×
Ad

ಪ್ರವಾಹದ ವಿರುದ್ಧ ಈಜುವಾಗ ?

Update: 2025-12-30 12:18 IST

ದೀಪಾ ಹಿರೇಗುತ್ತಿ

‘ಪರಿಮಳವಿಲ್ಲದ ಹೂಗಳಿಗೆ’ ತಮ್ಮ ಪದಗಳಲ್ಲಿ ಪರಿಮಳವನ್ನು ತುಂಬಿಸುವ ದೀಪಾ ಹಿರೇಗುತ್ತಿ ಎಲ್ಲ ‘ಸರಹದ್ದು’ಗಳನ್ನು ಮೀರಿ ಬರೆಯುತ್ತಿರುವವರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿರೇಗುತ್ತಿ ಇವರ ಊರು. ವೃತ್ತಿಯಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ. ‘ಪರಿಮಳವಿಲ್ಲದ ಹೂವುಗಳ ಮಧ್ಯೆ’ ಇವರ ಪ್ರಕಟಿತ ಕವನ ಸಂಕಲನ. ‘ಸರಹದ್ದು’ ಕಥಾ ಸಂಕಲನ. ‘ನಾನು, ನೀವು ಮತ್ತು’, ‘ಫೀನಿಕ್ಸ್’, ‘ಕಿತ್ತೊಗೆಯೋಣ ಕಾಣದ ತಡೆಗೋಡೆಗಳನು’್ನ, ‘ಸೋಲೆಂಬ ಗೆಲುವು’, ‘ಬ್ರಾಂಡ್ ಬಿಲ್ಡರ್ಸ್’, ‘ಅಪೂರ್ವ ರಾಜಕಾರಣಿ ಎಚ್. ಜಿ. ಗೋವಿಂದಗೌಡ’, ‘ನೋ ಎಕ್ಸ್‌ಕ್ಯೂಸ್ ಪ್ಲೀಸ್’ ಇವು ಇತರ ಪುಸ್ತಕಗಳು. ತಮ್ಮ ಕೃತಿಗಳಿಗಾಗಿ ಗೀತಾ ದೇಸಾಯಿ ದತ್ತಿ ಪ್ರಶಸ್ತಿ, ಧಾರವಾಡದ ಬೇಂದ್ರೆ ಪ್ರತಿಷ್ಠಾನದ ಬೇಂದ್ರೆ ಪುಸ್ತಕ ಬಹುಮಾನ, ನೀಲಗಂಗಾ ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮನರಂಜನಾ ಉದ್ಯಮದೊಳಗಿನ ಮಹಿಳಾ ವಿರೋಧಿ ರಾಜಕಾರಣದ ಕುರಿತಂತೆ ಇಲ್ಲಿ ಅವರು ಬೆಳಕು ಚೆಲ್ಲಿದ್ದಾರೆ.

ಕೆಲವು ತಿಂಗಳ ಹಿಂದೆ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಚಲನಚಿತ್ರ ‘ಸ್ಪಿರಿಟ್’ನ ಚಿತ್ರೀಕರಣಕ್ಕೆ ಎಂಟು ಗಂಟೆಯ ಕೆಲಸದ ದಿನಗಳ ಬೇಡಿಕೆ ಇಟ್ಟಿದ್ದು ಮತ್ತು ನಿರ್ದೇಶಕರು ಅದನ್ನು ಒಪ್ಪದೇ ದೀಪಿಕಾ ಆ ಚಿತ್ರದಿಂದ ಹೊರನಡೆದದ್ದೂ ಬಹಳ ದೊಡ್ಡ ಸುದ್ದಿಯಾಗಿತ್ತು. ಜತೆಗೆ ನಿರ್ದೇಶಕ ಸಂದೀಪ್ ರೆಡ್ಡಿ ದೀಪಿಕಾರನ್ನು ವೃತ್ತಿಪರತೆ ಇಲ್ಲದ ನಟಿ ಎಂದು ಕರೆದಿದ್ದು ಕೂಡ ತೀವ್ರತರವಾದ ಚರ್ಚೆಗೆ ಗ್ರಾಸವಾಗಿತ್ತು. ನಾಯಕ ನಟರು ಅದೆಷ್ಟೋ ವರ್ಷಗಳಿಂದ ಎಂಟುಗಂಟೆಯ ಕೆಲಸ ಮಾತ್ರ ಮಾಡಿದರೂ ಅದರ ಬಗ್ಗೆ ತುಟಿ ಪಿಟಕ್ಕೆನ್ನದೇ ದೀಪಿಕಾ ತಾಯ್ತನದ ಜವಾಬ್ದಾರಿ ನಿರ್ವಹಿಸಲು ಈ ಪ್ರಶ್ನೆ ಎತ್ತಿದರೂ ಅದನ್ನು ಟ್ರೋಲ್ ಮಾಡುವ ಮೂಲಕ, ದೀಪಿಕಾ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಹರಿಬಿಡುವ ಮೂಲಕ ನಮ್ಮ ಮನರಂಜನೆಯ ಉದ್ಯಮ ತಾನು ಎಷ್ಟರಮಟ್ಟಿಗೆ ಮಹಿಳಾವಿರೋಧಿ ಆಗಿದೆ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ.
ದಿನಕ್ಕೆ ಎಂಟು ಗಂಟೆಗಿಂತ ಹೆಚ್ಚು ಕೆಲಸ ಮಾಡುವ ಸಂಸ್ಕೃತಿಯನ್ನು ಬಹಳ ಬುದ್ಧಿವಂತಿಕೆಯಿಂದ ವೈಭವೀಕರಿಸಿದ್ದೂ ಅಲ್ಲದೇ ಅದನ್ನು ಸಾಮಾನ್ಯ ಪ್ರಕ್ರಿಯೆಯಾಗಿಸುವ ಹುನ್ನಾರಗಳು ಬಹು ಹಿಂದಿನಿಂದಲೂ ನಡೆಯುತ್ತಲೇ ಬಂದಿವೆ. ಎಪ್ಪತ್ತು ಗಂಟೆ, ತೊಂಭತ್ತು ಗಂಟೆ ಕೆಲಸ ಮಾಡಿ, ರವಿವಾರವೂ ರಜೆ ಪಡೆಯಬೇಡಿ ಎಂದು ಉದ್ಯಮಪತಿಗಳು ಅತ್ಯಂತ ಸಹಜವಾಗಿ ಹೇಳಿಬಿಡುತ್ತಾರೆ. ಆದರೆ ಇತ್ತೀಚೆಗೆ ಸಿನೆಮಾ ಅಂಗಳದಿಂದ ಆಸ್ಪತ್ರೆಯ ವಾರ್ಡುಗಳವರೆಗೆ ಜಾಗೃತಿ ಮೂಡುತ್ತಿದೆ. ಎಂಟು ಗಂಟೆಯ ಆಂದೋಲನ ಶುರುವಾಗಿದ್ದು ಬ್ರಿಟನ್‌ನ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲೇ ಆದರೂ ಅದೀಗ ಬಿರುಸಾಗಿದೆ. ವೈದ್ಯಕೀಯ ಸಿಬ್ಬಂದಿ, ಕಾರ್ಪೊರೇಟ್ ಉದ್ಯೋಗಿಗಳು, ಕಾರ್ಖಾನೆಗಳಲ್ಲಿ ಯಂತ್ರಮಾನವರೇ ಆಗಿರುವ ಕಾರ್ಮಿಕರು ಎಲ್ಲರಲ್ಲೂ ಎಂಟು ಗಂಟೆಯ ದಿನ ಎನ್ನುವುದು ಬೇಡಿಕೆಯಲ್ಲ ಹಕ್ಕು ಎಂಬ ಜಾಗೃತಿ ಹುಟ್ಟುತ್ತಿದೆ.

