ಬಹುದಕ ಕುಟೀಚಕ
ಡಾ. ರಹಮತ್ ತರೀಕೆರೆ
ಸೂಫಿ ಚಿಂತನೆಗಳ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತಾ ದೇಶಾದ್ಯಂತ, ವಿಶ್ವಾದ್ಯಂತ ನಡೆದಾಡುತ್ತಿರುವವರು, ಆ ಪ್ರವಾಸದಲ್ಲಿ ಕಂಡುಂಡ ಬದುಕನ್ನು ಕಟ್ಟಿ ಕೊಡುತ್ತಾ ಬಂದವರು ರಹಮತ್ ತರೀಕೆರೆ. ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಇವರ ಚಿಂತನೆಗಳೆಂದರೆ ‘ಮರದೊಳಗಿನ ಕಿಚ್ಚು’. ತೀಕ್ಷ್ಣ ಒಳನೋಟಗಳ ವಿಮರ್ಶಾ ಬರಹಗಳಿಗೆ ಇವರು ಖ್ಯಾತರು. ಅಂಡಮಾನ್ ಕನಸು, ಪ್ರತಿಸಂಸ್ಕೃತಿ, ಮರದೊಳಗಿನ ಕಿಚ್ಚು, ಸಂಸ್ಕೃತಿ ಚಿಂತನೆ, ಕತ್ತಿಯಂಚಿನ ದಾರಿ, ಚಿಂತನೆಯ ಪಾಡು, ಕರ್ನಾಟಕದ ಸೂಫಿಗಳು ಹಾಗೂ ಕರ್ನಾಟಕದ ನಾಥ ಪಂಥ ಇವರ ಪ್ರಮುಖ ಕೃತಿಗಳು. ತಮ್ಮ ಕೃತಿಗಳಿಗಾಗಿ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಗೌರವವೂ ಇವರಿಗೆ ಸಂದಿದೆ. ಇಲ್ಲಿ ‘ಬಹೂದಕ ಕುಟೀಚಕ’ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಭಾರತದ ಅರಿವಿನ ಬೇರೆ ಬೇರೆ ಮಗ್ಗುಲುಗಳನ್ನು ಪರಿಚಯಿಸಿದ್ದಾರೆ.
ಹಂಪಿ ವಿಶ್ವವಿದ್ಯಾಲಯವನ್ನು ಸೇರಿದ ಬಳಿಕ, ಕರ್ನಾಟಕದ ಭಾಷೆ ಸಾಹಿತ್ಯ ಧರ್ಮ ಚಿಂತನೆ ಸಂಸ್ಕೃತಿಗಳ ಮೇಲೆ ಗಾಢ ಪ್ರಭಾವ ಬೀರಿರುವ ದಾರ್ಶನಿಕ ಪಂಥಗಳ ಮೇಲೆ ಅಧ್ಯಯನ ಮಾಡಲು ನಿರ್ಧರಿಸಿದೆ. ಸೂಫಿ ನಾಥ ಶಾಕ್ತ ಅವಧೂತ ಆರೂಢ ದಮ್ಮ ಪಂಥಗಳ ಮೇಲೆ ಕೆಲಸ ತುಸು ಮಾಡಿದೆ. ಅದೊಂದು ಮೂರು ದಶಕಗಳ ಯಾನ. ಈ ಯಾನದಲ್ಲಿ ನೂರಾರು ಜೋಗಿ ಪೀರ್ ಮುರೀದ್ ಫಕೀರ ಸಂತ ಸಾಧಕ ಉಪಾಸಕರನ್ನು ಭೇಟಿಯಾಗುವ ಅವಕಾಶ ಲಭಿಸಿತು. ಈ ತಿರುಗಾಟ ಮತ್ತು ಭೇಟಿಗಳು ನನ್ನ ಆಲೋಚನೆ ಮತ್ತು ಬರವಣಿಗೆ ಕ್ರಮಗಳನ್ನು ಕೆಲಮಟ್ಟಿಗೆ ಪ್ರಭಾವಿಸಿದವು. ಅಂತಹ ಇಬ್ಬರು ಸಂತರ ಭೇಟಿಯ ಅನುಭವವನ್ನು ಇಲ್ಲಿ ಹಂಚಿಕೊಳ್ಳಬಹುದು. ಭಾರತದ ಅನುಭಾವಿ ಪಂಥಗಳ ವಿಶಿಷ್ಟತೆಯೆಂದರೆ, ಅವು ದರ್ಶನ ಸಾಹಿತ್ಯ ಸಂಗೀತ ನೃತ್ಯ ಚಿತ್ರಕಲೆ ಶಿಲ್ಪ ಆಚರಣೆಗಳೆಂಬ ಹಲವು ಹೊಳೆಗಳು ಕೂಡಿದ ಕಡಲುಗಳು. ಅಲ್ಲಿ ತಿರುಗಾಟದ ಜತೆಗೆ ಧ್ಯಾನ ಮತ್ತು ಸಂವಾದದ ಆಯಾಮಗಳಿವೆ. ಇಲ್ಲಿಯೇ ಪರಮಹಂಸರು ಬಳಸಿದ ಬಹೂದಕ-ಕುಟೀಚಿಕ ಪರಿಕಲ್ಪನೆಗಳನ್ನು ಪ್ರಸ್ತಾಪಿಸಬಹುದು. ‘ಬಹೂದಕ’ರೆಂದರೆ ಒಂದೆಡೆ ನಿಲ್ಲದೆ ಅನುಭವ ಜ್ಞಾನ ಹುಡುಕಿಕೊಂಡು ತಿರುಗುವವರು. ಕುಟೀಚಕರೆಂದರೆ ತಿರುಗಾಟ ಮುಗಿಸಿ ಒಂದೆಡೆ ಕೂತು ಧ್ಯಾನ ಮಗ್ನರಾದವರು. ಕದ್ರಿಮಠದಲ್ಲಿ ನವನಾಥರು ಪರಸ್ಪರ ಮುಖನೋಡುವ ಭಂಗಿಯಲ್ಲಿ ವೃತ್ತಾಕಾರವಾಗಿ ಕುಳಿತಿರುವರು. ಸೂಫಿಗಳು ಅರ್ಧವೃತ್ತಾಕಾರವಾಗಿ ಕೂತಿರುವ ಪಟಗಳಿವೆ. ಈ ಮುಖಾಮುಖಿತನವು ದಾರ್ಶನಿಕ ಸಂವಾದವನ್ನು ಸೂಚಿಸುತ್ತದೆ.
