×
Ad

ಯಾದಗಿರಿ | ದಲಿತ ನೌಕರರಿಗೆ ಕಿರಕುಳ ನೀಡುವವರ ಮೇಲೆ ಕ್ರಮ ಕೈಗೊಳ್ಳಿ : ಮಲ್ಲಿಕಾರ್ಜುನ ಕ್ರಾಂತಿ

Update: 2025-05-21 18:14 IST

ಸುರಪುರ : ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ದಲಿತ ಸಮುದಾಯದ ನೌಕರರಿಗೆ ಅನಗತ್ಯವಾಗಿ ಕೆಲ ಕಡೆಗಳಲ್ಲಿ ಕಿರುಕುಳ ನೀಡಲಾಗುತ್ತಿದ್ದು, ಅಂತವರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.

ಸಂಘಟನೆಯಿಂದ ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಶಹಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ.ಪದ್ಮಾನಂದ ಗಾಯಕವಾಡ ಅವರು ಉತ್ತಮವಾದ ಆಡಳಿತ ನಡೆಸಿ ಆಸ್ಪತ್ರೆಯಲ್ಲಿ ಅನೇಕ ಸೌಲಭ್ಯಗಳನ್ನು ರೋಗಿಗಳಿಗೆ ದೊರೆಯಲು ಕಾರಣರಾಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿರುವ ಕೆಲ ವೈದ್ಯರು ಹಾಗೂ ಸಿಬ್ಬಂದಿಗಳು ಇದನ್ನು ಸಹಿಸದೆ ಸಂಘ-ಸಂಸ್ಥೆಗಳ ಮುಖಂಡರಿಗೆ ಇಲ್ಲಸಲ್ಲದ ಮಾಹಿತಿ ನೀಡಿ ವೈದ್ಯಾಧಿಕಾರಿ ಡಾ.ಪದ್ಮಾನಂದ ಅವರಿಗೆ ಕಿರಕುಳ ನೀಡುವಂತೆ ಮಾಡಿದ್ದಾರೆ. ಅದರಂತೆ ಕೆಲ ಸಂಘಟನೆಗಳ ಮುಖಂಡರು ಡಾ.ಪದ್ಮಾನಂದ ಗಾಯಕವಾಡ ಅವರ ಮೇಲೆ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಅಂತಹ ಸಂಘ ಸಂಸ್ಥೆಗಳ ಮುಖಂಡರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯಲ್ಲಿನ ಎಲ್ಲಾ ಇಲಾಖೆಗಳಲ್ಲಿರುವ ದಲಿತ ಸಮುದಾಯದ ನೌಕರರಿಗೆ ಕಿರಕುಳ ನೀಡುವವರ ಮೇಲೆ ಕ್ರಮ ಕೈಗೊಳ್ಳುವ ಜೊತೆಗೆ ಎಲ್ಲ ದಲಿತ ನೌಕರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕುರಕುಂದಿ, ತಾಲೂಕು ಸಂಚಾಲಕ ಬಸವರಾಜ ದೊಡ್ಮನಿ, ಚಂದ್ರಶೇಖರ ಹಸನಾಪುರ, ಮಾನು ಗುರಿಕಾರ,ಮೂರ್ತಿ ಬೊಮ್ಮನಹಳ್ಳಿ, ರಾಮಣ್ಣ ಶೆಳ್ಳಗಿ, ವೀರಭದ್ರಪ್ಪ ತಳವಾರಗೇರಾ, ಖಾಜಾಹುಸೇಣ ಗುಡಗುಂಟಿ, ರವಿಚಂದ್ರ, ಬಸವರಾಜ, ಮಹೇಶ ಯಾದಗಿರಿ, ಜೆಟ್ಟೆಪ್ಪ ನಾಗರಾಳ ಸೇರಿದಂತೆ ಅನೇಕರು ಭಾಗವಹಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News