ಸರಿ, ದೀಪಿಕಾರ ಬೇಡಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಏರ್ಪಟ್ಟಿದ್ದನ್ನು ನಾವೆಲ್ಲ ನೋಡಿದ್ದೇವೆ. ಎಂಟು ಗಂಟೆಯ ದಿನವೆಂದರೆ ಊಟ, ಮೇಕಪ್ಪು ಇತ್ಯಾದಿ ಕಳೆದು ಶೂಟಿಂಗಿಗೆ ಸಿಗುವುದು ಆರು ಗಂಟೆ ಮಾತ್ರ. ಮಾಮೂಲಿಯಾಗಿ ಬಾಲಿವುಡ್ ಸಿನೆಮಾಗಳ ಚಿತ್ರೀಕರಣದ ಅವಧಿ ದಿನಕ್ಕೆ ಕನಿಷ್ಠ ಹನ್ನೆರಡು ಗಂಟೆಯಿಂದ ಹದಿನಾಲ್ಕು ಗಂಟೆಗಳವರೆಗೆ ಇರುತ್ತದೆ. ಹೀಗಿರುವಾಗ ತಾರೆಯೊಬ್ಬಳು ಕೇವಲ ಎಂಟುಗಂಟೆಯ ಶೂಟಿಂಗ್ ಅವಧಿ ಕೇಳುವುದೆಂದರೇನು? ತನ್ನ ವೈಯಕ್ತಿಕ ಬದುಕನ್ನೂ ವೃತ್ತಿಪರ ಬದುಕನ್ನೂ ಬೇರೆಬೇರೆಯಾಗಿ ಇಟ್ಟುಕೊಳ್ಳಬಾರದೇ? ನಿರ್ಮಾಪಕರಿಗೇನು ಹಣ ಆಕಾಶದಿಂದ ಉದುರುತ್ತದೆಯೇ? ಅಲ್ಲ, ಇಪ್ಪತ್ತು ಕೋಟಿ ರೂ. ಸಂಭಾವನೆ ಕೇಳಿದ್ದೂ ಅಲ್ಲದೇ ಸಿನೆಮಾದ ಲಾಭದಲ್ಲಿ ಬೇರೆ ಪಾಲು ಬೇಕಂತೆ! ಅಲ್ಲ, ನಟರಾದರೆ ಒಂದು ಲೆಕ್ಕವಪ್ಪಾ, ಅವರ ಹೆಸರಿನಿಂದಲೇ ಸಿನೆಮಾ ಓಡುವುದು! ನಟಿಯರೇನು, ದೀಪಿಕಾ ಇಲ್ಲದಿದ್ದರೆ ಪ್ರಿಯಾಂಕ, ಪ್ರಿಯಾಂಕ ಇಲ್ಲದಿದ್ದರೆ ಆಲಿಯಾ! ಅಷ್ಟೇ . ಇಂತಹುದ್ದೇ ಮಾತುಗಳು, ಪ್ರತಿಕ್ರಿಯೆಗಳು! ಇದು ನಮ್ಮ ಚಿತ್ರರಂಗದ ಸದ್ಯದ ಪರಿಸ್ಥಿತಿ.