ಬುದ್ಧ ದಿನವಿಡೀ ನಡೆಯುತ್ತಿದ್ದ. ಸಂಜೆ-ಮುಂಜಾನೆ ಧ್ಯಾನಕ್ಕೆ ಕೂರುತ್ತಿದ್ದ ಮತ್ತು ಜನರೊಡನೆ ಸಮಕಾಲೀನ ದಾರ್ಶನಿಕರೊಡನೆ ಸಂವಾದಿಸುತ್ತಿದ್ದ. ನಾಥಪಂಥದ ದಾರ್ಶನಿಕ ಗೋರಖನ ಮೂರ್ತಿಗಳು ಸಾಮಾನ್ಯವಾಗಿ ಬುದ್ಧನಂತೆ ಪದ್ಮಾಸನ ಹಾಕಿ ಧ್ಯಾನಸ್ಥವಾಗಿರುವ ಭಂಗಿಯಲ್ಲಿವೆ. ಮಂಗಳೂರಿನ ಕದ್ರಿಬೆಟ್ಟದಲ್ಲಿ ಅವನ ವಿಗ್ರಹ ನಡಿಗೆಯ ಅವಸ್ಥೆಯಲ್ಲಿದೆ. ನಾಥರಲ್ಲಿ ತಿರುಗಾಡುವ ಯೋಗಿಗಳನ್ನು ರಮತೇ ಸಾಧು ಎನ್ನುವರು. ಅವರು ಒಂದೆಡೆ ಮೂರುದಿನಕ್ಕೆ ಹೆಚ್ಚು ನಿಲ್ಲುವಂತೆಯೇ ಇಲ್ಲ. ವರ್ಷದ ಕೊನೆಗೊಮ್ಮೆ ಅವರು ಒಂದೆಡೆ ಧ್ಯಾನಸ್ಥರಾಗಿ ಕೂರಬೇಕು. ಹನ್ನೆರಡು ವರ್ಷಕ್ಕೊಮ್ಮೆ ಮಂಗಳೂರಿನ ಕದ್ರಿಬೆಟ್ಟದ ಮಠಕ್ಕೆ ಅಧಿಪತಿಯಾದ ಗುರುವನ್ನು ಕರೆದುಕೊಂಡು ನಾಥರು, ಮಹಾರಾಷ್ಟ್ರದ ತ್ರ್ಯಂಬಕೇಶ್ವರದಿಂದ ಮಂಗಳೂರಿನ ತನಕ ಕಾಲ್ನಡಿಗೆ ಮಾಡುವ ರಿವಾಜಿದೆ. ಅವರ ಜತೆ ತ್ರ್ಯಂಬಕೇಶ್ವರದಿಂದ ನಾಸಿಕದವರೆಗೆ ನಾನೂ ನಡೆದಿದ್ದುಂಟು. ಮಹಾರಾಷ್ಟ್ರದ ವಾರಕರಿ ಪಂಥದವರೂ ಪಂಡರಾಪುರಕ್ಕೆ ದಿಂಡಿಯಾತ್ರೆ ಮಾಡುವುದುಂಟು. ನಾಥರ ಮೇಲೆ ಪುಸ್ತಕಬರೆದ ಬ್ರಿಗ್ಸ್, ತನ್ನ ಜೀವನದಲ್ಲಿ ಭೇಟಿಯಾದ ಒಬ್ಬ ಯೋಗಿ, ರಶ್ಯ ತುರ್ಕಿಯ ಟಿಬೆಟ್ ತನಕ ತಿರುಗಾಟ ಮಾಡಿರುವುದನ್ನು ದಾಖಲಿಸುತ್ತಾನೆ. ನಾಥದೀಕ್ಷೆ ಪಡೆದವರು, ನದಿಯ ಒಂದು ದಡ ಹಿಡಿದು ಅದು ಹುಟ್ಟುವ ತನಕ ಹೋಗಿ ಇನ್ನೊಂದು ದಡದಲ್ಲಿ ಮರಳಿ ಬರುವ ಪದ್ಧತಿಯೂ ಇದೆ. ಇಂತಹ ಪದ್ಧತಿಗಳ ಹಿಂದೆ, ಹೊಳೆಯ ಹುಟ್ಟು-ಅಳಿವೆಗಳ ನಡುವಣ ನಿರಂತರ ಪ್ರವಹಿಸುವಿಕೆಯ ಸತ್ಯವನ್ನು ಕಾಣಿಸುವುದೇ ಇದ್ದೀತು.
