×
Ad

ಫೆಲೆಸ್ತೀನ್ ಎಲ್ಲವನ್ನು ಕಳೆದುಕೊಂಡವರ ಸುಶ್ರಾವ್ಯ ಧ್ವನಿಯಾದ ಮಹ್ಮೂದ್‌ ದರ್ವೀಶ್

Update: 2025-12-24 12:21 IST

ಸಂಗ್ರಹ, ಅನುವಾದ: ರೂಹಿ, ಬೋಳಾರ

ನೊಬೆಲ್ ಪ್ರಶಸ್ತಿ ವಿಜೇತ ಫೆಲೆಸ್ತೀನ್ ನಾಯಕ ಯಾಸಿರ್ ಅರಫಾತ್ (1929-2004), 1974 ರಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಹಲವು ಕಾರಣಗಳಿಗಾಗಿ ಜಗತ್ತು ನೆನಪಿಸುತ್ತಿರುತ್ತದೆ. ‘ನಾನಿಂದು ಒಂದು ಕೈಯಲ್ಲಿ ಆಲಿವ್ ಗೆಲ್ಲು ಮತ್ತು ಇನ್ನೊಂದು ಕೈಯಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಬಂದೂಕು ಹಿಡಿದು ನಿಮ್ಮ ಮುಂದೆ ನಿಂತಿದ್ದೇನೆ. ಈ ಆಲಿವ್ ಗೆಲ್ಲು ನನ್ನ ಕೈಯಿಂದ ಬೀಳದಂತೆ ನೋಡಿಕೊಳ್ಳಿ’ ಎಂಬ ಅಂದಿನ ಅವರ ಮಾತಂತೂ ಈಗಲೂ ಅನೇಕರಿಗೆ ಸ್ಫೂರ್ತಿಯನ್ನೊದಗಿಸುತ್ತದೆ. ಈ ಮಾತನ್ನು ಅರಫಾತ್ ತಮ್ಮ ವಿಶಿಷ್ಟ ಶೈಲಿಯಲ್ಲಿ ಮೂರು ಬಾರಿ ಆವರ್ತಿಸಿದ್ದರು. ಸಭೆಯಲ್ಲಿದ್ದ ಜಾಗತಿಕ ನಾಯಕರೆಲ್ಲಾ ಎದ್ದು ನಿಂತು ಅವರ ಮಾತಿಗೆ ತಮ್ಮ ಗೌರವ ಮತ್ತು ಬೆಂಬಲ ಸೂಚಿಸಿದ್ದರು.




 


ನಿಜವಾಗಿ ಅರಫಾತ್ ಅವರ ಪ್ರಸ್ತುತ ಐತಿಹಾಸಿಕ ಭಾಷಣವನ್ನು ಬರೆದವರು ಫೆಲೆಸ್ತೀನ್ ನ ಖ್ಯಾತ ಕವಿ ಮಹ್ಮೂದ್ ದರ್ವೀಶ್ (1941 - 2008) ಎಂಬ ವದಂತಿ ಆಕಾಲದಲ್ಲಿ ಬಹಳಷ್ಟು ಚರ್ಚೆಯಲ್ಲಿತ್ತು. ಆಗ ದರ್ವೀಶ್ ಅರಫಾತ್ ರ ಸಮೀಪವರ್ತಿಯಾಗಿದ್ದರು. ಮುಂದೆ 1993ರಲ್ಲಿ ಅರಫಾತ್ ನೇತೃತ್ವದ ಪಿಎಲ್‌ಒ, ಒಸ್ಲೋ ಸಂಧಾನಕ್ಕೆ ಸಹಿ ಮಾಡಿದಾಗ ದರ್ವೀಶ್ ಬಂಡೆದ್ದರು. ಅವರು ಅದನ್ನು ಫೆಲೆಸ್ತೀನ್ ವಿಮೋಚನಾ ಹೋರಾಟಕ್ಕೆ ಮಾಡಲಾದ ದ್ರೋಹವೆಂದು ಕರೆದು ಅತ್ಯುಗ್ರವಾಗಿ ವಿರೋಧಿಸಿದರು. ಫೆಲೆಸ್ತೀನ್ ಹಿತಾಸಕ್ತಿಗಳ ಜೊತೆ ರಾಜಿ ಮಾಡಿಕೊಂಡದ್ದಕ್ಕಾಗಿ ಅರಫಾತ್ ರನ್ನು ಕಟುವಾಗಿ ಖಂಡಿಸಿದರು. 1974 ರಲ್ಲಿ ದರ್ವೀಶ್ ಫೆಲೆಸ್ತೀನ್ ಮೂಲದ ಖ್ಯಾತ ಚಿಂತಕ ಎಡ್ವರ್ಡ್ ಸೈದ್ ರನ್ನು ಭೇಟಿಯಾದರು. ಆಬಳಿಕ 2003 ರಲ್ಲಿ ಎಡ್ವರ್ಡ್ ಸೈದ್ ನಿಧನರಾಗುವ ತನಕವೂ ಅವರ ನಿಕಟವರ್ತಿಯಾಗಿದ್ದರು.