ದೀಪಿಕಾ ಕಳೆದ ಎರಡು ದಶಕಗಳಿಂದ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿರುವ ಜನಪ್ರಿಯ ತಾರೆ. ವೃತ್ತಿಪರತೆಗೆ ಹೆಸರಾಗಿರುವ ಕಲಾವಿದೆ. ಮಗುವಿನ ಜತೆ ಅನಿವಾರ್ಯವಾಗಿ ತಾಯಿ ಇರಲೇಬೇಕಾದ ನಾಜೂಕಿನ ಸಮಯವಾಗಿರುವುದರಿಂದ ಕೆಲವು ಶರತ್ತುಗಳನ್ನಿಟ್ಟರು. ದೀಪಿಕಾ ಕೇಳಿದ್ದು ಸೂಕ್ತವೇ ಆಗಿದೆ, ಅವರ ಬೇಡಿಕೆಯನ್ನು ಒಪ್ಪುವುದು ಬಿಡುವುದು ಬೇರೆ, ಆದರೆ ಎಳೆಯ ಮಗುವಿನ ತಾಯಿಯೊಬ್ಬಳು ತನ್ನ ಸಮಯವನ್ನು ಸರಿದೂಗಿಸುವುದಕ್ಕೋಸ್ಕರ ಬೇಡಿಕೆಗಳನ್ನಿಡುವುದು ಅಪರಾಧವಲ್ಲ, ಅದು ವೃತ್ತಿಪರತೆಯ ವಿರುದ್ಧವೂ ಅಲ್ಲ ಎಂದಿರುವ ಅಭಿಮಾನಿಯೊಬ್ಬರ ಅಭಿಪ್ರಾಯ ಬಹಳ ಜನರದ್ದು ಕೂಡ. ಈಗ ಹನ್ನೆರಡು ಗಂಟೆಯ ಶೂಟಿಂಗ್ ಸಾಮಾನ್ಯ ಎಂಬಂತಾಗಿದೆ. ಆದರೆ ಅದು ಆರೋಗ್ಯಕರವಾದುದಲ್ಲ. ನಟನಟಿಯರ ಮೇಲೆ ಅಪಾರ ಒತ್ತಡ ಉಂಟುಮಾಡುವ ಶಿಫ್ಟ್‌ಗಳಿವು. ನಟನೆಯಲ್ಲಿನ ನೈಪುಣ್ಯತೆ ಕೂಡ ಒಳ್ಳೆಯ ಮನಸ್ಥಿತಿ ಮತ್ತು ವಿಶ್ರಾಂತಿಯಿಂದ ಬರುತ್ತದೆ. ಯಂತ್ರಗಳಂತೆ ಹಗಲೂ ರಾತ್ರಿ ಶೂಟಿಂಗ್ ಮಾಡಿದರೆ ತಾರೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದಗೆಡುತ್ತದೆ. ಎಂಟು ಗಂಟೆಗಿಂತ ಜಾಸ್ತಿ ಕೆಲಸ ಮಾಡುವುದರಿಂದ ಏಕಾಗ್ರತೆ, ಸೃಜನಶೀಲತೆ ಕುಗ್ಗುತ್ತವೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆಗಳು ಹೇಳುತ್ತವೆ. ಹಾಗಾದರೆ ಜನರು ಹೇಳುವಂತೆ ದುಡ್ಡು ಹಾಕಿದ ನಿರ್ಮಾಪಕ ಕಡಿಮೆ ಕೆಲಸದ ಅವಧಿಯಿಂದ ನಷ್ಟಕ್ಕೊಳಗಾಗುವುದಿಲ್ಲವೇ? ಹಣವನ್ನು ನೀರಿನಂತೆ ಸುರಿಯುತ್ತಿರುವಾಗ ಒಂದೊಂದು ಗಂಟೆಗೂ ಲಕ್ಷಗಟ್ಟಲೆ ಖರ್ಚಾಗುವಾಗ ನಿರ್ಮಾಪಕ ಯೋಚನೆ ಮಾಡಬೇಡವೇ? ಅದರಲ್ಲೂ ನಮ್ಮ ನಟನಟಿಯರ ಖರ್ಚೋ, ಅವರ ಸಕಲ ಸೌಲಭ್ಯಗಳಿರುವ ವ್ಯಾನಿಟಿ ವ್ಯಾನೋ! ಅವರ ನಖರಾಗಳೋ! ಸಾಧಾರಣ ನಿರ್ಮಾಪಕನಿಗೆ ಒಂದು ಸಿನೆಮಾ ಕೂಡ ಮಾಡಲು ಸಾಧ್ಯವಿಲ್ಲ.


 



ಇನ್ನು ನಿರ್ದೇಶಕನಿಗೂ ಕೂಡ ಎಲ್ಲ ನಟನಟಿಯರ ಕಾಲ್ ಶೀಟ್‌ಗೆ ಅನುಗುಣವಾಗಿ ಶೂಟಿಂಗ್ ಮಾಡಬೇಕಾಗುತ್ತದೆ. ಒಬ್ಬರ ಗೈರುಹಾಜರಿ ಇಡೀ ದಿನದ ಶೂಟಿಂಗನ್ನೇ ಮುಂದೂಡುವಂತೆ ಮಾಡಬಹುದು. ಹವಾಮಾನ ಮತ್ತಿತರ ವೈಪರೀತ್ಯಗಳಿಂದ ಚಿತ್ರೀಕರಣ ವಿಳಂಬವಾಗಬಹುದು. ಐವತ್ತು ದಿನದ ಚಿತ್ರೀಕರಣ ಎಪ್ಪತ್ತು ದಿನಗಳಾಗಬಹುದು. ಹೀಗೆ ನೋಡಿದಾಗ ಹನ್ನೆರಡು ಗಂಟೆಯ ಶೂಟಿಂಗನ್ನು ಆರು ಗಂಟೆಗೆ ಇಳಿಸುವುದು ಹೇಗೆನ್ನುವುದು ಪರಿಹಾರವಿಲ್ಲದಂತಾಗುವ ಸಮಸ್ಯೆ ಎಂದೆನಿಸಬಹುದು. ಆದರೆ ನಿರ್ಮಾಪಕ, ನಿರ್ದೇಶಕರು ಸರಿಯಾದ ಯೋಜನೆ ಹಾಕಿಕೊಂಡರೆ ಯಾರ ಸಮಯವೂ ವ್ಯರ್ಥವಾಗದಂತೆ ಚಿತ್ರೀಕರಣ ನಡೆಸಬಹುದು. ರಾತ್ರಿ ನಡೆಸಲೇಬೇಕಾದ ಶೂಟಿಂಗ್ ಬಿಟ್ಟು ಬೇರೆ ಶೂಟಿಂಗ್ ಬೇಗನೇ ಮುಗಿಯುವಂತೆ ಮಾಡಬಹುದು. ಚಿಕ್ಕ ಮಗುವಿರುವ ತಾಯಿಯ ಶೂಟಿಂಗ್ ಭಾಗವನ್ನು ನಿರ್ದಿಷ್ಟ ಸಮಯದೊಳಗೆ ಮುಗಿಸಿ ಆಕೆಯ ತಾಯ್ತನದ ಜವಾಬ್ದಾರಿಯನ್ನು ಪೂರೈಸಲು ಅನುವು ಮಾಡಿ ಕೊಡಬಹುದು. ಕೆಲವು ಚಿತ್ರಗಳ ಚಿತ್ರೀಕರಣವಂತೂ ಅರ್ಧಭಾಗ ಹೀರೋ ಬರುವುದನ್ನು ಕಾಯುತ್ತಲೇ ಮುಗಿದು ಹೋಗುತ್ತದೆ. ಕೆಲವು ನಟರು ತಡವಾಗಿ ಬರುವುದನ್ನೇ ರೂಢಿಯಾಗಿಸಿಕೊಂಡು ಎಲ್ಲರ ಸಮಯ ವ್ಯರ್ಥ ಮಾಡಿದರೂ ಅವರಿಗಿರುವ ಹೀರೋಗಿರಿಯಿಂದ ಅವರ ವಿರುದ್ಧ ಒಂದೇ ಒಂದು ಮಾತಾಡಲೂ ಸಿನಿರಂಗದವರು ಹಿಂಜರಿಯುತ್ತಾರೆ. ಅವರ ವಿರುದ್ಧ ದೂರುಗಳೇ ಇಲ್ಲ.