ಈ ಹಿನ್ನೆಲೆಯಲ್ಲಿ ಭಾರತದ ಎಲ್ಲ ದೊಡ್ಡ ದಾರ್ಶನಿಕರ, ರಾಜಕಾರಣಿಗಳ, ಸಂತರ ಬದುಕು, ತೀವ್ರವಾದ ತಿರುಗಾಟಗಳಿಂದಲೂ ಧ್ಯಾನಸ್ಥ ಚಿಂತನೆಯಿಂದಲೂ ಕೂಡಿರುವುದನ್ನು ಗಮನಿಸಬಹುದು. ಅಲ್ಲಮ, ಗಾಂಧಿ, ನಾರಾಯಣಗುರು ಏನು ಕಡಿಮೆ ತಿರುಗಿದರೇ? ಸ್ವತಃ ಗುರುನಾನಕರು ಬೀದರ್ ಹಿಮಾಲಯ ಮಕ್ಕಾ ಅಫ್ಘಾನಿಸ್ಥಾನ ಒಳಗೊಂಡಂತೆ ಏಶ್ಯವನ್ನೇ ತಿರುಗಾಡಿದ್ದರು. ಒಂದೆಡೆ ಅಧ್ಯಯನ ನಿರತನಾಗಿ ಕೂತಿದ್ದ ರೂಮಿಗೆ ತಬ್ರೀಜ್ ನಗರದಿಂದ ಬರುವ ಶಮ್ಸ್, ಜ್ಞಾನೋದಯ ಕೊಟ್ಟು ಮತ್ತೆ ಕಣ್ಣಿಗೆ ಕಾಣದಂತೆ ಮಾಯವಾಗಿಬಿಡುತ್ತಾನೆ. ‘ಶೂನ್ಯಸಂಪಾದನೆ’ಯಲ್ಲಿ ಲೋಕದ ಸುದೀರ್ಘ ತಿರುಗಾಟ ಮಾಡಿ ಬರುವ ಅಲ್ಲಮನು ಶೂನ್ಯಸಿಂಹಾಸನವನ್ನು ಏರಿ ಕೂರಲು ಬರುವ ಚಿತ್ರವಿದೆ. ಅದು ತಿರುಗಾಟದ ದೈಹಿಕ ಅಸ್ತವ್ಯಸ್ತತೆಯಿಲ್ಲದೆ ಲೋಕದ ವ್ಯವಸ್ಥಿತ ಅರಿವು ದಕ್ಕದೆಂದು ಹೇಳುವಂತಿದೆ. ನಾನೊಮ್ಮೆ ಬಾಬಾಬುಡಾನ್‌ಗಿರಿ ದಾರಿಯಲ್ಲಿ ಹೋಗುತ್ತಿದ್ದ ಫಕೀರನನ್ನು ಕಂಡೆ. ಹೆಗಲಲ್ಲಿ ಜೋಳಿಗೆ ಮತ್ತು ಕಂಬಳಿ. ಕೈಯಲ್ಲಿ ಆಹಾರ ಪಾನೀಯಗಳಿಗೆ ಒಂದು ಕೇಟಲಿ. ಪರ್ವತ ಪ್ರದೇಶ. ಕಾಡು. ಕಾರು ನಿಲ್ಲಿಸಿ ಮಾತಾಡಿದೆ. ಆತ ಕಾಶ್ಮೀರದಿಂದ ನೂರಾರು ದರ್ಗಾ ಭೇಟಿ ಮಾಡುತ್ತ ಬಂದಿದ್ದ. ಮುಂದೆ ತಮಿಳುನಾಡಿನ ನಾಗೂರಿಗೆ ಹೋಗಲಿದ್ದ. ಕಾರು ಹತ್ತಲು ನಿರಾಕರಿಸಿದ. ಇಂತಹ ಸಾಧುಗಳು ಹಿಮಾಲಯದ ದಾರಿಗಳಲ್ಲಿ ಇರುವೆಗಳಂತೆ ಹೋಗುತ್ತಿರುತ್ತಾರೆ. ಆಹಾರ ಹಣ ಸ್ವೀಕರಿಸುತ್ತಾರೆ. ವಾಹನ ಹತ್ತುವುದಿಲ್ಲ. ಅವರಿಗೆ ನಡಿಗೆಯೆಂದರೆ, ಲೋಕದೊಟ್ಟಿಗೆ ಬೆರೆವ ಮತ್ತು ಅರಿಯುವ ಅವಕಾಶವೇ.
ಭಾರತದಲ್ಲಿ ತಿರುಗಾಡಿ ಸಂತರ ಆತ್ಮಕಥೆ ಮತ್ತು ಜೀವನಚರಿತ್ರೆಗಳು ತಿರುಗಾಟ ಮತ್ತು ಧ್ಯಾನದ ಪ್ರತೀಕಗಳು. ನಿದರ್ಶನಕ್ಕೆ ಬೆಳಗೆರೆ ಕೃಷ್ಣಶಾಸ್ತ್ರಿಯವರು ಮುಕಂದೂರು ಸ್ವಾಮಿಗಳ ಮೇಲೆ ರಚಿಸಿರುವ ‘ಯೇಗ್ದಾಗೆಲ್ಲಾ ಐತೆ’, ಸ್ವಾಮಿರಾಮ ಅವರ ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’, ಶ್ರೀಎಂ ಅವರ ‘ಹಿಮಾಲಯದ ಗುರುವಿನ ಗರಡಿಯಲ್ಲಿ’ ಹಂಪಿಯ ಸದಾಶಿವಯೋಗಿಗಳ ಆತ್ಮಕಥನ ‘ಸತ್ಯದ ಹುಡುಕಾಟ’ ಮೊದಲಾದವನ್ನು ಗಮನಿಸಬಹುದು. ಕೊನೆಯ ಇಬ್ಬರಲ್ಲಿ ಒಬ್ಬರನ್ನು ಮಹಾನಡಿಗೆಯಲ್ಲಿರುವಾಗ ಭೇಟಿಯಾದೆ. ಮತ್ತೊಬ್ಬರನ್ನು ನಡಿಗೆ ಮುಗಿಸಿ ನೆಲೆಗೊಂಡ ಬಳಿಕ ಕಂಡೆ. ಶ್ರೀಎಂರವರ ಆತ್ಮಕಥೆಯು ಆಕರ್ಷಕ ನಿರೂಪಣೆಯಿಂದಲೂ ನಂಬಲು ಕಷ್ಟಕರವಾದ ಅನುಭವಗಳಿಂದಲೂ ದಾರ್ಶನಿಕ ನೋಟಗಳಿಂದಲೂ ತುಂಬಿದೆ. ಕೇರಳ ಮೂಲದ ಮಮ್ತಾಝ್‌ಅಲಿಖಾನ್, ಶ್ರೀಎಂ ಆಗಿ ರೂಪಾಂತರಗೊಂಡ ಕಥನವಿದು. ಚಿಕ್ಕಂದಿನಲ್ಲೇ ಮನೆಮಾರು ತೊರೆದು ಏಕಾಂಗಿಯಾಗಿ ದೇಶಾಟನೆ ಮಾಡಿದ ಇವರು, ನಾಥಪಂಥೀಯರಾಗಿ ಹಿಮಾಲಯದಲ್ಲಿ ಸಾಧನೆ ಮಾಡಿದರು.
