×
Ad

ಬಹುತ್ವ ಭಾರತದ ಭಾರತ ಮಾತೆ

Update: 2025-12-24 12:29 IST

ಟಿ. ಆರ್. ಭಟ್

ಅಂಕಿಸಂಕಿಗಳ ಗೋಜಲುಗಳನ್ನು ಬಿಡಿಸಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಭಾರತದ ಅರ್ಥವ್ಯವಸ್ಥೆಯ ಅವಾಂತರಗಳನ್ನು ಅರ್ಥಮಾಡಿಸುವುದರಲ್ಲಿ ನಿಸ್ಸೀಮರು ಟಿ. ಆರ್. ಭಟ್. ರಾಷ್ಟ್ರೀಕೃತ ಬ್ಯಾಂಕೊಂದರ ನಿವೃತ್ತ ಅಧಿಕಾರಿಯಾಗಿರುವ ಭಟ್, ಸುಮಾರು ಮೂರು ದಶಕಗಳ ಕಾಲ ಅದರ ಅಧಿಕಾರಿ ಸಂಘದ ಸಾರಥ್ಯ ವಹಿಸಿದ್ದರು. ಇವರು ಮೂಲತಃ ಮಂಗಳೂರಿನವರು. ಸಾರ್ವಜನಿಕರಂಗದ ಬ್ಯಾಂಕುಗಳ ಬಗ್ಗೆ ವಿಶ್ಲೇಷಣೆ ಅಲ್ಲದೆ ಪ್ರಸಕ್ತ ಆರ್ಥಿಕ, ಹಣಕಾಸು ಮತ್ತು ಸಾಮಾಜಿಕ ಆಗು ಹೋಗುಗಳ ಬಗ್ಗೆ ಆಸಕ್ತಿ ಹೊಂದಿದ್ದು, ಅವುಗಳ ಕುರಿತಂತೆ ಇಂಗ್ಲಿಷ್ ಮತ್ತು ಕನ್ನಡವೃತ್ತ ಪತ್ರಿಕೆಗಳಲ್ಲಿ ಮತ್ತು ಆನ್‌ಲೈನ್ ಮಾಧ್ಯಮಗಳಲ್ಲಿ ವಿಶ್ಲೇಷಣೆಗಳನ್ನು ಬರೆಯುತ್ತಿರುತ್ತಾರೆ.

ಹೋದ ಒಂದು ದಶಕದಲ್ಲಿ ಭಾರತವು ಅನಾದಿ ಕಾಲದಿಂದ ಆಚರಿಸಿಕೊಂಡು ಬಂದಿರುವ ಬಹುತ್ವ ಸಂಸ್ಕೃತಿಗೆ ವ್ಯವಸ್ಥಿತವಾದ ಹೊಡೆತಗಳು ಬೀಳುತ್ತಲೇ ಇವೆ. ಈ ವರ್ಷದ ಎರಡು ಘಟನೆಗಳು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿವೆ.

ಈ ವರ್ಷದ ಜೂನ್ ತಿಂಗಳಿನಲ್ಲಿ ಕೇರಳದ ರಾಜ್ಯಪಾಲರು ಅಧಿಕೃತ ಕಾರ್ಯಕ್ರಮಗಳಲ್ಲಿ ‘ಭಾರತ ಮಾತೆ’ಯ ಚಿತ್ರಗಳನ್ನು ಇರಿಸಿ ಅವುಗಳಿಗೆ ಪೂಜೆ ಮಾಡಿದರು. ಅವರ ವರ್ತನೆಯು ದೇಶವು ಸಂವಿಧಾನದಲ್ಲಿ ಒಪ್ಪಿಕೊಂಡ ಧರ್ಮನಿರಪೇಕ್ಷತೆಯ ತತ್ವಕ್ಕೆ ವಿರುದ್ಧವಾದುದು ಎಂಬ ಕಾರಣಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಚಿವರು ರಾಜ್ಯಪಾಲರ ವರ್ತನೆಗೆ ಆಕ್ಷೇಪವನ್ನು ಎತ್ತಿದರು.

ಅಕ್ಟೋಬರ್ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರೆಸ್ಸೆಸ್‌ಗೆ) 100 ವರ್ಷಗಳಾದ ನೆನಪಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 100 ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು. ನಾಣ್ಯದ ಒಂದು ಬದಿಯಲ್ಲಿ ಮೂರು ಮುಖಗಳ ಸಿಂಹದ ರಾಷ್ಟ್ರೀಯ ಲಾಂಛನ ಇದ್ದು, ಮತ್ತೊಂದು ಬದಿಯಲ್ಲಿ ಅಭಯ ಮುದ್ರೆಯಲ್ಲಿ ಸಿಂಹದ ಪಕ್ಕದಲ್ಲಿ ನಿಂತಿರುವ ‘ಭಾರತ ಮಾತೆ’ಯ ಚಿತ್ರವಿದೆ. ಬಿಡುಗಡೆ ಮಾಡುವ ಸಂದರ್ಭದಲ್ಲಿ ಪ್ರಧಾನಿಯವರು ‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಭಾರತ ಮಾತೆ’ಯ ಚಿತ್ರವನ್ನು ಭಾರತೀಯ ಕರೆನ್ಸಿಯಲ್ಲಿ ಮುದ್ರಿಸಲಾಗಿದೆ; ಇದು ಬಹಳ ಹೆಮ್ಮೆಯ ಮತ್ತು ಐತಿಹಾಸಿಕ ಮಹತ್ವವನ್ನು ಸೂಚಿಸುತ್ತದೆ’ ಎಂದು ಹೇಳಿದರು.

ಈ ಎರಡು ಘಟನೆಗಳ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಆಡಳಿತ ಪಕ್ಷ ಮತ್ತು ಅದರ ಬಳಗವು, ಆರೆಸ್ಸೆಸ್ ‘ಭಾರತ ಮಾತೆ’ಯನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ಹೋರಾಡಿತ್ತು ಎಂದು ಹೇಳಿಕೊಂಡು ಅದನ್ನು ಸ್ಮರಿಸುವ ಉದ್ದೇಶದಿಂದ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಿದ ಸರಕಾರದ ನಿರ್ಧಾರವನ್ನು ಶ್ಲಾಘಿಸಿವೆ. ವಿರೋಧ ಪಕ್ಷಗಳು ಸರಕಾರದ ನಡೆಯನ್ನು ಸಂವಿಧಾನದ ಆಶಯಕ್ಕೆ ವಿರೋಧಿ ಎಂದು ಟೀಕಿಸಿವೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತ ಮಾತೆಯ ಪರಿಕಲ್ಪನೆಯ ಉಗಮ, ಅದರಲ್ಲಾದ ಬದಲಾವಣೆಗಳು ಮತ್ತು ಅದರ ಔಚಿತ್ಯದ ಕುರಿತು ಒಂದಿಷ್ಟು ವಿವರಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತವಾಗುತ್ತದೆ.

ಅಖಂಡ ಭಾರತ ಮತ್ತು ಅದರ ಮಾತೆಯ ಕಲ್ಪನೆ

19ನೇ ಶತಮಾನದಲ್ಲಿ ಬ್ರಿಟಿಷರು ಭಾರತವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ತನಕ ಇಡೀ ಭಾರತವು ಒಂದೇ ದೇಶವೆಂಬ ಕಲ್ಪನೆಯೂ ಇರಲಿಲ್ಲ. ನೂರಾರು ಸ್ವತಂತ್ರ ‘ಚಕ್ರವರ್ತಿಗಳು’, ರಾಜರು, ನವಾಬರು, ಅರಸರು, ಅವರ ಸಾಮಂತರು ತಮ್ಮ ರಾಜ್ಯಗಳನ್ನು ಸಾರ್ವಭೌಮ ದೇಶಗಳೆಂದು ಪರಿಗಣಿಸಿದ್ದರು. ಮೌರ್ಯರ, ಗುಪ್ತರ ಮತ್ತು ಮೊಗಲರ ಕಾಲಾವಧಿಯಲ್ಲಿ ಮಾತ್ರ ಬಹುತೇಕ ಭೌಗೋಳಿಕ ಪ್ರದೇಶವು ಒಂದೇ ಆಡಳಿತಕ್ಕೆ ಒಳಪಟ್ಟಿತ್ತು. ಉಳಿದ ಕಾಲದಲ್ಲಿ ಇಂದು ಭಾರತ ಎನ್ನುವ ಭೌಗೋಳಿಕ ಪ್ರದೇಶವು ಅಖಂಡ ರಾಷ್ಟ್ರವಾಗಿರಲಿಲ್ಲ ಎಂಬುದು ವಾಸ್ತವ. ದೇಶದ ಉದ್ದಗಲಕ್ಕೂ ಅನೇಕ ರಾಜಮಹಾರಾಜರಿದ್ದರು; ರಾಜ್ಯವಿಸ್ತರಣೆಗೋಸ್ಕರ ಯುದ್ಧಗಳನ್ನೂ ನಡೆಸುತ್ತಿದ್ದರು. 1857ರ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ವೈಫಲ್ಯಕ್ಕೆ ಒಂದು ಮುಖ್ಯ ಕಾರಣ ಒಗ್ಗಟ್ಟಿನ ಅಭಾವ-ಅದರಿಂದಾಗಿ ಸಮರವು ಉತ್ತರಭಾರತಕ್ಕೆ ಮಾತ್ರ ಸೀಮಿತವಾಗಿತ್ತು.

 

1857ರ ಬಳಿಕ ಭಾರತದ ಹೆಚ್ಚಿನ ಭಾಗವು ಬ್ರಿಟಿಷ್ ಅರಸೊತ್ತಿಗೆಯ ಆಡಳಿತಕ್ಕೆ ಒಳಪಟ್ಟು ದೇಶದಲ್ಲಿ ಒಂದೇ ಪ್ರಭುತ್ವ ಜಾರಿಗೆ ಬಂತು. ಇಡೀ ಭಾರತ ಖಂಡವು ಒಂದು ದೇಶ ಎಂಬ ಕಲ್ಪನೆ ಹರಡಿತು. ಮುಂದೆ ಸ್ವಾತಂತ್ರ್ಯದ ಕುರಿತಾದ ಅರಿವು ಬೆಳೆದು, ಚಳವಳಿಯ ರೂಪವನ್ನು ತಾಳುತ್ತಿದ್ದಂತೆಯೇ ಸಂಪೂರ್ಣ ದೇಶವನ್ನು ಪ್ರತಿನಿಧಿಸುವ ಸಂಕೇತಗಳೂ ಅಗತ್ಯವಾದವು. 1947ರಲ್ಲಿ ದಾಸ್ಯದಿಂದ ಬಿಡುಗಡೆಯಾದ ಬಳಿಕ 550ಕ್ಕೂ ಮಿಕ್ಕಿದ್ದ ಸ್ವತಂತ್ರ ಮತ್ತು ಸಾಮಂತ ರಾಜ್ಯಗಳನ್ನು ಒಂದುಗೂಡಿಸಿ ಹೊಸತಾದ ಏಕೀಕೃತ ರಾಷ್ಟ್ರವೊಂದನ್ನು ರಚಿಸಬೇಕಾಯಿತು. ದೇಶದ ವಿವಿಧತೆಯನ್ನು ಗೌರವಿಸಿ ವಿಭಿನ್ನ ಮಟ್ಟದಲ್ಲಿ ಚರ್ಚೆಗಳು ನಡೆದು ಎಲ್ಲರನ್ನೂ ಒಳಗೊಳ್ಳುವ ಒಂದು ಹೆಸರು, ಒಂದು ಆಡಳಿತ ವ್ಯವಸ್ಥೆ, ಒಂದು ಭಾಷೆ, ಒಂದು ಧ್ವಜ, ಒಂದು ಲಾಂಛನ ಮತ್ತು ಒಂದು ರಾಷ್ಟ್ರಗೀತೆ ಇವುಗಳನ್ನು ಅಂಗೀಕರಿಸಿ ಜನವರಿ 1950ರಲ್ಲಿ ಭಾರತವು ಒಂದು ಸ್ವತಂತ್ರ ಸಾರ್ವಭೌಮ ಪ್ರಜಾತಂತ್ರವಾಗಿ ಹೊರಹೊಮ್ಮಿತು. ದೇಶದ ಸಂವಿಧಾನವು ಜನರ ಆಶೋತ್ತರಗಳನ್ನು ಪ್ರತಿನಿಧೀಕರಿಸುವ ಮೂಲಸಾಧನವಾಯಿತು. ಸಂವಿಧಾನದಲ್ಲಿ ಎಲ್ಲಿಯೂ ‘ಭಾರತ ಮಾತೆ’ ಯ ಬಗ್ಗೆ ಪ್ರಸ್ತಾಪವಿಲ್ಲ.

ಹಾಗೆಂದು 19ನೇ ಶತಮಾನದಲ್ಲಿಯೇ ಭಾರತ ಮಾತೆಯ ಕುರಿತು ವಿಭಿನ್ನ ಕಲ್ಪನೆಗಳು ಆರಂಭವಾಗಿದ್ದವು. ಕಲಾಕಾರರ ಚಿಂತನೆಗೆ ಅನುಸಾರವಾಗಿ ಆ ರೂಪಗಳು ಬದಲಾಗುತ್ತಾ ಹೋಗಿದ್ದವು. ಕೆಲವು ಕಲ್ಪನೆಗಳಲ್ಲಿ ಧಾರ್ಮಿಕ ಸಂಕೇತಗಳೂ ಕಾಣುತ್ತಿದ್ದವು. ಸ್ವಾತಂತ್ರ್ಯಪೂರ್ವದಲ್ಲಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ, ಕಲಾವಿದರಾದ ಅವನೀಂದ್ರನಾಥ ಠಾಕೂರ, ರಾಜಾ ರವಿವರ್ಮ, ಆನಂದ ಕುಮಾರಸ್ವಾಮಿ, ಅಮೃತಾ ಶೇರ್ ಗಿಲ್, ಸ್ವಾತಂತ್ರ್ಯಾನಂತರ ಸರ್ದಾರ್ ಶೋಭಾ ಸಿಂಗ್, ಎಂ.ಎಫ್. ಹುಸೇನ್, ಜೆ.ಬಿ. ದೀಕ್ಷಿತ್ ಹೀಗೆ ಒಬ್ಬೊಬ್ಬರ ಕಲ್ಪನೆ ಒಂದೊಂದು ರೀತಿಯಿತ್ತು. ಯಾವ ಕಲ್ಪನೆಯು ಇಡೀ ದೇಶವನ್ನು ಮತ್ತು ಇಲ್ಲಿನ ಬಹುತ್ವವನ್ನು ಪ್ರತಿನಿಧೀಕರಿಸಬಹುದು ಎಂಬುದರ ಬಗ್ಗೆ ದೇಶವು ಗಣತಂತ್ರವಾಗುವ ಮೊದಲೂ ಆ ಬಳಿಕವೂ ಒಮ್ಮತವಿರಲಿಲ್ಲ. ಜನರ ಮತ್ತು ನಾಯಕರ ಕಲ್ಪನೆಯು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗೆ ಸೀಮಿತವಾಗಿತ್ತು.

ಪ್ರಸಕ್ತ ಸರಕಾರದ ಧೋರಣೆ

ಪ್ರಧಾನಿ ಮೋದಿಯವರು ಆರೆಸ್ಸೆಸ್ ಸ್ಮಾರಕ ನಾಣ್ಯದಲ್ಲಿ ಇರುವ ಚಿತ್ರ ಭಾರತಮಾತೆಯದ್ದು ಎಂದು ಹೇಳಿದ್ದಾರೆ. ಈ ಕಲ್ಪನೆಯ ಭಾರತ ಮಾತೆಯ ಕೆಲವು ಲಕ್ಷಣಗಳನ್ನು ಇಲ್ಲಿ ಗಮನಿಸುವುದು ಅಗತ್ಯ. ಆ ‘ಮಾತೆ’ ಸರ್ವಾಭರಣ ಭೂಷಿತೆ, ಆಕೆಯ ಶಿರದಲ್ಲಿ ಒಂದು ವಿಶೇಷವಾದ ಕಿರೀಟ, ಒಂದು ಕೈಯಲ್ಲಿ ಭಗವಾಧ್ವಜ ಮತ್ತೊಂದರಲ್ಲಿ ಅಭಯಮುದ್ರೆ. ಪಕ್ಕದಲ್ಲೇ ಆರೆಸ್ಸೆಸ್‌ನ ಸ್ವಯಂಸೇವಕರು ತಮ್ಮ ಶೈಲಿಯಲ್ಲಿ ಆಕೆಗೆ ವಂದಿಸುತ್ತಾರೆ. ಚಿತ್ರದ ಸ್ತ್ರೀಯ ಕೈಯಲ್ಲಿರುವುದು ಭಾರತದ ತ್ರಿವರ್ಣಧ್ವಜವಲ್ಲ ಎಂಬುದೂ ಇಲ್ಲಿ ಗಮನಾರ್ಹವಾದ ಅಂಶ.

19ನೇ ಶತಮಾನದ ಕೊನೆಗೆ ತಿರುವಾಂಕೂರಿನ (ಇಂದಿನ ತಿರುವನಂತಪುರ) ಕಲಾವಿದ ರಾಜಾ ರವಿವರ್ಮರು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲ್ಪಡುವ ದೇವ ದೇವತೆಗಳನ್ನು, ರಾಜರನ್ನು, ಮುನಿಗಳನ್ನು, ಪೌರಾಣಿಕ ಸ್ತ್ರೀಯರನ್ನು ತಮ್ಮ ವರ್ಣಚಿತ್ರಗಳಲ್ಲಿ ಬಿಂಬಿಸುವ ಮೂಲಕ ಖ್ಯಾತಿ ಪಡೆದರು. 20ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಕ್ಯಾಲೆಂಡರುಗಳಲ್ಲಿ ದೇವಿ ದೇವತೆಗಳ ಚಿತ್ರಗಳು ಅವರ ಕಲ್ಪನೆಯಿಂದ ಪ್ರಭಾವಿತವಾಗಿದ್ದವು. ರವಿವರ್ಮರು ರಾಜಮನೆತನದವರಾದುದರಿಂದ ಅವರ ಕೃತಿಗಳು ಸಾಮಾನ್ಯವಾಗಿ ಸಮಾಜದ ‘ಕುಲೀನ’ ಮನೆತನದ ವೇಷಭೂಷಣಗಳಿಂದ ಅಲಂಕೃತವಾಗಿರುತ್ತಿದ್ದವು. ಮೈಬಣ್ಣ, ಧರಿಸಿದ ಸೀರೆ, ಹಾಕಿದ ಆಭರಣಗಳು-ಎಲ್ಲವೂ ಸಮಾಜದ ಉಚ್ಚ ಸ್ತರದ ಮಹಿಳೆಯರನ್ನು ಅಥವಾ ಪುರುಷರನ್ನು ಪ್ರತಿಬಿಂಬಿಸುತ್ತಿದ್ದವು. 1898ರಲ್ಲಿ ಅವರು ರಚಿಸಿದ ಭಾರತ ಮಾತೆಯ ಚಿತ್ರ ಇದೇ ಲಕ್ಷಣಗಳನ್ನು ಹೊಂದಿತ್ತು. 1935ರಲ್ಲಿ ರವಿವರ್ಮ ಮುದ್ರಣಾಲಯವು ರಚಿಸಿದ ಚಿತ್ರದಲ್ಲಿ ಆಗ ತಾನೇ ರೂಪುಗೊಳ್ಳುತ್ತಿದ್ದ ಭಾರತದ ಸ್ವತಂತ್ರ ಧ್ವಜವನ್ನು ಅವಳ ಕೈಗೆ ಕೊಡಲಾಗಿತ್ತು (1950ರಲ್ಲಿ ದೇಶವು ಒಪ್ಪಿಕೊಂಡ ಧ್ವಜಕ್ಕಿಂತ ಸ್ವಲ್ಪ ಭಿನ್ನವಾದ ಧ್ವಜ ಅದು). ರವಿವರ್ಮರ ಹೆಸರಿನ ಎರಡೂ ಮಾದರಿಗಳಲ್ಲಿ ‘ಭಾರತ ಮಾತೆ’ ಚತುರ್ಭುಜೆಯಾಗಿದ್ದಳು.

 

ಹುಟ್ಟುವ ಜಿಜ್ಞಾಸೆಗಳು

ಮೇಲೆ ಗಮನಿಸಿದ ಲಕ್ಷಣಗಳು ಎಷ್ಟು ಪ್ರಾತಿನಿಧಿಕ ಎಂಬ ಜಿಜ್ಞಾಸೆಯು ಸಹಜವಾಗಿ ಹುಟ್ಟುತ್ತದೆ. ಓರ್ವ ಕಲಾವಿದನ ಕಲ್ಪನೆಯನ್ನು ಇಡೀ ದೇಶದಲ್ಲಿ ಸಾರ್ವತ್ರಿಕಗೊಳಿಸುವುದು ಎಷ್ಟು ಸಮಂಜಸ? ಬಹುತ್ವವೇ ಸಮಾಜದ ಆಧಾರವಾದಾಗ ಯಾರ ತಾಯಿ ಮಾದರಿಯಾಗುತ್ತಾಳೆ? ಅವಳ ಸ್ವರೂಪವನ್ನು ಹೇಗೆ ಕಲ್ಪಿಸುವುದು? ಆ ಸ್ವರೂಪವು ದೇಶದ ಬಹುತೇಕ ಪ್ರಜೆಗಳನ್ನು ಜಾತಿ, ಮತ, ಭಾಷೆ, ಪ್ರದೇಶದ ಭೇದವಿಲ್ಲದೆ ಪ್ರತಿಬಿಂಬಿಸಬೇಡವೆ?

ಒಂದು ಉದಾಹರಣೆಯು ಈ ಸಮಸ್ಯೆಗೆ ಕನ್ನಡಿ ಹಿಡಿಯುತ್ತದೆ. ಭಾರತ ಮಾತೆಯು ದೈವೀ ಸ್ವರೂಪಿಯಾದರೆ, ಆಕೆ ಸಮಾಜದ ಯಾವ ವರ್ಗದ ದೇವತೆಯ ಅಥವಾ ದೈವದ ಪ್ರತೀಕವಾಗುತ್ತಾಳೆ? ವಾಸ್ತವವಾಗಿ ಆಸ್ತಿಕರ ದೇವರಲ್ಲಿಯೂ ಮೇಲು ಕೀಳು ಎಂಬ ತಾರತಮ್ಯವನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಕರಾವಳಿಯ ಸಂಪ್ರದಾಯಗಳನ್ನು ಗಮನಿಸಿದರೆ, ದೈವಭೀರುಗಳಿಗೆ ತಾವು ಆರಾಧಿಸುವ ದೈವ, ದೇವರುಗಳು ಉಳಿದ ಎಲ್ಲವರಿಂದಲೂ ಮೇಲು, ಮಿಕ್ಕಿದ ದೈವಗಳು ಕೆಳಮಟ್ಟದವರು ಎಂಬ ನಂಬಿಕೆ ಆಳವಾಗಿ ಬೇರು ಬಿಟ್ಟಿದೆ. ಆದಿವಾಸಿಗಳಿಗೆ ಅಥವಾ ಸಮಾಜದ ತಳವರ್ಗಗಳಿಗೆ ಪೂಜಾರ್ಹವಾದ ಶಕ್ತಿಗಳಲ್ಲಿ ಬ್ರಾಹ್ಮಣರು ದೈವತ್ವವನ್ನು ಆರೋಪಿಸುವುದಿಲ್ಲ, ಒಂದು ವೇಳೆ ಆ ರೀತಿ ಆರೋಪಿಸಿದರೂ ಆ ಶಕ್ತಿಗಳಲ್ಲಿಯೂ ವರ್ಣಭೇದವನ್ನು ಕಲ್ಪಿಸಲಾಗುತ್ತದೆ.

ಹೆಚ್ಚಿನ ಆಸ್ತಿಕ ಹಿಂದೂಗಳು ತಮ್ಮ ಸಂಕಲ್ಪದ ದೇವ, ದೇವತೆಗಳಿಗೆ ನೀಡುವ ರೂಪ, ತೊಡಿಸುವ ಪೋಷಾಕು, ಹಾಕುವ ಆಭರಣಗಳು, ಹರಕೆಯ ರೂಪದಲ್ಲಿ ಒದಗಿಸುವ ನೈವೇದ್ಯ ಮುಂತಾದ ವಿಚಾರಗಳಲ್ಲಿ ನಿರ್ದಿಷ್ಟವಾದ ಸಾರ್ವತ್ರಿಕವಾಗಿ ಅನ್ವಯಿಸುವ ಒಂದು ಕಲ್ಪನೆಯೇ ಇಲ್ಲ. ಕೆಲವು ಪಂಗಡಗಳಲ್ಲಿ ಪೂಜೆಗೆ ಮೂರ್ತಿಗಳ ಅಗತ್ಯ ಇಲ್ಲ. ಮನೆಯಲ್ಲಿ ವಿಶೇಷ ಪೂಜೆಗಳ ಸಂದರ್ಭದಲ್ಲಿ ದೈವೀ ಶಕ್ತಿಯನ್ನು ಭಕ್ತಿಯಿಂದ ಪ್ರಾರ್ಥಿಸಿ ದೇವರ ಕೋಣೆಯಲ್ಲಿ ಅಥವಾ ಹಜಾರದಲ್ಲಿ ತಾವು ತಾತ್ಕಾಲಿಕವಾಗಿ ರಚಿಸಿದ ಮಂಡಲಕ್ಕೆ ಆ ಶಕ್ತಿಯನ್ನು ಆಹ್ವಾನಿಸಿ ಸ್ತೋತ್ರಗಳ ಮೂಲಕ ಆರಾಧಿಸುತ್ತಾರೆ; ಆ ಬಳಿಕ ಆ ಶಕ್ತಿಯನ್ನು ಸ್ವಸ್ಥಾನಕ್ಕೆ ಮರಳಲು ಮನೆಯ ಹಿರಿಯರು ನಿವೇದಿಸಿಕೊಳ್ಳುವುದನ್ನು ನಾನು ಸ್ವತಃ ಗಮನಿಸಿದ್ದೇನೆ. ಈ ಕಲ್ಪನೆಯಲ್ಲಿ ಹುಟ್ಟುವ ರೂಪವನ್ನು ಮೂರ್ತೀಭವಿಸುವುದು ಕಷ್ಟಸಾಧ್ಯ.