ಒಂದೇ ಒಂದು ಅಸಹನೆಯ ಪದವೂ ಇಲ್ಲ. ಎಷ್ಟೆಂದರೂ ನಾಯಕ ನಟರು, ನಿರ್ಮಾಪಕನಿಗೆ ಹಾಕಿದ ದುಡ್ಡನ್ನು ವಾಪಸ್ ತಂದುಕೊಡುವ ಸಾಮರ್ಥ್ಯವಿರುವವರು. ಅವರ ವಿರುದ್ಧ ಮಾತಾಡಿ ಬದುಕಿದವರುಂಟೇ? ಅಭಿಮಾನಿಗಳಿಗೂ ಅಷ್ಟೇ, ಹೀರೋಗಳು ಮಾಡಿದ್ದೆಲ್ಲ ಚೆಂದವೇ. ಬಹಳಷ್ಟು ನಾಯಕ ನಟರು ವಾರದ ಕೊನೆಯ ಎರಡು ದಿನ ಕೆಲಸ ಮಾಡುವುದಿಲ್ಲ. ಆಗ ಅವರನ್ನು ಹೊಂದಾಣಿಕೆ ಇಲ್ಲದವರೆಂದು ಯಾರೂ ಹೇಳಿಲ್ಲ. ಈ ಓಪನ್ ಸೀಕ್ರೆಟ್ ಯಾರಿಗೂ ಗೊತ್ತಿರದ ಸಂಗತಿಯೇನಲ್ಲ ಬಿಡಿ. ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಇವೆ. ನಟಿ ಕೊಂಕಣಾ ಸೇನ್ ಶರ್ಮಾ ಪ್ರಕಾರ ಎಷ್ಟೇ ಕ್ರಮಬದ್ಧ ಯೋಜನೆ ಹಾಕಿಕೊಂಡರೂ ಚಿತ್ರೀಕರಣದಲ್ಲಿ ಎಡವಟ್ಟುಗಳು ಆಗಿಯೇ ಆಗುತ್ತವೆ. ಹೀಗಾಗಿ ನಟನಟಿಯರು ಶೂಟಿಂಗ್ ಸಂದರ್ಭದಲ್ಲಿ ಭಾವನಾತ್ಮಕವಾಗಿ ತಟಸ್ಥರಾಗಿರಬೇಕು ಎನ್ನುತ್ತಾರಾಕೆ. ಹಿರಿಯ ನಟಿ ಹಿಮಾನಿ ಶಿವಪುರಿ, ಬಿಡುವೇ ಇಲ್ಲದೇ ಕುಟುಂಬವನ್ನು ಬಿಟ್ಟು ಸತತವಾಗಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡು ಮಹಿಳೆಯರಿಗೆ ಕೆಲಸ ಮತ್ತು ಮನೆಯನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವುದರ ಸವಾಲು ಪುರುಷರಿಗಿಂತ ಹೆಚ್ಚೇ ಇರುವುದನ್ನು ಹೇಳುತ್ತಾರೆ.

ದೀಪಿಕಾ ಪಡುಕೋಣೆ ಕೇಳುತ್ತಿರುವುದು ಕೌಟುಂಬಿಕವಾಗಿ ಸಮಯ ಕಳೆಯಲು ಅವಕಾಶ. ಕೆಲಸ ಮತ್ತು ವೈಯಕ್ತಿಕ ಬದುಕನ್ನು ಸಂಭಾಳಿಸಲು ಸಮಯ. ಅದರಲ್ಲಿ ತಪ್ಪೇನಿದೆ? ಈ ಹಿಂದೆ ರಾಣಿ ಮುಖರ್ಜಿ ಮತ್ತು ಕಾಜೋಲ್ ಈ ರೀತಿ ನಿಗದಿತ ಶಿಫ್ಟ್ ಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ನಿರ್ದೇಶಕ ಸಿದ್ಧಾರ್ಥ ಮಲ್ಹೋತ್ರಾ ದೀಪಿಕಾ ಪರವಾಗಿ ಮಾತಾಡಿದ್ದು ಯೋಗ್ಯವಾಗಿಯೇ ಇದೆ. ಮತ್ತೊಬ್ಬ ಖ್ಯಾತ ನಿರ್ದೇಶಕ ಅನುರಾಗ್ ಬಾಸು ಹೇಳುತ್ತಾರೆ; ‘ನಾನೂ ಒಬ್ಬ ನಿರ್ದೇಶಕ. ಮಗುವಿನ ತಾಯಿ ಮಾತ್ರವಲ್ಲ, ಯಾವ ನಟನಟಿಯರಿಗೂ ಕೂಡ ಹನ್ನೆರಡು ಗಂಟೆಗಳ ಚಿತ್ರೀಕರಣ ಖುಶಿ ಕೊಡುವುದಿಲ್ಲ. ನಟನಟಿಯರು ಖುಶಿಯಾಗಿದ್ದರೆ ಸಿನೆಮಾ ಕೂಡ ಚೆನ್ನಾಗಿ ಬರುತ್ತದೆಂಬ ಅಭಿಪ್ರಾಯ ನನ್ನದು.’ ಇವರು ಮಾತ್ರವಲ್ಲದೆ, ಸೋನಾಕ್ಷಿ ಸಿನ್ಹಾ, ನೇಹಾ ಧೂಪಿಯಾ, ವಿಕ್ರಾಂತ್ ಮಾಸಿ, ಸೋಹಾ ಅಲಿ ಖಾನ್ ಮುಂತಾದ ತಾರೆಯರು ದೀಪಿಕಾಗೆ ಬೆಂಬಲ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಲವ್ ಜಿಹಾದ್

ಬೆಚ್ಚು