ದರ್ವೀಶ್ ಒಂದು ಕೃಷಿಕ ಕುಟುಂಬಕ್ಕೆ ಸೇರಿದ್ದರು. 1967 ರಲ್ಲಿ ಫೆಲೆಸ್ತೀನ್ ಮೂಲದ ಅರಬರ ವಿರುದ್ಧ ಇಸ್ರೇಲ್ ಪಡೆಗಳು ನಡೆಸಿದ ‘ನಕ್ಬಾ’ ಎಂಬ ಸಾಮೂಹಿಕ ಜನಾಂಗ ಹತ್ಯೆಯ ಕಾರ್ಯಾಚರಣೆಯಲ್ಲಿ ಅವರ ಕುಟುಂಬವು ಎಲ್ಲವನ್ನೂ ಕಳೆದುಕೊಂಡು, ಲೆಬನಾನ್ ಗೆ ವಲಸೆ ಹೋಗಲು ನಿರ್ಬಂಧಿತವಾಯಿತು. ಮುಂದೆ ಅವರು ಮರಳಿ ಬಂದರೂ, ಅವರ ಮನೆ ಸಮೇತ ಎಲ್ಲವೂ ನೆಲಸಮವಾಗಿತ್ತು. ಇತರ ಲಕ್ಷಾಂತರ ಫೆಲೆಸ್ತೀನಿಗಳಂತೆ ಅವರ ಪೌರತ್ವವೂ ಕಳೆದು ಹೋಗಿತ್ತು. ‘ನಿವಾಸಿ’ ಎಂಬುದು ಮಾತ್ರ ಅವರ ಗುರುತಾಗಿತ್ತು. ಹೀಗೆ ನಾಶ-ನಷ್ಟ, ಕ್ರೌರ್ಯ ಮತ್ತು ದುರಂತಗಳ ಸರಮಾಲೆಯನ್ನೇ ಕಾಣುತ್ತಾ, ಅನುಭವಿಸುತ್ತಾ, ತಮ್ಮ ನಾಡಿನ ಸ್ವಾತಂತ್ರ್ಯ ಮತ್ತು ತಮ್ಮ ಜನರ ವಿಮೋಚನೆಗಾಗಿ ಹೋರಾಡುತ್ತಾ ಬೆಳೆದ ಮಹ್ಮೂದ್ ದರ್ವೀಶ್ ಎಳೆಯ ವಯಸ್ಸಿನಲ್ಲೇ ಕಾವ್ಯ ರಚನೆ ಆರಂಭಿಸಿದ್ದರು. ಅರಬಿ ಭಾಷೆಯಲ್ಲಿ ಅವರು ಬರೆದ ಅನೇಕ ಕವನಗಳು ವ್ಯಾಪಕ ಜನಪ್ರಿಯತೆ ಪಡೆದವು. ಅವರ ಹೆಚ್ಚಿನ ಕೃತಿಗಳು ಫೆಲೆಸ್ತೀನ್ ಜನತೆಯ ದಾರುಣ ಅನುಭವಗಳನ್ನು, ಅವರ ಭಗ್ನ ಆಶೋತ್ತರಗಳನ್ನು, ಯಾವ ಬಂದೂಕು ಅಥವಾ ಬಾಂಬಿನ ಮುಂದೆಯೂ ಮಣಿಯದ ಅವರ ಉತ್ಸಾಹವನ್ನು ಮತ್ತು ಯಾವ ಬೆಲೆ ತೆತ್ತಾದರೂ ನಾವು ನಮ್ಮ ನೆಲವನ್ನು ವಿಮೋಚಿಸುತ್ತೇವೆ ಎಂಬ ಅವರ ಬದ್ಧತೆಯನ್ನು ಭಾವುಕವಾಗಿ ಪ್ರತಿಬಿಂಬಿಸುತ್ತವೆ. ಅವರು ಬರೆದ ಎಷ್ಟೋ ಹಾಡುಗಳು ಫೆಲೆಸ್ತೀನ್ ಜನತೆಯ ಬದುಕಿನ ಭಾಗವಾಗಿಬಿಟ್ಟವು. ಫ್ಯಾಕ್ಟರಿ ಮತ್ತು ಹೊಲಗಳಲ್ಲಿ ಕೆಲಸ ಮಾಡುವವರು ಮತ್ತು ಬೀದಿಗಳಲ್ಲಿ ಅತ್ಯಾಧುನಿಕ ಶಸ್ತ್ರ ಸಜ್ಜಿತ ಇಸ್ರೇಲಿ ಪಡೆಗಳ ವಿರುದ್ಧ ಕಲ್ಲು, ಕವಣೆಗಳನ್ನು ಹಿಡಿದು ಹೋರಾಡುವ ಹುಡುಗರು ದರ್ವೀಶ್ ಬರೆದ ಸಾಲುಗಳನ್ನು ಆವರ್ತಿಸುತ್ತಿದ್ದರು.