ಪ್ರಾತಿನಿಧಿಕತೆ ಅಂದರೆ ಹೇಗಿರಬೇಕು?

ದೇಶದ ಪ್ರಜೆಗಳಾದ ಮುಸಲ್ಮಾನರು, ಕ್ರೈಸ್ತರು, ಬೌದ್ಧರು ಮತ್ತು ಸಿಖ್ಖರಲ್ಲಿ ತಮ್ಮ ತಮ್ಮ ದೇವರ ಬಗ್ಗೆ ಹಿಂದೂಗಳಿಗಿಂತ ತೀರಾ ಭಿನ್ನವಾದ ಕಲ್ಪನೆಯಿದೆ. ಹಿಂದೂಗಳಲ್ಲಿಯೇ ಆದಿವಾಸಿಗಳ, ಗಿರಿಜನರ, ಸಾಮಾಜಿಕವಾಗಿ ಹಿಂದುಳಿದ ಪ್ರಜೆಗಳ ಪರಿಕಲ್ಪನೆಗಳು, ಪೂಜಾ ವಿಧಾನಗಳು ವಿಶಿಷ್ಟವಾಗಿವೆ. ಆ ಕಲ್ಪನೆಗಳು ಊಹೆಗೆ ನಿಲುಕದಷ್ಟು ಭಿನ್ನವಾಗಿವೆ ಎಂದು ಸಮಾಜಶಾಸ್ತ್ರಜ್ಞರ ಅಧ್ಯಯನಗಳು ಹೇಳುತ್ತವೆ.

ಸಂಖ್ಯಾ ಬಾಹುಳ್ಯದ ದೃಷ್ಟಿಯಿಂದ ನೋಡಿದರೆ ‘ಟೈಮ್ಸ್ ಆಫ್ ಇಂಡಿಯ’ದ 2021ರ ಒಂದು ಅಧ್ಯಯನದ ಪ್ರಕಾರ 2019-20 ರಲ್ಲಿ ಒಟ್ಟು ಹಿಂದೂಗಳಲ್ಲಿ ಸುಮಾರು 75ಶೇ.ದಷ್ಟು ಹಿಂದುಳಿದ ವರ್ಗಕ್ಕೆ ಸೇರಿದವರಿದ್ದರು (ಅವರಲ್ಲಿ ಒಬಿಸಿಗಳು -45ಶೇ., ಎಸ್‌ಸಿಗಳು-19ಶೇ. ಮತ್ತು ಎಸ್‌ಟಿಗಳು-11ಶೇ.). ಪಂಚಾಯತ್ ರಾಜ್ ಸಂಸ್ಥೆಯ ಅಂದಾಜಿನಂತೆ ಈ ಪ್ರಮಾಣ ಸುಮಾರು 72ಶೇ. ವಿತ್ತು. ಅವರೆಲ್ಲರ ಭಾರತಮಾತೆಯ ಕಲ್ಪನೆ ಅವರವರ ದೇವರಿಂದ ಭಿನ್ನವಾಗಿರಲು ಹೇಗೆ ಸಾಧ್ಯ?

ಈ ದೃಷ್ಟಿಯಿಂದ ಸಮಕಾಲೀನ ಕಲಾವಿದ ಡಾ.ಲಾಲ್ ರತ್ನಾಕರರ ಭಾರತಮಾತೆಯ ಚಿತ್ರ ಹೆಚ್ಚು ಸಾಂಕೇತಿಕವಾಗುತ್ತದೆ. ಆಕೆ ದೇವತೆಯಲ್ಲ, ಸಮಾಜದ ನಡುವಿನ ಓರ್ವ ಹೆಣ್ಣು ಮಗಳು. ಆಕೆಯ ಕೃಷ್ಣ ವರ್ಣ, ಅವಳು ಉಟ್ಟ ಬಟ್ಟೆ, ತಲೆಗೆ ಹೊದಿಸಿದ ಸೆರಗು, ಅವಳ ಕೈಯಲ್ಲಿರುವ ಸಲಕರಣೆಗಳು, ಜೊತೆಗಿರುವ ಎಮ್ಮೆ ದೇಶದ 72ಶೇ.ಕ್ಕಿಂತಲೂ ಅಧಿಕ ಸಂಖ್ಯಾಬಲವಿರುವ ಜನರನ್ನು ಪ್ರತಿಬಿಂಬಿಸುತ್ತವೆ. ಮಾತ್ರವಲ್ಲ ಅವಳ ಕೈಯಲ್ಲಿ ರಾಷ್ಟವನ್ನು ಒಗ್ಗೂಡಿಸುವ ತ್ರಿವರ್ಣ ಧ್ವಜವಿದೆ. ಈ ಎಲ್ಲ ಕಾರಣಗಳಿಂದಾಗಿ ರತ್ನಾಕರರ ಭಾರತಮಾತೆಯ ಕಲ್ಪನೆಯು ದೇಶದ ಬಹುತ್ವವನ್ನು ಹೆಚ್ಚು ಪ್ರತಿನಿಧಿಸುತ್ತದೆ.

ದೇಶದ ಭೂಪಟ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಲಾಂಛನಗಳು ನಮ್ಮ ರಾಷ್ಟ್ರೀಯ ಸಮಗ್ರತೆಯ ದ್ಯೋತಕ. ಹೀಗಿದ್ದರೂ

ಆರೆಸ್ಸೆಸ್‌ಗೆ ಮೂರು ಬಣ್ಣಗಳನ್ನು ಒಳಗೊಂಡ ಭಾರತದ ರಾಷ್ಟ್ರಧ್ವಜ ಅಮಾನ್ಯವಾಗಿತ್ತು. (ಇದೇ ಕಾರಣಕ್ಕಾಗಿ ಬಹುಷಃ ಅದರ ಭಾರತಮಾತೆಯ ಕೈಯಲ್ಲಿ ಭಾರತದ ಧ್ವಜಕ್ಕೆ ಸ್ಥಾನವಿಲ್ಲ.)

ದೇಶದ ಪ್ರಾತಿನಿಧಿಕ ಶಕ್ತಿಯನ್ನು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಒಂದು ಪಂಗಡದ ದೈವಿಕ ಕಲ್ಪನೆಯ ಚೌಕಟ್ಟಿನಲ್ಲಿ ಬಂಧಿಸಿಡುವುದು ಧರ್ಮಾತೀತ ಪ್ರಜಾತಂತ್ರದ ಆಶಯಕ್ಕೆ ವಿರುದ್ಧವಾಗುತ್ತದೆ. ಆ ಕಲ್ಪನೆಯ ಚಿತ್ರ ಒಂದು ಯೋಚನೆ, ಒಂದು ಪಂಗಡ ಅಥವಾ ಸ್ಥಳವನ್ನು ಮಾತ್ರ ಬಿಂಬಿಸಿದಾಗ ಅದು ಸಾರ್ವತ್ರಿಕವಾಗುವುದಿಲ್ಲ. ದೇಶವನ್ನು ಬಿಂಬಿಸುವ ಕಲ್ಪನೆ ಸರ್ವರ ಕಲ್ಪನೆಗಳ ಅಂಶಗಳನ್ನು ಒಳಗೊಂಡಿರಬೇಕು; ಆ ಚಿತ್ರವು ಸಮಾಜದ ವಾಸ್ತವವನ್ನು ಮತ್ತು ಅದರ ಆಶಯಗಳಲ್ಲಿ ಒಳಗೊಂಡ ತತ್ವಗಳನ್ನು ಸೆರೆಹಿಡಿಯಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಟಿ. ಆರ್. ಭಟ್

contributor

Similar News

ಬೆಚ್ಚು