×
Ad

ಬೆಚ್ಚು

Update: 2025-12-24 12:34 IST

ವೆಂಕಟ್ರಮಣ ಗೌಡ

ಸಾಹಿತ್ಯಕ ಪತ್ರಿಕೋದ್ಯಮದಲ್ಲಿ ಕೆಲ ಕಾಲ ‘ಹಂಗಾಮ’ ಮಾಡಿದ್ದ ವೆಂಕಟ್ರಮಣ ಗೌಡ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರು. ಪತ್ರಕರ್ತರಾಗಿ ಚಟುವಟಿಕೆಯಲ್ಲಿದ್ದರೂ, ಅವರೊಳಗಿನ ಸೃಜನಶೀಲ ಮನಸ್ಸು ಸದಾ ಕತೆ, ಕವಿತೆ, ಹರಟೆ ತುಡಿಯುತ್ತಲೇ ಇರುತ್ತದೆ. ಪಾಂಗು, ಉರಿವ ಜಾತ್ರೆ ಅವರ ಎರಡು ಕವನ ಸಂಕಲನಗಳು. ಈ ಸರ್ತಿಯ ಸುಗ್ಗಿ ಕಥಾಸಂಕಲನ. ತರುವಾಯ, ಕವರ ಅವರ ಕಾದಂಬರಿಗಳು. ‘ಬೆಚ್ಚು’ ಕತೆಯಲ್ಲಿ ಒಂದು ನಾಪತ್ತೆ ಮತ್ತು ಒಂದು ಕೊಲೆಯನ್ನು ಕೇಂದ್ರವಾಗಿಟ್ಟು ಮನುಷ್ಯರೊಳಗಿನ ಸೋಗಲಾಡಿತನಗಳನ್ನು ತೆರೆದಿಡುತ್ತಾರೆ.

ಕೃಷ್ಣ ತಾಂಡೇಲನ ಕೊಲೆಯಾಗಿದೆ ಎಂದು ರಾಜು ಫೋನಿನಲ್ಲಿ ಹೇಳಿದಾಗ, ಅದು ಅನಿರೀಕ್ಷಿತ ಎಂದಾಗಲೀ ನಿರೀಕ್ಷಿತವಾಗಿತ್ತು ಎಂದಾಗಲೀ ಅನ್ನಿಸದ ವಿಚಿತ್ರ ಭಾವನೆಗೆ ಸಿಕ್ಕಿ ಮನಸ್ಸು ಚಡಪಡಿಸಿತು. ‘ಎರಡು ಮೂರು ದಿನಗಳೇ ಆಗಿಹೋದವು ಮಾರಾಯ. ಕಾಣಿಸುತ್ತಿಲ್ಲ ಎನ್ನುತ್ತಿದ್ದರು. ಕಡೆಗೆ ಹೆಣ ಸಿಕ್ಕಿದೆ’ ಎಂದು ರಾಜು ವಿವರವಾಗಿ ಹೇಳಿದ. ‘ನಾಸನಗುಂಡಿ ಹಳ್ಳದ ದಂಡೆ ಮೇಲೆಯೇ ಎಲ್ಲರೂ ಓಡಾಡುವ ದಾರಿಯಿಂದ ಸುಮಾರು ಹತ್ತು ಗಜ ದೂರದಲ್ಲೇ ಬಾಡಿ ಬಿದ್ದಿತ್ತಂತೆ. ನೋಡಿದ್ದ ಕೆಲವರು ನೋಡಿಯೂ ಸುಮ್ಮನೆ ಇದ್ದರೊ ಏನು ಕತೆಯೊ’ ಎಂದ. ‘ನಾನು ಇವತ್ತೇ ರಾತ್ರಿ ಹೊರಟು ನಾಳೆ ಅಲ್ಲಿರುತ್ತೇನೆ. ನೀನು ಮನೆಯಲ್ಲೇ ಸಿಗುತ್ತಿಯಲ್ಲ?’ ಎಂದು ಹೇಳಿ ಫೋನಿಟ್ಟೆ. ಈ ಜಂಜಡದಲ್ಲಿ ನಾನು ಅಲ್ಲಿಗೆ ಹೋಗಿ ಮಾಡುವುದೇನು ಎಂಬ ಸ್ಪಷ್ಟತೆ ಇಲ್ಲದಿದ್ದರೂ ಬರುವುದಾಗಿ ಹೇಳಿದ್ದಕ್ಕೆ, ಕೃಷ್ಣ ತಾಂಡೇಲ ಗೆಳೆಯ ಎಂಬುದಕ್ಕಿಂತ ಹೆಚ್ಚಾಗಿ ಅವನ ಮೇಲಿನ ಅಪಾರ ಗೌರವ ಕಾರಣವಾಗಿತ್ತು.

ಐದಾರು ವರ್ಷಗಳ ಕೆಳಗೆ ಮಳೆಗಾಲದಲ್ಲಿ ಅದೇ ನಾಸನಗುಂಡಿ ಹಳ್ಳದ ಸೆಳವಿನಲ್ಲಿ ಕೊಚ್ಚಿಹೋದನೆಂಬ ಗುಲ್ಲೆದ್ದ ಬಳಿಕ ಇದ್ದಾನೋ ಸತ್ತಿದ್ದಾನೊ ಎಂಬ ಒಂದು ಸುಳಿವೂ ಇಲ್ಲದೆ ಕಾಣದಾಗಿದ್ದ ಬೆಚ್ಚು ನನ್ನ ನೆನಪಿನಲ್ಲಿ ದಿಗ್ಗನೆ ಬಂದು ನಿಂತ. ‘ಅವನು ಹಾಗೆಲ್ಲ ನೀರಲ್ಲಿ ಕೊಚ್ಚಿಹೋಗುವುದು ಶಕ್ಯವೇ ಇಲ್ಲ. ಅವನನ್ನು ಮುಗಿಸಿ, ಕಡೆಗೆ ಇಂಥ ಕಥೆ ಕಟ್ಟಿದ್ದಾರೆ’ ಎಂದು ಈ ಕೃಷ್ಣ ತಾಂಡೇಲ ದೊಡ್ಡ ಆರೋಪವನ್ನೇ ಮಾಡಿ, ಹಲವು ತಿಂಗಳುಗಳ ಕಾಲ ಹೋರಾಟ ನಡೆಸಿದ್ದ. ಹತ್ತಾರು ವರದಿಗಳನ್ನು ಒಂದರ ಹಿಂದೆ ಒಂದರಂತೆ ಪತ್ರಿಕೆಗೆ ಬರೆದಿದ್ದ. ಪೊಲೀಸರ ಜೊತೆ ಬೆಚ್ಚುವಿನ ಕುಟುಂಬದ ಪರವಾಗಿ ಓಡಾಡಿದ್ದ. ಕೋರ್ಟಿಗೂ ಅಲೆದಿದ್ದ. ಯಾರು ಕೊಲೆ ಮಾಡಿರಬಹುದು ಎಂಬುದರ ಬಗೆಗೂ ಆತನಿಗೆ ಸ್ಪಷ್ಟತೆಯಿತ್ತು. ಮತ್ತದು ಎಲ್ಲರಿಗೂ ಸ್ಪಷ್ಟವಾಗಿತ್ತು. ಆದರೆ ಕಡೆಗೆ ಸಾಕ್ಷ್ಯಗಳ ಆಟದಲ್ಲಿ ಕೃಷ್ಣ ತಾಂಡೇಲ ಸೋಲಬೇಕಾಗಿ ಬಂದಿತ್ತು. ಹಾಗೆಂದು ಆತನ ದನಿಯೇನೂ ಬದಲಾಗಿರಲಿಲ್ಲ. ಆತನ ಜೀವ ಬೆಚ್ಚುವಿನ ಕುಟುಂಬಕ್ಕೆ ನ್ಯಾಯ ಕೊಡಿಸಲಾಗಲಿಲ್ಲವಲ್ಲ ಎಂಬ ತಳಮಳದಲ್ಲೇ ಇತ್ತು.

ಬೆಚ್ಚು ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಎಂದು ಮಾತು ಹರಡಿದಾಗ ನಾನು ಊರಲ್ಲೇ ಇದ್ದೆ. ಅಂಥ ಗಟ್ಟಿಮುಟ್ಟಾದ ಹೊಂತಗಾರ ಹುಡುಗ ಕೊಚ್ಚಿಕೊಂಡು ಹೋದರೂ ಎಲ್ಲೋ ಗಿಡವೋ ಬಂಡೆಯೋ ಆಸರೆಗೆ ಸಿಕ್ಕಿ ಬದುಕಿ ಬರುತ್ತಾನೆ ಎಂದೇ ಅಂದುಕೊಂಡಿದ್ದೆವು. ಆದರೆ ಮಳೆ ಕಮ್ಮಿಯಾಗಿ, ಹಳ್ಳದ ಕೆನ್ನೀರು ಕೂಡ ಇಳಿದು ಸೆಳವು ಮರೆತು ಹಳ್ಳ ಶಾಂತವಾದರೂ ಬೆಚ್ಚು ವಾಪಸ್ ಬರಲಿಲ್ಲ. ಸತ್ತೇ ಹೋದನೇ ಎನ್ನಿಸಿದಾಗಲೂ, ಹಳ್ಳದ ದಂಡೆಯ ಗುಂಟ ಎಷ್ಟು ದೂರ ಹೋದರೂ ಅವನ ದೇಹವೂ ಸಿಕ್ಕಿರಲಿಲ್ಲ. ದೂರು ದುಃಖ ದುಗುಡಗಳಲ್ಲೇ, ಮತ್ತಷ್ಟು ಮತ್ತಷ್ಟು ಹುಡುಕಾಟದಲ್ಲೇ, ಮುಗಿಯದ ಸಂಕಟದಲ್ಲೇ ದಿನಗಳಲ್ಲ ತಿಂಗಳುಗಳು, ಕಡೆಗೆ ವರ್ಷವೇ ದಾಟಿ, ವರ್ಷದ ಮೇಲೆ ವರ್ಷಗಳೂ ಬಂದುಹೋದವು.

 

ಬೆಚ್ಚು ಹಳ್ಳದಲ್ಲಿ ಕೊಚ್ಚಿಹೋದ ಎಂಬುದಷ್ಟೇ ಊರಿನ ಕಿವಿಗೆ ಬಿದ್ದಿತ್ತೇ ಹೊರತು, ಅದನ್ನು ಕಂಡವರು ಯಾರಿದ್ದರು ಎಂಬುದಕ್ಕೂ ತಲೆಕೆಡಿಸಿಕೊಳ್ಳದ ವಿಚಿತ್ರ ಮಂಕು ಕವಿದಿದ್ದಂತೆ ಊರು ಮೂಕವಾಗಿತ್ತು. ನಾವ್ಯಾರೊ ಕೆಲವರು ಕೇಳಿದೆವಾದರೂ, ಅದು ಅಷ್ಟು ಬಲವಾಗಿಯೇನೂ ಇರಲಿಲ್ಲ. ಊರಿನ ನಂಬಿಕೆಯೂ ಸಡಿಲಾಗಲಿಲ್ಲ. ಕಡೆಗೆ ಅದೇ ಹೌದು ಎನ್ನುವಂತೆ ಆಯಿತು. ಆದರೆ ಒಬ್ಬ ಕೃಷ್ಣ ತಾಂಡೇಲ ಮಾತ್ರ ಅದನ್ನೆಂದೂ ನಂಬಿರಲಿಲ್ಲ. ಆ ವಿಷಯದಲ್ಲಿ ಅವನು ಊರಿಗೇ ಎದುರಾಗಿ ನಿಂತ. ಊರಿಂದೇ ಒಂದಾದ್ರೆ ಪ್ವಾರಂದೇ ಒಂದು ಎಂದು ಇಡೀ ಊರು ಅವನ ವಿರುದ್ಧ ಆಡಿಕೊಂಡರು. ಹೇಗೆಂದರೆ ಹಾಗೆ ಜರೆಯಿತು. ಇಲ್ಲದ್ದು ಹೇಳಿ ಏನೋ ಮಸಲತ್ತು ಮಾಡಬೇಕು ಅಂತಿದ್ದೀಯೇನೋ ಎಂದು ಎಗರಾಡಿದ್ದರು ಜನ. ಕೃಷ್ಣ ತಾಂಡೇಲ ಮಾತ್ರ ಅವಾವುದಕ್ಕೂ ಜಗ್ಗಲಿಲ್ಲ, ಬಗ್ಗಲಿಲ್ಲ. ನಾವೇ ತುಸು ಹಿಂಜರಿದು, ಬೇಡದ ಉಸಾಬರಿ ನಿನಗ್ಯಾಕೊ ಎಂದು ಅವನನ್ನು ಹಿಂದಕ್ಕೆಳೆಯಲು ನೋಡಿದ್ದೆವು. ಇಂಥ ಹೊತ್ತಲ್ಲೂ ಹೇಡಿಗಳ ಥರ ನೀವಿರೋದೂ ಅಲ್ಲದೆ ನನ್ನನ್ನೂ ಎಳೀತೀರಲ್ಲೊ ಎಂದು ನಮ್ಮ ಮೇಲೆ ಉರಿದುಬಿದ್ದಿದ್ದ. ಅವನ ಕಣ್ಣಲ್ಲಿನ ಕಿಡಿಗೆ ಅವನ ಒಡನಾಡಿಗಳಾಗಿದ್ದ ನಾವೇ ಥರಗುಟ್ಟಿ ಹೋಗಿದ್ದೆವು.

ಆ ಇಡೀ ಕೇಸಲ್ಲಿ ಕೃಷ್ಣ ತಾಂಡೇಲನ ಆಸಕ್ತಿಯನ್ನು ಸಹಿಸದವರು ಮತ್ತು ಅವನು ಅದಕ್ಕೆ ಬೆನ್ನು ಹಾಕುವಂತೆ ಮಾಡಬೇಕೆಂದುಕೊಂಡವರು ಅವನ ಹೆಸರಿಗೇ ಕಳಂಕ ತರುವುದಕ್ಕೂ ಹೇಸಲಿಲ್ಲ. ಬೆಚ್ಚುವಿನ ಕುಟುಂಬಕ್ಕೆ ನ್ಯಾಯ ಕೊಡಿಸುವ ನೆವ ಮಾಡಿಕೊಂಡು ಅವನು ಇಬ್ಬರು ಪುಟ್ಟ ಮಕ್ಕಳ ತಾಯಾಗಿರುವ ಬೆಚ್ಚುವಿನ ಪ್ರಾಯದ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ನೋಡುತ್ತಿದ್ದಾನೆ ಎಂದೇ ಪುಕಾರು ಹಬ್ಬಿಸಲಾಯಿತು. ಅವರಿಬ್ಬರ ನಡುವೆ ಆಗಲೇ ಸಂಬಂಧ ಇದೆ ಎನ್ನುವಲ್ಲಿಯವರೆಗೂ ಮತ್ತೆ ಕೆಲವರು ಅದನ್ನು ಎಳೆದಾಡಿ ಗಬ್ಬೆಬ್ಬಿಸಿದರು. ಇದೆಲ್ಲವೂ ಸ್ವತಃ ಕೃಷ್ಣ ತಾಂಡೇಲನ ಕುಟುಂಬದೊಳಗೂ ದುಗುಡವನ್ನೆಬ್ಬಿಸಿತ್ತು. ಕೃಷ್ಣ ತಾಂಡೇಲ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಅದು ತನ್ನ ಕರ್ತವ್ಯ ಎನ್ನುವಂತೆ ಗಟ್ಟಿಯಾಗಿಬಿಟ್ಟಿದ್ದ. ಅವನ ಕಣ್ಣೆದುರು, ಮಗ ಬದುಕಿದ್ದಾನೊ ಸತ್ತಿದ್ದಾನೊ ಎಂಬುದೇ ಗೊತ್ತಾಗದೆ ಮುಗಿಯದ ಸಂಕಟದಲ್ಲಿ ಹುಚ್ಚಿಯಂತಾಗಿದ್ದ ಬೆಚ್ಚುವಿನ ತಾಯಿಯ ಕಳಾಹೀನ ಮುಖವೇ ಬಂದು ನಿಂತು, ನೀನಾದರೂ ನೋಡು ಮಗನೆ ಎನ್ನುತ್ತಿದ್ದ ಚಿತ್ರವೊಂದೇ ಇತ್ತು.

 

ಬೆಚ್ಚು ಹಳ್ಳದಲ್ಲಿ ಕೊಚ್ಚಿಹೋದನೆಂದು ಗುಲ್ಲಾದ ದಿನ ಅವನು ಮನೆಯಿಂದ ಯಾವ ಗಳಿಗೆಯಲ್ಲಿ ಹೊರಟಿದ್ದ ಎಂಬುದೂ ಅವನ ಹೆಂಡತಿಗೆ ಗೊತ್ತಿರಲಿಲ್ಲ. ಯಾರೋ ಬಂದು ಪಾಗಾರದಾಚೆಯಿಂದಲೇ ಕೂಗಿ ಅವನನ್ನು ಕರೆದುಕೊಂಡು ಹೋದರೆಂಬುದನ್ನು ನೋಡಿದ್ದವಳು ಅವನ ತಾಯಿ ಮಾತ್ರ. ಯಾರೋ ಬಂದು ಕೆಲಸಕ್ಕೆ ಕರೆದುಕೊಂಡು ಹೋಗುವುದು, ಯಾವುದೋ ಹೊತ್ತಲ್ಲದ ಹೊತ್ತಲ್ಲಿ ಅವನು ಮನೆಗೆ ಬರುವುದು ಹೊಸ ವಿಷಯವೇನೂ ಆಗಿರಲಿಲ್ಲ. ಆದರೆ ಅವತ್ತು ಜೋರು ಮಳೆಯಲ್ಲಿ ಯಾರು ಬಂದಿದ್ದರು, ಎಲ್ಲಿಗೆ ಕರೆದುಕೊಂಡು ಹೋದರು ಎಂಬುದು ಗೊತ್ತಾಗಲೇ ಇಲ್ಲ. ಬೆಳಗೆಲ್ಲ ಮನೆಯ ಜಗಲಿಯಲ್ಲೇ ಇದ್ದ, ಮಕ್ಕಳನ್ನಾಡಿಸಿ ಖುಷಿಪಡಿಸಿದ್ದ ಬೆಚ್ಚು ಇದ್ದಕ್ಕಿದ್ದಂತೆ ಜೋರು ಮಳೆಯಲ್ಲೇ ಹೋದವನು ಮತ್ತೆ ಬರಲೇ ಇಲ್ಲ. ಹಳ್ಳದಲ್ಲಿ ಕೊಚ್ಚಿಹೋದನಂತೆ ಎಂಬ ಸುದ್ದಿಯಷ್ಟೇ ಬಂದು ಅವನ ತಾಯಿಯನ್ನೂ ಹೆಂಡತಿ ಮಕ್ಕಳನ್ನೂ ಕಂಗೆಡಿಸಿತ್ತು, ಕಣ್ಣೀರ ಹಳ್ಳದಲ್ಲಿ ಮುಳುಗಿಸಿತ್ತು. ಹೊರಗೆ ಊರನ್ನೇ ತುಂಬಿದಂತೆ ತುಂಬಿ ಹರಿಯುತ್ತಿದ್ದ ನಾಸನಗುಂಡಿ ಹಳ್ಳದ ಅಬ್ಬರದ ಮುಂದೆ ಅವರ ಗೋಳು ಅತ್ಯಂತ ಅಸಹಾಯಕ ಮತ್ತು ಕ್ಷೀಣ ಸದ್ದು ಮಾತ್ರವಾಗಿ ಇಂಗುತ್ತಿತ್ತು.

ನಾಸನಗುಂಡಿ ಹಳ್ಳದ ಮಳೆಗಾಲದ ಅವತಾರವೇ ಬೇರೆ, ಬೇಸಗೆಯಲ್ಲಿನ ಅದರ ನಯ ನಾಜೂಕಿನ ವೈಯಾರವೇ ಬೇರೆ. ಗುಡ್ಡದ ಕಡೆಯಿಂದ ಎಲ್ಲ ದುಗುಡಗಳನ್ನೇ ಹೊತ್ತುಕೊಂಡ ಧಾವಂತದಲ್ಲಿ ಇಳಿಯುವ ಮಣ್ಣಬಣ್ಣದ ನೀರಿನ ಅದರ ರೌದ್ರ ಎರಡೂ ದಂಡೆಗಳನ್ನು ಮೀರಿ, ಊರ ಬಯಲು ಹೊಲ ಗದ್ದೆ ತೋಟಗಳನ್ನೆಲ್ಲ ಆವರಿಸಿ, ಊರ ದೇವರು ನಾಸನನ್ನೂ ಮುಳುಗಿಸಿ ಮೈಮೇಲೆ ಬಂದಂತೆ ಆಡುತ್ತದೆ. ಒಮ್ಮೆ ಇಳಿಯಿತೆಂದರೆ, ಇಷ್ಟು ಮಟ್ಟ ಬಂದಿತ್ತೆ ಎಂದು ನಂಬಲೂ ಆಗದಷ್ಟು ಮಟ್ಟಿಗೆ ಅಮಾಯಕತೆಯಿಂದ, ಅನಾಯಾಸದ ಲಜ್ಜೆಯಿಂದ ಇಷ್ಟೇ ಇಷ್ಟಾಗಿ ಮುದುಡಿಕೊಳ್ಳುತ್ತದೆ.