 



2008 ರಲ್ಲಿ ದರ್ವೀಶ್ ನಿಧನರಾದಾಗ ತಮ್ಮ ಹಿಂದೆ 30 ಕ್ಕಿಂತ ಹೆಚ್ಚು ಪ್ರಕಟಿತ ಕವನಸಂಗ್ರಹಗಳನ್ನು ಬಿಟ್ಟು ಹೋಗಿದ್ದರು. ಅವರ ಮರಣದ ಬೆನ್ನಿಗೇ ಫೆಲೆಸ್ತೀನ್ ನಲ್ಲಿ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಲಾಯಿತು. ಅನೇಕರು ಫೆಲೆಸ್ತೀನ್ ನ ರಾಷ್ಟ್ರಕವಿ ಎಂದು ಗುರುತಿಸುವ ದರ್ವೀಶ್ ಅವರ ಕವನಗಳ ಅನುವಾದವು ಜಗತ್ತಿನ ಕನಿಷ್ಠ 40 ವಿವಿಧ ಭಾಷೆಗಳಲ್ಲಿ ಪ್ರಕಟವಾಗಿದೆ.

1964ರಲ್ಲಿ ದರ್ವೀಶ್ ಅವರ ಪ್ರಥಮ ಕವನ ಸಂಕಲನ ಪ್ರಕಟವಾಯಿತು. ‘ಐಡಿ ಕಾರ್ಡ್’ ಎಂಬ ಚುಟುಕು ಅದರ ಭಾಗವಾಗಿತ್ತು. ಅದು ಫೆಲೆಸ್ತೀನ್ ನೆಲವನ್ನು ಆಕ್ರಮಿಸಿಕೊಂಡ ಇಸ್ರೇಲ್ ಪಡೆಗಳು ಅಲ್ಲಲ್ಲಿ ಅಕ್ರಮ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಫೆಲೆಸ್ತೀನ್ ನಾಗರಿಕರನ್ನು ತಡೆದು ನಿಲ್ಲಿಸಿ, ‘ನಿಮ್ಮ ಐಡಿ ಕಾರ್ಡ್ ತೋರಿಸಿ’ ಎಂದು ನಿರ್ಬಂಧಿಸುವ ವಿಲಕ್ಷಣ ಸನ್ನಿವೇಶದ ವಿರುದ್ಧ ಫೆಲೆಸ್ತೀನ್ ನಾಗರಿಕರ ಆಕ್ರೋಶದ ಧ್ವನಿಯಾಗಿತ್ತು. ಆ ಚುಟುಕು ಬಹುಬೇಗನೆ ಫೆಲೆಸ್ತೀನ್ ಜನತೆಯ ಮಧ್ಯೆ ಜನಪ್ರಿಯವಾಯಿತು. ಅವರು ಅಲ್ಲಲ್ಲಿ ಅದನ್ನು ಬಳಸತೊಡಗಿದರು. ಇಸ್ರೇಲ್ ಸರಕಾರವು ಅದನ್ನು ಒಂದು ರಾಜಕೀಯ ಹೇಳಿಕೆಯಾಗಿ ಮತ್ತು ಪ್ರತಿರೋಧದ ಸಂಕೇತವಾಗಿ ಕಂಡು ದರ್ವೀಶ್ ರನ್ನು ಬಂಧಿಸಿತು. ಮುಂದೆ 1967 ರಿಂದ 1970 ರತನಕ ಅವರು ಗೃಹ ಬಂಧನದಲ್ಲಿ ಇರಬೇಕಾಯಿತು.

ದರ್ವೀಶ್ ಅವರ ಕೆಲವು ಆಯ್ದ ಕವನಗಳ ಕನ್ನಡ ಅನುವಾದ ಇಲ್ಲಿದೆ

ಐಡಿ ಕಾರ್ಡ್

ಬರೆದಿಡಿ,

ನಾನೊಬ್ಬ ಅರಬ್ ನಾಗರಿಕ,

ನನ್ನ ಐಡಿ ನಂಬ್ರ - 50,000

ನನ್ನ ಮಕ್ಕಳ ಸಂಖ್ಯೆ - ಎಂಟು,

ಒಂಭತ್ತನೆಯ ಮಗು ಬರಲಿದೆ

ಮುಂದಿನ ಬೇಸಗೆಯಲ್ಲಿ,

ನಿಮಗೆ ಕಳವಳವೇ?


ಬಾಲಕನ ಕುತೂಹಲ

(ಆಗಿನ್ನೂ 14 ರ ಹರೆಯದ ವಿದ್ಯಾರ್ಥಿಯಾಗಿದ್ದಾಗ ದರ್ವೀಶ್ ಒಂದು ಚುಟುಕನ್ನು ಬರೆದಿದ್ದರು. ಅದು ಫೆಲೆಸ್ತೀನಿ ಹುಡುಗನೊಬ್ಬ ಇಸ್ರೇಲ್ ನ ಒಬ್ಬ ಯಹೂದಿ ಹುಡುಗನ ಮುಂದೆ ಪ್ರಕಟಿಸಿದ ಅಳಲಾಗಿತ್ತು. ದರ್ವೀಶ್ ಎಂಬ ಉದಯೋನ್ಮುಖ ಬಾಲ ಕವಿಯ ಆ ಚುಟುಕು ಸರಕಾರದ ಗಮನ ಸೆಳೆದಿತ್ತು. ಮುಂದೆ ಇಂತಹ ಕವನಗಳನ್ನು ಬರೆದರೆ ಗಣಿಯಲ್ಲಿ ಕೆಲಸ ಮಾಡುತ್ತಿರುವ ನಿನ್ನ ತಂದೆಯನ್ನು ನೌಕರಿಯಿಂದ ವಜಾಗೊಳಿಸಲಾಗುವುದು ಎಂದು ಇಸ್ರೇಲಿ ಅಧಿಕಾರಿಗಳು ದರ್ವೀಶ್ ಗೆ ಎಚ್ಚರಿಕೆ ನೀಡಿದರು.)

ನೀನು ನಿನ್ನಿಷ್ಟದಂತೆ ಬಿಸಿಲಲ್ಲಿ ಆಡಬಹುದು,

ಬೇಕೆನಿಸುವ ಆಟಿಕೆಗಳನ್ನು ನೀನಿಟ್ಟುಕೊಳ್ಳಬಹುದು

ನನಗೆ ಮಾತ್ರ ಅದರ ಅನುಮತಿ ಇಲ್ಲ.

ನಿನ್ನ ಬಳಿ ಮನೆ ಇದೆ, ನನ್ನ ಬಳಿ ಇಲ್ಲ.

ನಿನ್ನ ಬಳಿ ಸಂಭ್ರಮಿಸುವ ದಿನಗಳಿವೆ, ನನ್ನ ಬಳಿ ಇಲ್ಲ.

ನಾವಿಬ್ಬರೂ ಜೊತೆಯಾಗಿ ಆಡಲು ಸಾಧ್ಯವಿಲ್ಲವೇ?




 


ಯುದ್ಧವು ಮುಗಿಯುವುದು

ಯುದ್ಧವು ಮುಗಿಯುವುದು,

ನಾಯಕರು ಕೈಕುಲುಕುವರು,

ಆ ವೃದ್ಧೆ ಕಾಯುತಿರುವಳು, ತನ್ನ ಹುತಾತ್ಮ ಪುತ್ರನಿಗಾಗಿ,

ಆ ಹೆಣ್ಣು ಕಾಯುತಿರುವಳು, ತನ್ನ ಪ್ರಿಯ ಪತಿಯ ಬರುವಿಗಾಗಿ,

ಆ ಮಕ್ಕಳು ಕಾಯುತಿರುವರು ತಮ್ಮ ಪರಮ ಸಾಹಸಿ ತಂದೆಗಾಗಿ,

ನಮ್ಮ ನಾಡನ್ನು ಮಾರಿದವರು ಯಾರು? ನಾನರಿಯೆ.

ಬೆಲೆ ತೆತ್ತವರು ಮಾತ್ರ ನನಗೆ ಕಾಣಿಸುತ್ತಿರುವರು.

ಯುದ್ಧವು ಮುಗಿಯುವುದು.




 


ನನ್ನ ನೆಲ, ನನ್ನ ಮಾತೆ

ಈ ನೆಲ, ಬದುಕನ್ನು ಸಾರ್ಥಕಗೊಳಿಸುವ,

ಎಲ್ಲವೂ ಇರುವ ನೆಲವಿದು,

ಈ ನೆಲ, ಭೂಮಿ ತಾಯಿಯ ನೆಲವಿದು,

ಎಲ್ಲ ಆರಂಭಗಳ ಮಾತೆಯ,

ಎಲ್ಲ ಅಂತ್ಯಗಳ ಮಾತೆಯ ನೆಲವಿದು,

ಫೆಲೆಸ್ತೀನ್ ಎಂದಾಗಿತ್ತು ಇದರ ಹೆಸರು,

ಫೆಲೆಸ್ತೀನ್ ಎಂದಾಗಿಬಿಟ್ಟಿತು ಇದರ ಹೆಸರು,

ನನ್ನ ಮಾತೆ, ನೀನು ನನ್ನ ಮಾತೆಯಾಗಿರುವ ಕಾರಣ,

ಅರ್ಹನಾಗಿರುವೆ ನಾನು, ಈ ನೆಲದಲ್ಲಿ ಬದುಕಲು.

ಭೂಮಿ ಕುಗ್ಗುತ್ತಿದೆ

ನಮ್ಮ ಸುತ್ತಲೂ ಕುಗ್ಗುತ್ತಿದೆ ಭೂಮಿ,

ಕೊನೆಯ ಓಣಿಯೆಡೆಗೆ ತಳ್ಳುತ್ತಿದೆ ನಮ್ಮನ್ನು,

ನಾವೀಗ ಪ್ರತ್ಯೇಕಿಸುತ್ತಿದ್ದೇವೆ,

ನಮ್ಮ ದೇಹದ ಒಂದೊಂದೇ ಅಂಗವನ್ನು

ಆ ಓಣಿಯಿಂದ ಹಾದುಹೋಗಲಿಕ್ಕಾಗಿ,

ನಮ್ಮನ್ನು ಹಿಸುಕುತ್ತಿದೆ, ನಮ್ಮ ಸುತ್ತಲ ಭೂಮಿ.

ನಾವು ಭೂಮಿಯ ಗೋಧಿಯಾಗಿದ್ದರೆ,

ಸತ್ತು ಮತ್ತೆ ಜೀವ ಪಡೆಯ ಬಹುದಿತ್ತು,

ಆಕೆ ನಮ್ಮ ಮಾತೆಯಾಗಿದ್ದರೆ,

ಅವಳ ಕರುಣೆ ಸಿಗುತಿತ್ತು ನಮಗೆ,

ನಾವು ಕೇವಲ ಶಿಲೆಯ ಶಿಲ್ಪಗಳಾಗಿದ್ದರೆ

ನಮ್ಮ ಕನಸುಗಳು ಹೊತ್ತು ನಡೆಯುತ್ತಿದ್ದವು

ಕನ್ನಡಿಗಳಂತೆ.

ನಾವು ಕಂಡಿರುವೆವು, ಮುಖಗಳನ್ನು

ನಮ್ಮ ಚೇತನವನ್ನುಳಿಸುವ ಅಂತಿಮ ಯುದ್ಧದಲ್ಲಿ,

ನಮ್ಮಲ್ಲಿನ ಕೊನೆಯವರ ಕೈಯಿಂದ

ಹತರಾಗುವವರ ಮುಖಗಳನ್ನು,

ಅತ್ತು ಬಿಟ್ಟೆವು ನಾವು, ಅವರ ಮಕ್ಕಳ

ಸಂಭ್ರಮವನ್ನು ಕಂಡು,

ನಾವು ಕಂಡಿರುವೆವು, ಮುಖಗಳನ್ನು,

ನಮ್ಮ ಕೊನೆಯ ನೆಲೆಯ ಕಿಟಕಿಗಳಿಂದ

ನಮ್ಮ ಮಕ್ಕಳನು ಹೊರಗೆಸೆಯುವವರ ಮುಖಗಳನ್ನು,

ನಮ್ಮ ತಾರೆಗಳು ಶುಭ್ರಗೊಳಿಸುವ ಕನ್ನಡಿಗಳನ್ನು.

ಈ ಕೊನೆಯ ಗಡಿಯ ಬಳಿಕ ಹೋಗಬೇಕೆಲ್ಲಿಗೆ ನಾವು?

ಎಲ್ಲಿಗೆ ಹಾರುತ್ತವೆ ಪಕ್ಷಿಗಳು ಕೊನೆಯ ಆಗಸದ ಬಳಿಕ?

ಎಲ್ಲಿ ಮಲಗುತ್ತವೆ ಗಿಡಗಳು,ಕೊನೆಯ ಗಾಳಿ ಬೀಸಿದ ಬಳಿಕ

ನಾವು ಬರೆಯುವೆವು ನಮ್ಮ ಹೆಸರುಗಳನ್ನು

ಕೆಂಪು ಮಂಜಿನ ಮೇಲೆ.

ರಾಷ್ಟ್ರ ಗೀತೆ ಹಾಡುವವನ ಕೈ ಕತ್ತರಿಸಿದರೇನಂತೆ?

ನಮ್ಮ ಮಾಂಸವು ಪೂರ್ತಿಗೊಳಿಸಲಿದೆ ಅದನ್ನು,

ನಾವಿಲ್ಲೇ ಸಾಯುವೆವು, ಈ ಕೊನೆಯ ನೆಲೆಯಲ್ಲಿ,

ಇಲ್ಲೇ, ಅಂದರೆ, ಇಲ್ಲೇ

ನಮ್ಮ ರಕ್ತವು ನೆಡುವುದು, ಆಲಿವ್ ಗಿಡಗಳನ್ನು.

ಜನಮನವೇ ನನ್ನ ಗುರುತು

ನೆರಳಲ್ಲಿ ನನ್ನನ್ನು ಗುರುತಿಸಲು ಅವರು ನಿರಾಕರಿಸಿದರು,

ಪಾಸ್ ಪೋರ್ಟ್ ನಲ್ಲಿದ್ದ ನನ್ನ ಚಿತ್ರ ಮಂದವಾಗಿ ಬಿಟ್ಟಿತು.

ಅವರ ಪಾಲಿಗೆ ನನ್ನ ಗಾಯಗಳೆಲ್ಲಾ ಪ್ರದರ್ಶನ ವಸ್ತುಗಳಾಗಿದ್ದವು,

ಫೋಟೊ ಉತ್ಸಾಹಿಗಳಾಗಿ ಬರುವ ವಿದೇಶಿ ಪ್ರವಾಸಿಗರಿಗಾಗಿ.

ಅವರು ನನ್ನನ್ನು ಗುರುತಿಸುವುದಿಲ್ಲ,

ಅಯ್ಯೋ, ನನ್ನ ಕೈಬಿಡಬೇಡಿ, ತಡೆಯಬೇಡಿ,

ಸೂರ್ಯಕಿರಣಗಳನ್ನು, ನನ್ನ ಹಸ್ತವನ್ನು ತಲುಪದಂತೆ

ಗಿಡಮರಗಳು ನನ್ನನ್ನು ಗುರುತಿಸುತ್ತವೆ,

ಬಿಟ್ಟುಬಿಡಬೇಡಿ ನನ್ನನ್ನು, ಕಾಂತಿರಹಿತ ಚಂದ್ರನಂತೆ

ದೂರದ ಏರ್ ಪೋರ್ಟ್ ಬಾಗಿಲತನಕ

ನನ್ನ ಹಸ್ತವನ್ನು ಹಿಂಬಾಲಿಸಿದ ಎಲ್ಲ ಪಕ್ಷಿಗಳು,

ಎಲ್ಲ ಗೋಧಿಹೊಲಗಳು, ಎಲ್ಲ ಸೆರೆಮನೆಗಳು,

ಎಲ್ಲ ಬಿಳಿಯ ಸಮಾಧಿ ಶಿಲೆಗಳು,

ಎಲ್ಲ ಬೀಸುವ ಕೈವಸ್ತ್ರಗಳು, ಎಲ್ಲ ಕಣ್ಣುಗಳು,

ಎಲ್ಲವೂ ನನ್ನಜೊತೆಗಿದ್ದವು,

ಆದರೆ ನನ್ನ ಪಾಸ್ ಪೋರ್ಟ್‌ನಿಂದ ಮಾತ್ರ

ಬಿಟ್ಟುಹೋಗಿದ್ದವು.

ನನಗಿನ್ನು ಹೆಸರು ಗುರುತು ಯಾವುದೂ ಇಲ್ಲವೇ?

ನನ್ನ ಕೈಯಾರೆ ನಾನೇ ನೀರೆರೆದು ಪೋಷಿಸಿದ ಮಣ್ಣಲ್ಲಿ?

ಇಂದು ಅಯ್ಯೂಬರು ► ಕೂಗಿದರು, ಆಕಾಶದೆಲ್ಲೆಡೆ ಮೊಳಗುವಂತೆ

ನನ್ನನ್ನು ಮತ್ತೊಮ್ಮೆ ಪಾಠವಾಗಿಸಬೇಡಿ,

ಮಹನೀಯರೇ, ಪ್ರವಾದಿಗಳೇ,

ಮರಗಳೊಡನೆ ಅವರ ಹೆಸರು ಕೇಳಬೇಡಿ,

ಅವರ ತಾಯಿ ಯಾರೆಂದು, ಕಣಿವೆಗಳೊಡನೆ ಕೇಳಬೇಡಿ,

ಬೆಳಕಿನ ಕಿರಣಗಳು ನನ್ನ ಹಣೆಯಿಂದ ಹೊಮ್ಮುತ್ತವೆ,

ನೀರ ಬುಗ್ಗೆಗಳು ನನ್ನ ಕೈಯಿಂದ ಚಿಮ್ಮುತ್ತವೆ,

ಎಲ್ಲ ಜನರ ಹೃದಯಗಳೇ ನನ್ನ ಗುರುತು,

ಆದ್ದರಿಂದ ನನ್ನಿಂದ ಕಿತ್ತುಕೊಳ್ಳಿ ನನ್ನ ಪಾಸ್ ಪೋರ್ಟ್ ಅನ್ನು.

► ಕುರ್ ಆನ್ ನಲ್ಲಿ ಪ್ರವಾದಿ ಅಯ್ಯೂಬ್ ರ ಕಥೆ ಇದೆ. ಕನ್ನಡ ಬೈಬಲ್ ನಲ್ಲಿ ಅವರನ್ನು ಯೋಬ ಎಂದು ಹಾಗೂ ಇಂಗ್ಲಿಷ್ ಬೈಬಲ್ ನಲ್ಲಿ ಜಾಬ್ (job) ಎಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಬೆಚ್ಚು