ಒಮ್ಮೆ ಶ್ರೀಎಂ ಅವರು ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ‘ವಾಕ್ ಆಫ್ ಹೋಪ್’ ಎಂಬ ಪಾದಯಾತ್ರೆ ಮಾಡಿದರು. ‘ದೇಶದಲ್ಲಿ ಧಾರ್ಮಿಕ ದ್ವೇಷವು ಹೆಚ್ಚುತ್ತಿದೆ. ಧರ್ಮಗಳು ಪರಸ್ಪರ ದ್ವೇಷಿಸುವುದನ್ನು ಬಿಟ್ಟು ಸಂವಾದ ಮಾಡುವ ಅಗತ್ಯವಿದೆ. ಕೋಮುಹಿಂಸೆಯಿಂದ ಮನುಷ್ಯ ಸಂಬಂಧಗಳು ಹರಿದುಹೋಗುತ್ತವೆ. ದೇಶದ ಅಭಿವೃದ್ಧಿಯ ಲಯ ಬಿಗಡಾಯಿಸುತ್ತದೆ. ನನ್ನ ನಡಿಗೆ ಜನರ ಮನಸ್ಸುಗಳನ್ನು ಬೆಸೆವ ಉದ್ದೇಶವುಳ್ಳದ್ದು’ ಎಂದವರು ತಮ್ಮ ಸಂಕಲ್ಪವನ್ನು ಬ್ರೋಶರಿನಲ್ಲಿ ವಿವರಿಸಿದ್ದರು. ಅವರ ನಡಿಗೆ ಕರ್ನಾಟಕಕ್ಕೆ ಬಂದಾಗ, ಹರಿಹರದಿಂದ ಹಾವೇರಿಯ ತನಕ ನಾನೂ ಬಾನೂ ನಡೆದದ್ದುಂಟು. ಹಗಲೆಲ್ಲ ನಡೆಯುತ್ತಿದ್ದ ಶ್ರೀಎಂ, ಸಂಜೆ ಉಳಿಕೆ ಮಾಡಿದ ಊರಲ್ಲಿ ಕೂತು ಸತ್ಸಂಗ ಮಾಡುತ್ತಿದ್ದರು. ಅವರು ಸಂಸ್ಕೃತ ಉರ್ದು ತೆಲುಗು ತಮಿಳು ಮಲಯಾಳಂ ಇಂಗ್ಲಿಷ್‌ಗಳಲ್ಲಿ ಪ್ರವೇಶವುಳ್ಳವರು. ಸೂಫಿ ನಾಥ ಅವಧೂತ ಕಬೀರ್ ಸಿದ್ಧ ಪರಂಪರೆಗಳ ಬಗ್ಗೆ ಜ್ಞಾನವಿದ್ದವರು. ದಾರಾಶುಕೊನಂತೆ ಉಪನಿಷತ್ ವ್ಯಾಖ್ಯಾನಕಾರರಾದ ಅವರು ಕುರ್‌ಆನ್ ಬೈಬಲ್‌ಗಳನ್ನು ಆಳವಾಗಿ ಅಧ್ಯಯನಿಸಿದ್ದರು. ಬಹುಧಾರ್ಮಿಕ ದೇಶದಲ್ಲಿ ಧಾರ್ಮಿಕ ಸಹನೆ ಅಗತ್ಯ ಮೌಲ್ಯವೆಂದು ನಂಬಿದ್ದ ಅವರು, ಮಾತುಕತೆಯ ನಡುವೆ ‘ನಿಮಗೆ ಅರಬಿ ಬರುವುದೊ?’ ಎಂದು ಕೇಳಿದರು. ಇಲ್ಲವೆಂದೆ. ‘ಕೆಲವರು ಕುರ್‌ಆನನ್ನು ಸಂಕುಚಿತವಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಮೂಲಭೂತವಾದಗಳನ್ನು ಮುಖಾಮುಖಿ ಮಾಡುವುದಕ್ಕೆ ನಮ್ಮ ಧಾರ್ಮಿಕ ಪಠ್ಯಗಳನ್ನು ಮಾನವೀಯವಾಗಿ ವ್ಯಾಖ್ಯಾನಿಸುವುದೂ ಒಂದು ಹಾದಿ. ಧರ್ಮ ಮತ್ತು ದರ್ಶನಗಳು ಸಂವಾದ ಮಾಡುವ ವಾತಾವರಣವನ್ನು ಸೃಷ್ಟಿಸಬೇಕಿದೆ. ಕಾಶ್ಮೀರದಲ್ಲಿ ಕರಣ್‌ಸಿಂಗ್ ದಾರಾಶುಕೊ ಫೆಸ್ಟಿವಲ್ ಏರ್ಪಡಿಸುತ್ತಾರೆ. ಅಲ್ಲಿಗೆ ನೀವೊಮ್ಮೆ ಬರಬೇಕು’ ಎಂದರು. ಅವರೊಬ್ಬ ಅದ್ಭುತ ವಾಗ್ಮಿ. ಆದರೆ ಮಾತಿನ ಸಮಸ್ಯೆಯೂ ಅವರಿಗೆ ತಿಳಿದಿತ್ತು. ‘ಸತ್ಸಂಗಗಳಲ್ಲಿ ಅತಿಯಾದ ಮಾತು ಆಗುತ್ತಿದೆ. ಮಾತು ಮೌನ ಮತ್ತು ಧ್ಯಾನದ ಮೂಲಕ ಪಡೆಯಬೇಕಾದ್ದನ್ನು ಪಡೆಯದಂತೆ ತಡೆಯುತ್ತದೆ. ಕೆಲವು ಹಿಮಾಲಯದ ಸಾಧುಗಳ ಸಮಸ್ಯೆಯೆಂದರೆ ಸದಾ ಮಾತಾಡುವುದು. ಹಿಮನದಿಗಳ ಹರಿವನ್ನು ಹಕ್ಕಿಗಳ ನಾದವನ್ನು ಹಸಿರಿನ ಸೊಬಗನ್ನು ನೆಲದಲ್ಲರಳುವ ಪುಟ್ಟ ಹೂಗಳನ್ನು ನೋಡುವುದಕ್ಕೆ ಅವರಿಗೆ ಪುರುಸೊತ್ತೇ ಇಲ್ಲ’ ಎಂದರು.
ಶ್ರೀಎಂ ಏಕಮುಖವಾಗಿ ಪ್ರವಚನ ಮಾಡುತ್ತಿರಲಿಲ್ಲ. ಸಭೆಯಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದರು. ತಾವು ಸಾಧಿಸಿರುವುದಕ್ಕಿಂತ ಕಡಿಮೆ ತೋರಿಸಿಕೊಳ್ಳುವ ಗುಣವುಳ್ಳ ಸರಳವ್ಯಕ್ತಿ. ‘ನಾನೊಬ್ಬ ಗೃಹಸ್ಥ. ದೈನಿಕ ಬದುಕಿನ ಕೆಲಸಗಳ ಜತೆ ಕೊಂಚ ಸಾಧನೆ ಮಾಡಿದ್ದೇನೆ. ನಿಮಗೂ ಇದು ಸಾಧ್ಯ’ ಎನ್ನುತ್ತಿದ್ದರು. ಆನುಭಾವಿಕ ಸಾಧನೆಯಿಲ್ಲದ ನನ್ನಂತಹ ಶುಷ್ಕಪಂಡಿತನ ವೈಚಾರಿಕ ಪ್ರಶ್ನೆಗಳು ಅವರಿಗೆ ಸರಳೀಕೃತ ಅನಿಸಿರಬೇಕು. ಅವರೆಂದರು: ‘‘ನೋಡಿ, ನಮ್ಮ ಬುದ್ಧಿ ಜಾಗೃತಪ್ರಜ್ಞೆಯು ಮೂರು ಆಯಾಮಗಳಲ್ಲಿ ಮಾತ್ರ ಲೋಕವನ್ನು ಗ್ರಹಿಸಬಲ್ಲದು. ಪಂಚೇಂದ್ರಿಯಗಳ ಮೂಲಕ ಸಿಗುವ ಅನುಭವವೇ ಇದಕ್ಕೆ ಆಧಾರ. ಆದರೆ ನಮ್ಮ ಮೆದುಳಿಗಿರುವ ಎಷ್ಟೊ ಶಕ್ತಿಯಿನ್ನೂ ಆಕ್ಟಿವೇಟ್ ಆಗಿಲ್ಲ. ಅದು ಸಾಧ್ಯವಾದರೆ ಲೋಕ ವಿಭಿನ್ನವಾಗಿ ಕಾಣಬಹುದು. ಅನುಭವ ಬೇರೆಯಾಗಬಹುದು. ನಮ್ಮ ಸೀಮಿತ ಬೌದ್ಧಿಕತೆಗೆ ದಕ್ಕಿದ್ದನ್ನು ಮಾತ್ರ ಸತ್ಯವೆಂದು ಭಾವಿಸಬೇಕಿಲ್ಲ’’ ಇದ್ದೀತು. ಆದರೆ ಶ್ರೀಎಂ ಅವರ ರಾಜಕೀಯ ಸಂಪರ್ಕಗಳ ಬಗ್ಗೆ ನನಗೆ ಅರಗಲಾರದ ಪ್ರಶ್ನೆಗಳಿದ್ದವು. ಅವನ್ನು ಚರ್ಚಿಸಲು ಸಾಧ್ಯವಾಗಲಿಲ್ಲ. ಅವರ ಮದನಪಲ್ಲಿಯ ಆಶ್ರಮಕ್ಕೊಮ್ಮೆ ಹೋಗಬೇಕು.
ನಾನು ಒಡನಾಡಿದ ಎರಡನೆಯ ವಿದ್ವತ್ ಪರಂಪರೆಯ ಸಂತರೆಂದರೆ ಹಂಪಿಯ ಸದಾಶಿವಯೋಗಿ. ಅವರೊಟ್ಟಿಗೆ ಸಲುಗೆ ವಹಿಸಿ ಒಡನಾಡುವ ಸ್ವಾತಂತ್ರ್ಯ ಲಭಿಸಿತ್ತು. ಅವರೊಬ್ಬ ವೈಚಾರಿಕ ಪ್ರಜ್ಞೆಯ ಯೋಗಿ. ‘ಭಾರತೀಯರಿಗೆ ಭಗವಂತರೆಷ್ಟು’ ಪುಸ್ತಕ ಬರೆದವರು. ವಿಚಾರವಾದಿ ಅಬ್ರಾಹಂ ಕೋವೂರರ ಕಾರ್ಯಕ್ರಮವನ್ನು ತಮ್ಮ ಆಶ್ರಮದಲ್ಲಿ ನಡೆಸಿಕೊಟ್ಟವರು. ಅವರ ಆಶ್ರಮದ ಬಾಗಿಲಲ್ಲೇ ‘ಇಲ್ಲಿ ಕಾಲಿಗೆ ಬೀಳುವ ಹೀನಸಂಪ್ರದಾಯವಿಲ್ಲ’ ಎಂದು ದೊಡ್ಡ ಬೋರ್ಡು ಇರುತ್ತಿತ್ತು. ಅವರು ಹಿಮಾಲಯ ಕಾಶ್ಮೀರ ಉಜ್ಜಯಿನಿ ಮುಂಬೈ ಪುಣೆ ಒಳಗೊಂಡು ಇಡೀ ಭಾರತ ಅಡ್ಡಾಡಿದವರು. ನಾನು ಕಾಣುವ ಕಾಲಕ್ಕೆ ಹಂಪಿಯಲ್ಲಿ ಆಶ್ರಮ ಕಟ್ಟಿಕೊಂಡು ನೆಲೆಸಿದ್ದರು. ತಿರುಗಾಟದಲ್ಲಿ ದಿಟ ಮತ್ತು ಖೊಟ್ಟಿ ಯೋಗಿಗಳನ್ನು ಕಂಡಿದ್ದ ಅವರಲ್ಲಿ, ವಿಶಿಷ್ಟವಾದ ಶಿಶುಮುಗ್ಧತೆ ಇತ್ತು. ಆಶ್ರಮದಲ್ಲಿ ನಾನಾ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದರು. ಆಯಾ ಹಣ್ಣಿನ ಸೀಝನ್‌ಗೆ ಸರಿಯಾಗಿ ನಮ್ಮ ಮನೆಗೆ ಬ್ಯಾಗು ತುಂಬ ಹಣ್ಣು ಬರುತ್ತಿದ್ದವು. ಅವರ ಸತ್ಸಂಗದ ಹೆಸರು ‘ಜಿಜ್ಞಾಸುಗಳ ಸಂಶಯ ನಿವಾರಣೆ’. ಅದರಲ್ಲಿ ಅವರು ಹಳ್ಳಿಗಾಡಿನ ಜನರ ಜತೆ ಕನ್ನಡ ತೆಲುಗುಗಳಲ್ಲಿ ಆಧ್ಯಾತ್ಮಿಕ ಚರ್ಚೆ ನಡೆಸುತ್ತಿದ್ದರು. ಆಕಾಶವಾಣಿಯ ಆರ್ಕೈವ್ಸಿಗಾಗಿ ಧ್ವನಿಸಂಗ್ರಹ ಮಾಡಲು ನಾನೊಮ್ಮೆ ಅವರ ಸಂದರ್ಶನ ಮಾಡಬೇಕಾಯಿತು. ಆಕಾಶವಾಣಿಯ ಸ್ಟುಡಿಯೊ ಹಾರಿಹೋಗುವಂತೆ ಉಚ್ಚಕಂಠದಿಂದ ಹೊಮ್ಮಿದ ಅವರ ವಾಕ್‌ಪ್ರವಾಹವನ್ನು ತಡೆಯುವುದು, ತಡೆದು ಇನ್ನೊಂದು ಪ್ರಶ್ನೆ ಕೇಳುವುದು ಬಹಳ ಕಷ್ಟವಾಯಿತು. ಯೋಗಿಯವರು ಕೋವಿಡ್ ವರ್ಷಗಳಲ್ಲಿ ಮೌನವ್ರತ ಧರಿಸಿದರು. ಆಹಾರ ನೀರು ತ್ಯಜಿಸುತ್ತ ಒಂದು ದಿನ ದೇಹಬಿಟ್ಟರು. ಅವರ ಜತೆ ಇನ್ನೂ ನಾನು ಮಾತಾಡುವುದಿತ್ತು.
ಈ ಸಂತರ ಲೋಕವನ್ನು ನಿಗೂಢವಾಗಿ ರೋಚಕವಾಗಿ ಕಾಣಿಸುವ ಪ್ರವೃತ್ತಿ, ಕೆಲವು ವಿದೇಶಿ ಸಂಶೋಧಕರಲ್ಲಿದೆ. ಇದು ರೋಚಕತೆಯನ್ನು ಬಿಕರಿ ಮಾಡುವ ಕರ್ನಾಟಕದ ಟ್ಯಾಬ್ಲಾಯ್ಡ್‌ಗಳಲ್ಲೂ ಟಿ.ವಿ. ಚಾನಲ್‌ಗಳಲ್ಲೂ ಇದೆ. ನಾನು ಸಂತಲೋಕದಲ್ಲಿ ಅಂತಹ ಯಾವುದೇ ರೋಚಕ ಘಟನೆಗಳನ್ನು ಕಾಣಲಿಲ್ಲ. ಸಹಜವಾದ ಮಾತು ವರ್ತನೆಗಳಾಚೆ, ಅವರಲ್ಲಿ ನನಗರಿಯದ ಯಾವುದೊ ಆನುಭಾವಿಕ ನಿಗೂಢತೆ ಇರುವುದು ಮಾತ್ರ ಭಾಸವಾಗುತ್ತಿತ್ತು. ಹೆಚ್ಚಿನ ಸಂತರು ತಮ್ಮ ಸಾಧನೆಯ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಹಂಚಿಕೊಳ್ಳಬೇಕಾದಾಗ, ತನ್ನ ಕವಿತೆಯ ಅರ್ಥವನ್ನು ತಾನೇ ವಿವರಿಸುವ ಮುಜುಗರಕ್ಕೆ ಸಿಲುಕಿದ ಕವಿಯಂತೆ, ರೂಪಕದ ಭಾಷೆಯಲ್ಲಿ ಹೇಳುತ್ತಿದ್ದರು. ಹೆಚ್ಚಿನವರು ತಮ್ಮ ಪೂರ್ವಾಶ್ರಮದ ಬದುಕಿನ ಬಗ್ಗೆ ಹೇಳಲು ನಿರಾಕರಿಸುತ್ತಿದ್ದರು. ಪಶ್ಚಿಮಘಟ್ಟದ ದಟ್ಟವಾದ ಅರಣ್ಯದಲ್ಲಿರುವ ನಾಥರ ಹಂಡಿಬಡಗನಾಥ ಮಠಕ್ಕೆ ಒಮ್ಮೆ ಹೋಗಿದ್ದೆ. ಹುಲಿಗಳಿರುವ ಈ ಕಾಡಿನಲ್ಲಿ ಎಂಟು ಕಿ.ಮೀ. ನಡೆದುಕೊಂಡು ಹೋಗಬೇಕು. ಈ ಮಠದ ಗುರುಗಳಿಗೆ ಪೀರ್ ಎಂದು ಕರೆವರು. ಇದರ ಮೂಲಗುರು ಹಂಡಿಬಡಗನಾಥನು ಕಾಬೂಲಿನಿಂದ ಬಂದವನಂತೆ. ಬಹುಶಃ ಸೂಫಿ ಹಿನ್ನೆಲೆಯವನು. ಅಲ್ಲಿ ಉತ್ತರ ಭಾರತದ ನೂರಾರು ನಾಥರು ಬೀಡುಬಿಟ್ಟಿದ್ದರು. ಅವರಲ್ಲಿ ಒಬ್ಬ ಕನ್ನಡಿಗರಿದ್ದರು. ಅವರಿಗೆ ಪರಿಚಯ ಮಾಡಿಕೊಂಡು, ‘ನೀವು ಸನ್ಯಾಸಿಯಾಗಲು ಏನು ಪ್ರೇರಣೆಯಾಯಿತು?’ ಎಂದು ಕೇಳಿದೆ. ಸಮಾಧಾನವಾಗಿ ಮಾತಾಡುತ್ತಿದ್ದವರು ತಟ್ಟನೆ ಕನಲಿ ‘ಅದನ್ನು ಕಟ್ಟಿಕೊಂಡು ನಿನಗೇನು?’ ಎಂದರು. ಕೆಲವರಿಗೆ ನಮ್ಮ ಕುತೂಹಲದ ಪ್ರಶ್ನೆಗಳು ಕಿರಿಕಿರಿ ಅನಿಸುತ್ತವೆ. ಎಂತಲೇ ಅವರು ಪತ್ರಕರ್ತರು ಸಂಶೋಧಕರು ಎಂದರೆ ಮಾತಾಡುವುದಿಲ್ಲ. ಹರಿದ್ವಾರದಲ್ಲಿ ಒಬ್ಬ ಯೋಗಿ ಅಂಗಳದಲ್ಲಿ ಬಿಸಿಲು ಕಾಸುತ್ತ ಕೂತಿದ್ದ. ನಾನು ನಮಸ್ಕರಿಸಿ ‘ಕರ್ನಾಟಕದಿಂದ ಬಂದಿರುವೆ’ ಎಂದು ಪೀಠಿಕೆ ಹಾಕಿದೆ. ‘ಅದಕ್ಕೆ ನಾನೇನು ಮಾಡಲಿ. ತೊಂದರೆ ಕೊಡಬೇಡ. ಚಲ್ ಹಟ್’ ಎಂದು ಗದರಿದನು.
ಆದರೆ ಸಂತಲೋಕದ ಈ ಸಾಧಕರಲ್ಲಿ ಖೊಟ್ಟಿಗಳೂ ಇದ್ದಾರೆ. ಆದರೆ ಇವರೆಲ್ಲರಿಗಿಂತ ದೊಡ್ಡವರಾಗಿ ಕಾಣುವುದು, ಸನ್ಯಾಸ ಸ್ವೀಕರಿಸದೆಯೂ, ಮನೆಬಿಟ್ಟು ಹೋಗದೆ ಛಿದ್ರಗೊಂಡ ಕುಟುಂಬ ಸಂಭಾಳಿಸುವವರು. ಬಿಜಾಪುರದ ಒಂದು ಹಳ್ಳಿಗೆ ಒಬ್ಬ ಸಂತನ ಪುಣ್ಯತಿಥಿಗೆಂದು ಹೋಗಿದ್ದೆ. ಸಂತನ ಹೆಂಡತಿ, ನೂರುವರ್ಷದ ವೃದ್ಧೆ ಇನ್ನೂ ಬದುಕಿದ್ದರು. ಗಂಡ ತನ್ನನ್ನೂ ಮಕ್ಕಳನ್ನೂ ಬಿಟ್ಟು ಸನ್ಯಾಸ ಸ್ವೀಕರಿಸಿ ಬಹೂದಕನಂತೆ ಹೋದಾಗ ಪಟ್ಟ ದುಃಖ-ಕಷ್ಟಗಳನ್ನು ಈಕೆ ಮರೆತಿರಲಿಲ್ಲ. ಏಕಾಂತದಲ್ಲಿ ಅಳುವಾಗ ಮಕ್ಕಳು ಅಪ್ಪ ಎಲ್ಲಿಗೆ ಹೋಗಿದ್ದಾನೆಂದು ಕೇಳಿದರೆ ‘ವ್ಯಾಪಾರಕ್ಕೆ ಹುಬ್ಬಳ್ಳಿಗೆ ಹೋಗಿದ್ದಾನೆ. ಬರ್ತಾನೆ’ ಎಂದು ಈಕೆ ಹೇಳುತ್ತಿದ್ದರಂತೆ. ಈಕೆ ಧೈರ್ಯಗೆಡದೆ ಹೊಲಮನೆ ಸಂಭಾಳಿಸಿ ಮಕ್ಕಳನ್ನು ಬೆಳೆಸಿದರು. ಬೇಡವಾದ ಸಂಸಾರ ಬಿಟ್ಟು ಅಕ್ಕಮಹಾದೇವಿ ದೀರ್ಘವಾದ ಹಾದಿಯಲ್ಲಿ ಬಹೂದಕೆಯಂತೆ ಕಾಲ್ನಡಿಗೆ ಮಾಡಿ, ಶ್ರೀಶೈಲದ ಕದಳಿಯ ಗುಹೆಯಲ್ಲಿ ಕುಟೀಚಕೆಯಾದ ಯೋಗಿನಿ. ಆದರೆ ಈಕೆ ಮನೆಯನ್ನೆಂದೂ ಬಿಟ್ಟು ಹೋಗದೆ ದೃಢವಾಗಿ ಇದ್ದಲ್ಲೆ ನಿಂತು ಸಂಸಾರವನ್ನು ನಿಭಾಯಿಸಿ ಅದನ್ನೇ ಆಧ್ಯಾತ್ಮಿಕ ಸಾಧನೆಯಾಗಿಸಿದ್ದವರು. ಇಂತಹ ಗೃಹಸ್ಥ ಯೋಗಿನಿಯರನ್ನು ಕಾಣುವಾಗ ‘ಗಂಗವ್ವ ಗಂಗಾಮಾಯಿ’ ಗಂಗವ್ವ, ‘ಒಡಲಾಳ’ ಕಾದಂಬರಿಯ ಸಾಕವ್ವ, ಲಂಕೇಶರ ‘ಅವ್ವ’ ಕವಿತೆಯ ನಾಯಕಿ ನೆನಪಾಗುವರು. ನಮ್ಮ ಊರುಗಳ ಅನೇಕ ಮನೆಗಳಲ್ಲಿ ಇಂತಹ ಸಾಧಕಿಯರು ಸಾಧನೆ ಅಂದುಕೊಳ್ಳದೆಯೇ ದೊಡ್ಡದನ್ನು ಸಾಧಿಸಿರುತ್ತಾರೆ. ಮಾಸ್ತಿಯವರ ಒಂದು ಕತೆಯಲ್ಲಿ ಟಾಲ್‌ಸ್ಟಾಯ್‌ನನ್ನು ‘ಮಹರ್ಷಿ’ ಎಂದು ಕರೆಯಲಾಗಿದೆ. ಗಡ್ಡಬಿಟ್ಟು ಋಷಿಯಂತೆ ಕಾಣುತ್ತಿದ್ದ ಎಂದಲ್ಲ. ತನ್ನ ಸಂಪತ್ತನ್ನು ಸೃಷ್ಟಿಸಿದ ದುಡಿಮೆಗಾರರು ಕಷ್ಟದಲ್ಲಿ ಬದುಕುವಾಗ, ತಾನೂ ತನ್ನ ಕುಟುಂಬವೂ ಅದನ್ನು ಅನುಭವಿಸುವುದಕ್ಕೆ ಯಾವ ನೈತಿಕತೆಯಿದೆ ಎನ್ನುತ್ತ ಆತ ಅದನ್ನೆಲ್ಲ ಕೆಲಸಗಾರರಲ್ಲಿ ಹಂಚಿ, ಮನೆಬಿಟ್ಟು ಹೋಗಿದ್ದಕ್ಕೆ. ಆತ ಜೀವಬಿಟ್ಟಿದ್ದು ರೈಲ್ವೆ ನಿಲ್ದಾಣದಲ್ಲಿ. ನಾಡನ್ನು ಕಟ್ಟಲು ತಿರುಗಾಡಿದ, ಕುಟೀಚಕರಾಗಿದ್ದು ನಾಡಿನ ಬಗ್ಗೆ ಚಿಂತಿಸಿದ, ಸಮಾಜವಾದಿ ಚಳವಳಿಯ ಶಾಂತವೇರಿ ಗೋಪಾಲಗೌಡರು, ಸ್ವಾತಂತ್ರ್ಯ ಹೋರಾಟದ ಕಾರ್ನಾಡ್ ಸದಾಶಿವರಾಯರ ಬದುಕಿನ ಕೊನೆಯ ಹಂತಗಳು, ಟಾಲ್ಸ್‌ಟಾಯ್ ಮಹರ್ಷಿಯದೇ ಅನಿಸುತ್ತದೆ. ಬೆಳಗಿನ ಜಾವವೆದ್ದೇ ಏಕಾಂತದಲ್ಲಿ ರಿಯಾಜ್ ಮಾಡಿ, ಅದನ್ನು ಹಂಚಲು ದೇಶವೆಲ್ಲ ತಿರುಗಾಡಿದ ಹಿಂದೂಸ್ತಾನಿಗಾರರೂ ಸಂತರೇ. ಅದರಲ್ಲೂ ಉತ್ತರ ಪ್ರದೇಶದ ಕಿರಾಣದಿಂದ ಬರೋಡಕ್ಕೆ ಬಂದು ನೆಲೆಸಿದ್ದ ಉಸ್ತಾದ್ ಅಬ್ದುಲ್ ಕರೀಂಖಾನರು, ಪಾಂಡಿಚೇರಿಗೆ ಹೋಗುವಾಗ ವಿಳ್ಳುಪುರಂ ರೈಲ್ವೆನಿಲ್ದಾಣದಲ್ಲಿ ಎದೆನೋವಾಗಿ ಅಲ್ಲೇ ಪ್ಲಾಟ್‌ಫಾರ್ಮ್ ಮೇಲೆ ಹಾಡುತ್ತ ಜೀವಬಿಟ್ಟರು.
ದೈಹಿಕ ಚಲನೆ ಬೇಡುವ ತಿರುಗಾಟ ಮತ್ತು ದೇಹವನ್ನು ಒಂದೆಡೆ ಸ್ಥಿತಗೊಂಡಾಗ ಮಾಡುವ ಧ್ಯಾನ ಆಡುವ ಮಾತು ಮತ್ತು ವಹಿಸುವ ಮೌನ, ಮೇಲ್ನೋಟಕ್ಕೆ ವಿರುದ್ಧ ಲೋಕಗಳಂತೆ ಕಾಣುತ್ತವೆ. ಆದರೆ ಅವುಗಳ ನಡುವೆ ಸಜೀವ ಸಂಬಂಧವಿದೆ. ನಿಜವಾದ ಜ್ಞಾನ ಅಥವಾ ಸಾಧನೆಗಳು ತಿರುಗಾಟ-ಧ್ಯಾನಗಳು ಅರ್ಥಪೂರ್ಣವಾಗಿ ಬೆರೆತಾಗ ಸಂಭವಿಸುತ್ತವೆ. ಕೇವಲ ಕುಟೀಚಿಕರು ಲೋಕಾನುಭವವಿಲ್ಲದೆ ಕೂಪಮಂಡೂಕರಾಗುವ, ಕೇವಲ ಬಹೂದಕಿಗಳು ಅಂತರ್ಮುಖಿ ಚಿಂತನೆಯೇ ಇಲ್ಲದೆ ಮಾಹಿತಿ ಸಂಗ್ರಾಹಕರಾಗುವ ಅಪಾಯಗಳಿವೆ. ವೃಕ್ಷವೊಂದರ ಫಲವು, ಹೊರಗೆ ಬಿಸಿಲು ಚಳಿಮಳೆಗಳಿಗೆ ಒಡ್ಡಿಕೊಳ್ಳುವ ಎಲೆಕೊಂಬೆ ಕಾಂಡ ಹಾಗೂ ಮಣ್ಣೊಳಗೆ ಧ್ಯಾನಸ್ಥವಾದ ಬೇರುಗಳು ಮಾಡುವ ಕೂಡು ಅನುಸಂಧಾನದ ಪರಿಣಾಮವೇ ಆಗಿದೆ.