ಮಣ್ಣು ಮಾತಾಡಿಸುವ ಕೈಗಳು ಕುಂಬಾರರ ಲೋಕದೊಳಗೊಂದು ಸುತ್ತು
ಇರ್ಷಾದ್ ಎಂ.ವೇಣೂರು
ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಮೈಸೂರಿನಲ್ಲಿ ಫೊಟೋ ಜರ್ನಲಿಸ್ಟ್ ಆಗಿ ವೃತ್ತಿ ಜೀವನ ಆರಂಭಿಸಿದರು. ಬೆಂಗಳೂರು, ಮಂಗಳೂರಿನಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಜಕೀಯ, ಸಾಮಾಜಿಕ ಕಳಕಳಿ, ಅಪರಾಧ, ಕ್ರೀಡಾ ವರದಿಗಾರಿಕೆ ಕ್ಷೇತ್ರದಲ್ಲಿ ಅವರು ಕೆಲಸ ಮಾಡಿದ್ದಾರೆ. ಉಡುಪಿಯಲ್ಲಿ 2022ರಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಅವರು ತೆಗೆದ ಚಿತ್ರ ದೇಶದಾದ್ಯಂತ ಗಮನ ಸೆಳೆದಿತ್ತು. ಅವರಿಗೆ ಅಂತರಾಷ್ಟ್ರೀಯ ಮಟ್ಟದ ಫೊಟೋಗ್ರಫಿ ಸ್ಪರ್ಧೆಗಳಲ್ಲಿ ಪ್ರಶಸ್ತಿ ಲಭಿಸಿದೆ.
ಕುಂಬಾರನ ಮಡಕೆ ಏಕಾಏಕಿ ಚಕ್ರದ ಮೇಲೆ ಹುಟ್ಟುವುದಿಲ್ಲ. ಮಣ್ಣನ್ನು ತಂದು ದಿನಗಟ್ಟಲೆ ನೀರಿನಲ್ಲಿ ನೆನೆಸಿಟ್ಟು, ಮುದ್ದೆಯಾಗಿ ಮಲಗಿಸಿದ ಮಣ್ಣೇ ಮಡಕೆಗಳು. ಚಕ್ರದ ಮೇಲೆ ಕುಂಬಾರನು ಆ ಮುದ್ದೆಯ ಮಣ್ಣಿಗೆ ಮೊದಲ ಸ್ಪರ್ಶ ನೀಡುವ ಕ್ಷಣವೇ ಅದ್ಭುತ. ಚಕ್ರ ಸುತ್ತಿಕೊಳ್ಳುತ್ತದೆ ಮಣ್ಣು ಮೇಲೇಳುತ್ತದೆ ಕುಂಬಾರನ ಬೆರಳುಗಳು ಮಣ್ಣಿನೊಳಗೇ ಮಾತನಾಡುವಂತಿರುತ್ತದೆ. ಈ ಸಂವಾದದ ಫಲವೇ ಮಡಕೆ. ಪ್ಲಾಸ್ಟಿಕ್ ಮತ್ತು ಲೋಹ ಪಾತ್ರೆಗಳ ನಡುವೆ ಮಡಕೆ ಕೆಲಕಾಲ ಮರೆವು ಕಂಡರೂ, ಇಂದಿನ ಪರಿಸರ ಜಾಗೃತಿ ಮತ್ತು ಆರೋಗ್ಯ ಅರಿವು ಮಡಕೆಯನ್ನು ಮತ್ತೆ ಮನೆಯೊಳಗೆ ತರುತ್ತಿದೆ. ನಗರಗಳಲ್ಲಿ ಮಡಕೆಯ ನೀರು ಮತ್ತೆ ಫ್ಯಾಷನ್. ಹೋಟೆಲ್ಗಳಲ್ಲಿ ಮಡಕೆಬಿರಿಯಾನಿ, ಮಡಕೆ ಚಹಾ ಜನಪ್ರಿಯ. ಮಡಕೆ ಮತ್ತೆ ತನ್ನ ಹಳೆಯ ಗಾಂಭೀರ್ಯವನ್ನು ಪಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಕೊಪ್ಪದಲ್ಲಿ ಹಲವಾರು ಕುಂಬಾರರ ಕುಟುಂಬಗಳಿವೆ. ಅವರ ಪೈಕಿ ಹರೀಶ್ ಕುಂಬಾರ ಅವರು ಮಡಕೆ ಮಾಡುವ ಕ್ಷಣಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾದವು.