೆ ನೋಡಿಕೊಳ್ಳಬೇಕೆಂದರು.

ಭೀಮಾ ನದಿ ಪ್ರವಾಹದಿಂದ 35 ಗ್ರಾಮ ಹಾಗೂ ಕೃಷ್ಣಾ ನದಿ ಪ್ರವಾಹ ಬಂದಲ್ಲಿ 45 ಗ್ರಾಮಗಳು ಬಾಧಿತವಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನೀರು ಬಂದು ಪ್ರವಾಹದಂತಹ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ಇರುವುದರಿಂದ ಇಂದು ತುರ್ತು ಸಭೆ ನಡೆಸಿದ್ದು, ಅಧಿಕಾರಿಗಳು ಕೇಂದ್ರ ಸ್ಥಾನ ಬಿಡದೆ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು ಮಾತನಾಡಿ, ಅತಿವೃಷ್ಟಿ ಹಾಗೂ ನೆರೆಹಾವಳಿಯಿಂದಾಗುವ ಮನೆ ಹಾಗೂ ಬೆಳೆ ಹಾನಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು. ನೋಡಲ್ ಅಧಿಕಾರಿಗಳು, ವಾಲಂಟಿಯರ್ಸ್‌ಗಳು, ಈಜುಗಾರರ ಪಟ್ಟಿ ಇಟ್ಟುಕೊಳ್ಳಬೇಕು. ಬೀಳುವ ಹಂತದಲ್ಲಿರುವ ಮನೆಗಳು, ಶಾಲಾ, ಅಂಗನವಾಡಿ ಕಟ್ಟಡಗಳನ್ನು ಮುಂಚಿತವಾಗಿ ಗುರುತಿಸಬೇಕು. ಪ್ರವಾಹ ಮುಂಚೆ ಹಾಗೂ ಪ್ರವಾಹ ನಂತರದಲ್ಲಿ ಅವಶ್ಯಕ ಔಷಧಿ, ಆಂಟಿ ಸ್ನೇಕ್ ಬೈಟ್ ವ್ಯಾಕ್ಸಿನ್, ಔಷಧಿ ಹಾಗೂ ವೈದ್ಯರು ಇರುವಂತೆ ನೋಡಿಕೊಳ್ಳಬೇಕು. ನದಿ, ಪ್ರವಾಹದ ನೀರಿನಲ್ಲಿ ಸಾರ್ವಜನಿಕರು ಹೋಗದಂತೆ ನಾಗರಿಕರಿಗೆ ಪೋಲಿಸ್ ಇಲಾಖೆಯಿಂದ ಸೂಕ್ತ ಎಚ್ಚರಿಕೆ ನೀಡಬೇಕು. ಜಾನುವಾರುಗಳಿಗೆ ಒಣ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂ.ಸಿಇಓ ಲವೀಶ್ ಒರಡಿಯಾ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News