ಮಳೆಗಾಲದ ನಾಸನಗುಂಡಿ ಹಳ್ಳದ ಈ ಸ್ವರೂಪ ಊರಿಗೆ ಗೊತ್ತೇ ಇರುವುದಾದರೂ, ಪ್ರತಿ ಮಳೆಗಾಲವೂ ಅದು ಹುಟ್ಟಿಸುವ ಭಯ ಮಾತ್ರ ಬೇರೆಯೇ ಆಗಿರುತ್ತದೆ. ಅದರ ಸವಾಲಿಗೆ ಎದೆಗೊಟ್ಟು ನಿಂತು ಸಡಗರ ಅನುಭವಿಸುವವರ ಪಾಲಿನ ಹಬ್ಬವೂ ಈ ಭಯದ ನಡುವೆಯೇ ಬಿಚ್ಚಿಕೊಳ್ಳುವುದುಂಟು. ದಂಡೆಯ ಬಯಲಿನಲ್ಲಿಯೂ ಎದೆಮಟ್ಟಕ್ಕೆ ಬಂದು ಬಡಿಯುವ ನೀರೊಳಗೆ ನಿಂತು ಹಳ್ಳದಲ್ಲಿ ಕೊಚ್ಚಿಕೊಂಡು ಬರುವ ಕಟ್ಟಿಗೆ, ಯಾಣದ ಕಡೆಯ ತೆಂಗಿನ ಕಾಯಿ ಹಿಡಿಯಲು ನಿಲ್ಲುವವರ ಉಮೇದು ಒಂದೆಡೆಗಾದರೆ, ಅವರ ಎದೆಗಾರಿಕೆಯನ್ನು ಆನಂದಿಸುವವರ ಬೆರಗು ಮತ್ತೊಂದೆಡೆ. ಒಂದು ಸಲವಂತೂ ತೆಂಗಿನ ಕಾಯಿ ಹಿಡಿಯಲು ನಿಂತಿದ್ದವನೊಬ್ಬ, ಅಷ್ಟು ದೂರದಿಂದ ನೀರ ಮೇಲೆ ಕಂಡೂ ಕಾಣದಂತೆ ತೇಲಿಕೊಂಡು ಬಂದದ್ದನ್ನು ಆಹಾ ಎಂದು ಹಿಡಿದೆತ್ತಿ ನೋಡಿದರೆ, ಅದು ಯಾವುದೋ ಹೆಂಗಸಿನ ರುಂಡವಾಗಿತ್ತು. ಕೈಯಲ್ಲಿ ಅದನ್ನು ಹಿಡಿದುಕೊಂಡಿದ್ದವ ಚೀರಿಕೊಂಡುಬಿಟ್ಟಿದ್ದ. ಬೇರೆ ಯಾರಿಗೂ ಏನೂ ತಿಳಿಯದಂತಾಗಿತ್ತು. ಅದನ್ನು ಕಂಡು ಕಂಗೆಟ್ಟವನು ಯಾವುದೋ ಕ್ಷಣದಲ್ಲಿ ಅದನ್ನು ಬಿಟ್ಟು ಅದು ನೀರ ಸೆಳವಿನಲ್ಲಿ ಸೇರಿ ಕಣ್ಮರೆಯಾಗಿದ್ದರೂ, ಆತನ ಸ್ಥಿತಿ ಮಾತ್ರ ಅಯೋಮಯವಾಗಿತ್ತು. ಬಹುಶಃ ಎರಡೊ ಮೂರೊ ದಿನಗಳ ಹಿಂದೆ ನಗುನಗುತ್ತಿದ್ದ ಆ ಮುಖ, ಎಷ್ಟೆಲ್ಲ ಮಾತುಗಳನ್ನು ಪಟಪಟಾಂತ ಆಡಿದ್ದ ಆ ಮುಖ, ಕಣ್ಸನ್ನೆಯಲ್ಲೇ ಯಾರನ್ನೋ ಮೋಡಿ ಮಾಡಿದ್ದ ಆ ಮುಖ ದೇಹದಿಂದ ಬೇರ್ಪಟ್ಟು ನಿರ್ಜೀವವಾಗಿತ್ತು. ಕಟ್ಟ ಕಡೆಯ ಕ್ಷಣಗಳಲ್ಲಿ ಆ ಕಣ್ಣುಗಳಲ್ಲಿ ಇದ್ದುದು ಸುಡುವಂಥ ಆಕ್ರೋಶವಾಗಿತ್ತೆ, ಅತ್ಯಂತ ಭೀತಿಯಾಗಿತ್ತೆ, ಬೀಸಿ ಬಂದು ಕತ್ತರಿಸಿದ್ದ ಕತ್ತಿಯ ಕ್ರೂರ ರೂಪ ಆ ಕಣ್ಣುಗಳಲ್ಲೂ ಪ್ರತಿಫಲಿಸಿತ್ತೆ?

ಈ ನಾಸನಗುಂಡಿ ಹಳ್ಳ, ತನ್ನೊಳಗಿಳಿದು ಈಜು ಕಲಿಯುವ ಎಷ್ಟೆಲ್ಲ ಮಕ್ಕಳ ಮೈಯ ಬಳುಕಿನಿಂದ ಹಿಡಿದು ದೊಡ್ಡವರ ಅಸಡ್ಡಾಳತನದವರೆಗೂ ಎಲ್ಲ ಬಗೆಯ ಲೋಕವ್ಯವಹಾರಗಳನ್ನು ಕಂಡೂ ಕಾಣದಂತಿರುವ ಅದರ ನೀರು, ಎಂದೂ ನಿಲ್ಲದೆ ಹರಿಯುತ್ತಿರುವ ಅದರ ಚೈತನ್ಯ, ಆ ಕಾರಣದಿಂದಲೇ ಒದಗಿರುವ ನಿರ್ಮಲ ಗಾಂಭೀರ್ಯ ಎಲ್ಲವೂ ಊರನ್ನು ಕಾದಿರುವಂತೆ ಭಾಸವಾಗುವುದಿದೆ. ಅಂಥದ್ದರ ಒಳಗೂ ಯಾರದೋ ಪಾಪಗಳನ್ನು ಹೊರುವ, ಮರೆಮಾಚುವ, ಮರೆಸುವ, ಕಡೆಗೆ ತಣ್ಣಗೆಂದರೆ ತಣ್ಣಗೆ ಉಳಿದುಬಿಡುವ ಈ ಬಗೆ ಒಂದು ನಿಗೂಢದಂತೆ ಆವರಿಸುತ್ತದೆ.

ಆ ಯಾವಳದೋ ರುಂಡವನ್ನು ಅವತ್ತು ಎಲ್ಲಿಂದಲೋ ಹೊತ್ತು ತಂದು ಯಾರಿಗೋ ತೋರಿಸಿ ಮತ್ತೆ ಹೊತ್ತೊಯ್ದ ಹಾಗೆಯೆ, ಕ್ಷುಲ್ಲಕ ಕಾರಣದ ಹೊಡೆದಾಟಗಳಿಗೆ, ದ್ವೇಷ ಈರ್ಷ್ಯೆಗಳ ವಿಕಾರಕ್ಕೆ, ನೆತ್ತರ ಕಥೆಗಳಿಗೆ ನದರಾಗುತ್ತಲೇ ಇರುತ್ತದೆ ಈ ಹಳ್ಳದ ಅಂತಃಸಾಕ್ಷಿ. ಅದು ಎಷ್ಟೆಲ್ಲ ಕಥೆಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುವ ಮಹಾಕಥನದಂತೆ ಮೈಯೆಲ್ಲ ಮಾತಾಗಿ ನುಡಿಯುತ್ತದೆ. ಅದಕ್ಕೆ ಬೆಚ್ಚು ಯಾವ ಲೆಕ್ಕ, ಕೃಷ್ಣ ತಾಂಡೇಲ ಯಾವ ಲೆಕ್ಕ, ಅಥವಾ ಅವರ ಗತಿಗೆ ಕಾರಣರಾದವರ ಸಣ್ಣತನ ಸೇಡು ಸಂಚುಗಳು ಯಾವ ಲೆಕ್ಕ? ಲೆಕ್ಕ ಹಾಕುತ್ತ ಸವೆಯುತ್ತಿರುವುದು ನಾವು ಮಾತ್ರ.

ಬೆಚ್ಚು ಬರಲಿಲ್ಲ ಎಂಬ ಆ ಹೊತ್ತಿನ ಆತಂಕ, ಆತ ಬರುವುದಿಲ್ಲ ಎಂಬ ಸತ್ಯವಾಗಿ ನಡುಗಿಸಿತಾದರೂ, ಅವನು ಸತ್ತಿದ್ದಾನೆ ಎಂದು ಕೂಡ ಹೇಳಲಾರದ, ಭಾವಿಸಲಾರದ, ಒಂದು ಮುಕ್ತಾಯ ಬೀಳಲಾರದ ಅಸಾಧಾರಣ ಸಂಕಟವಾಗಿ ಉಳಿದುಬಿಟ್ಟಿತ್ತು. ಒಂದು ಅದಮ್ಯ ನಿರೀಕ್ಷೆಯನ್ನು ಕಾಪಿಟ್ಟುಕೊಂಡೇ ಕಾದಿದ್ದ ಅವನ ತಾಯಿ ಆನಂತರ ಸುಮಾರು ಮೂರು ವರ್ಷಗಳನ್ನೂ ಕಾಯುತ್ತಲೇ ಸವೆಸಿ ಕಣ್ಮುಚ್ಚಿದ್ದಳು. ಅವಳು ಹೋದದ್ದೇ, ಬೆಚ್ಚುವಿನ ಹೆಂಡತಿ ಮತ್ತು ಬೆಳೆಯುತ್ತಿದ್ದ ಮಕ್ಕಳು ನಿಜಕ್ಕೂ ಅನಾಥರಾದರು. ನೀನು, ನಿನ್ನಿಬ್ಬರು ಮಕ್ಕಳು ನಮಗೆ ಭಾರವಲ್ಲ ಮಗಳೆ ಎಂದು ಅವಳ ಹೆತ್ತವರು ಹೇಳಿದರೂ ತವರಿಗೆ ಹೋಗಲು ಬೆಚ್ಚುವಿನ ಹೆಂಡತಿ ಮಾತ್ರ ತಯಾರಿರಲಿಲ್ಲ. ಗಂಡ ಬರುತ್ತಾನೆ, ನಾನು ಕಾಯುತ್ತಲೇ ಇರುತ್ತೇನೆ ಎಂದು ಹಠ ಹಿಡಿದೇ ಇದ್ದಳು. ಕಡೆಗೆ ಮಕ್ಕಳೊಂದಿಗೆ ತವರುಮನೆಗೇ ಹೋಗಿ ಉಳಿಯುವಂತೆ ಕೃಷ್ಣ ತಾಂಡೇಲನೇ ಅವಳನ್ನು ಒಪ್ಪಿಸಿದ್ದ. ಅವಳ ಚಾರಿತ್ರ್ಯವಧೆಗೆಂದೇ ನಿಂತಿದ್ದವರಿಂದ ಅವಳನ್ನು ಕಾಪಾಡುವುದು ಅವನಿಗೆ ಮುಖ್ಯವಾಗಿತ್ತು. ಮಾತ್ರವಲ್ಲದೆ, ಅವಳ ಮೇಲೂ ಈ ಪಾಪಿಗಳು ಎರಗಿಬಿಡಬಹುದು ಎಂಬ ಭಯವೂ ಅವನಿಗಿತ್ತು.

 

ಬೆಚ್ಚುವಿನ ಹೆಂಡತಿ ಈ ಊರು ಬಿಟ್ಟು ತವರುಮನೆಗೆ ಹೋದ ಮೇಲೆ, ಬೆಚ್ಚುವಿನ ನೆರಳಿಗೆ ಭಯಪಡುತ್ತಿದ್ದವರು ನಿರಾಳವಾದರು. ಆದರೆ, ನಿಜವಾಗಿಯೂ ಅವರ ಹಿಂದೆ ಹರಡಿಕೊಂಡಿದ್ದ ನೆರಳು ಇನ್ನಷ್ಟು ಬೆಳೆದಿತ್ತು. ಬೆಚ್ಚು ಇಲ್ಲವಾಗಿರುವ ಸಂಕಟದ ಭಾರವನ್ನು ಎದೆ ತುಂಬ ಹೊತ್ತಿದ್ದ ಕೃಷ್ಣ ತಾಂಡೇಲ ಅವರೆಲ್ಲರ ಬೆನ್ನು ಬಿದ್ದಿದ್ದ. ಅವರೆಲ್ಲರನ್ನೂ ಬಣ್ಣಗೇಡು ಮಾಡಿ ನಿಲ್ಲಿಸುವ ಒಂದು ದಿನ ಬಂದೇ ಬರುತ್ತದೆ ಎಂಬ ನಂಬಿಕೆ ಅವನೊಳಗೆ ಗಟ್ಟಿಯಾಗಿತ್ತು. ಬೆಚ್ಚು ನಿಜವಾಗಿಯೂ ಏನಾಗಿ ಹೋದ ಎಂಬ ಸತ್ಯವನ್ನು ಅಡಗಿಸಿಟ್ಟುಕೊಂಡು ತಣ್ಣಗಿರುವ ನಾಸನಗುಂಡಿ ಹಳ್ಳ ಅವನೆದುರಿನ ದೊಡ್ಡ ಪ್ರಶ್ನೆಯಂತೆ ಇತ್ತು. ಅದರಲ್ಲಿ ಯಾವ ವಿಕಾರವೂ ಇರಲಿಲ್ಲ. ಆದರೆ ಅದೇಕೆ ಕೊಂದು ಗೆದ್ದಿದ್ದೇವೆ ಎಂದುಕೊಂಡವರನ್ನು ಹೊತ್ತು ಮೆರೆಸುತ್ತಿದೆ ಎಂಬುದು ಅವನಲ್ಲಿ ವಿಷಾದ ಹೆಪ್ಪುಗಟ್ಟುವುದಕ್ಕೆ ಕಾರಣವಾಗಿತ್ತು. ಈ ಪ್ರಶ್ನೆಗಳ ಬೆನ್ನು ಹತ್ತಿರುವ ತಾನು ಎಲ್ಲಿಗೆ ಹೋಗಿ ಮುಟ್ಟಬಹುದು ಎಂಬುದರ ಅಂದಾಜು ಕೂಡ ಅವನಿಗೆ ಇದ್ದಂತಿತ್ತು. ಆದರೆ ತನ್ನ ಬಗ್ಗೆ ಚಿಂತಿಸಿ ಬೆಚ್ಚುವಿಗೆ ದ್ರೋಹ ಬಗೆಯಲಾರೆ ಎಂದುಕೊಂಡವನೊಳಗೆ ಮೀನಮೇಷದ ಎಣಿಕೆಗೆ ಜಾಗವಿರಲಿಲ್ಲ.

ಬೆಚ್ಚುವನ್ನು ನಮ್ಮೆಲ್ಲರಿಗಿಂತಲೂ ಹೆಚ್ಚು ಕೃಷ್ಣ ತಾಂಡೇಲ ಹಚ್ಚಿಕೊಂಡಿದ್ದ. ಅದು ಹಲವು ವರ್ಷಗಳಲ್ಲಿ ಬೆಳೆದ ಮತ್ತು ಸಂಬಂಧದ ಯಾವುದೇ ಬಳ್ಳಿಯ ಹಂಗನ್ನೂ ಮೀರಿದ್ದ ಅನುಬಂಧ ಎನ್ನುವಂತಿತ್ತು. ಬೆಚ್ಚುವಿನ ಬಗೆಗಿನ ಚಿತ್ರಗಳು ಕೃಷ್ಣ ತಾಂಡೇಲನ ಒಳಗಿರುವಷ್ಟು ಇನ್ನಾರೊಳಗೂ ಇರುವುದು ಸಾಧ್ಯವಿರಲಿಲ್ಲ.

ಹನ್ನೆರಡೊ ಹದಿಮೂರೊ ವರ್ಷದವನಿದ್ದಾಗ ಬೆಚ್ಚುವನ್ನು ಅವನ ಅಪ್ಪ ತಾನು ಕೆಲಸ ಮಾಡುವ ಒಡೆದೀರ ಮನೆಯ ಕಡೆ ಕರೆದುಕೊಂಡು ಹೋಗಿದ್ದ. ಅವರ ಮನೆ ಜಗಲಿಯಿಂದ ತುಂಬ ದೂರ ಅಂಗಳದ ಒಂದು ಮೂಲೆಯಲ್ಲಿ ಬೆಚ್ಚುವನ್ನು ನಿಲ್ಲಿಸಿಕೊಂಡಿದ್ದ ಅವನಿಗೆ ಬಹಳ ಮರ್ಯಾದೆ ಕೊಡುತ್ತಿರುವ ಹಾಗೆ ಮಾತಾಡಿದ್ದ ಅವರು ಇವನ ಕಡೆ ನೋಡಿ, ‘ತೋಟದಲ್ಲಿ ಕಳೆ ಗಿಳೆ ಕೀಳುವುದು ಮಾಡ್ತಾನೊ ನಿನ್ನ ಮಗ? ಕಲಿಸಿಕೊಡು, ಮಾಡಲಿ’ ಎಂದಿದ್ದರು. ಅವನ ಅಪ್ಪ ಸಣ್ಣಗೆ ಮುದುರಿಕೊಳ್ಳುತ್ತ, ಬೆಚ್ಚು ಶಾಲೆಗೆ ಹೋಗುತ್ತಿರುವುದರ ಬಗ್ಗೆ ಹೇಳಿದ್ದ. ಅವರು ಒಮ್ಮೆ ವಿಚಿತ್ರವಾಗಿ ಬೆಚ್ಚುವಿನ ಕಡೆಗೂ ಅವನ ಅಪ್ಪನ ಕಡೆಗೂ ನೋಡಿ, ಹ್ಹಹ್ಹಹ್ಹಾ ಎಂದು ನಗುತ್ತ ಹೊರಟುಹೋಗಿದ್ದರು. ಯಾರೋ ಇಬ್ಬರಿಗೂ ಕುಡಿಯಲು ತೆಂಗಿನ ಚಿಪ್ಪಿನಲ್ಲಿ ಏನೋ ತಂದು ಕೊಟ್ಟರು. ಕುಡಿ ಕುಡಿ ಎಂದು ಅಪ್ಪ ಹೇಳುತ್ತಿದ್ದರೆ, ಆಗಲೇ ಭುಸುಗುಟ್ಟುತ್ತಿದ್ದ ಬೆಚ್ಚು ತನ್ನ ಕೈಯಲ್ಲಿದ್ದ ತೆಂಗಿನ ಚಿಪ್ಪಿನಲ್ಲಿ ಇರುವುದೇನು ಎಂಬುದನ್ನೂ ನೋಡದೆ ಅದನ್ನು ಅಪ್ಪನ ಮೇಲೆಯೇ ಎಸೆದು ಅಲ್ಲಿಂದ ದುಡುದುಡು ಹೊರಟುಬಂದುಬಿಟ್ಟಿದ್ದ.

ಅವನ ಪೈಕಿಯ ಹುಡುಗಿಯೊಬ್ಬಳು ಮದುವೆಗೆ ಮುಂಚೆಯೇ ಬಸಿರಾದದ್ದು ಊರನ್ನೇ ಕಲಕಿತ್ತು. ಅದಕ್ಕೆ ಕಾರಣನಾದವನ ಹೆಸರು ಹೇಳಿ ಆಕೆ ಬೆಚ್ಚುವಿನ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಆ ಮಾತಿನ ಮೇಲೆ ಬೆಚ್ಚು ತನ್ನಪ್ಪ ಒಡೆದೀರು ಎಂದು ಯಾರಿಗಾಗಿ ಜೀವ ಸವೆಸಿದ್ದನೊ ಅವರ ಕಡೆಯವನ ಕಾಲರು ಹಿಡಿದು ಕೇಳಿದ್ದ. ಮಾರನೇ ದಿನ ಇತ್ಯರ್ಥ ಮಾಡುವುದೆಂದು ಊರವರು ಹೇಳಿದರು. ರಾತ್ರಿ ಬೆಳಗಾಗುವುದರೊಳಗೆ ಏನಾಗಿತ್ತೊ ಗೊತ್ತಿಲ್ಲ. ಎಲ್ಲರೂ ಸೇರಿ, ಆಕೆಯನ್ನು ಕೇಳಿದಾಗ, ಅವಳನ್ನು ಮಾತಾಡಲು ಬಿಡದೆ ಅವಳ ಅಪ್ಪನೇ ಮುಂದೆ ಬಂದು, ‘ಅವಳ ಮಾತೆಲ್ಲ ಕಿವಿ ಮೇಲೆ ಹಾಕಿಕೊಳ್ಳಬೇಡಿ, ಅವಳಿಗೆ ತಲೆಕೆಟ್ಟಿದೆ. ಎರಡು ದಿನ ಯಾವಳದೋ ಜೊತೆ ಪಕ್ಕದ ಊರಿಗೆ ಹೋದೋಳು ಹೀಗೆ ದರಿದ್ರ ಹೊತ್ತು ನಿಂತಿದ್ದಾಳೆ. ಈ ಊರಲ್ಲಿ ಯಾರೂ ಇದಕ್ಕೆ ಹೊಣೆಯಲ್ಲ. ನಾವೇ ಇವಳನ್ನು ಕರೆದುಕೊಂಡು ಊರು ಬಿಟ್ಟು ಹೋಗ್ತೇವೆ’ ಎಂದಿದ್ದ. ಯಾವನ ಕಾಲರನ್ನು ಊರವರ ಎದುರೇ ಬೆಚ್ಚು ಹಿಡಿದೆಳೆದಿದ್ದನೊ ಆತ ಮೀಸೆಯಡಿಯೇ ತಣ್ಣಗೆ ನಕ್ಕಿದ್ದು ಬೆಚ್ಚುವಿಗೆ ಕಾಣದೇ ಇರಲಿಲ್ಲ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಯಾರದೋ ಮರ್ಯಾದೆ ಕಳೆಯಬಾರದು ಎಂದು ಊರವರು ದೊಡ್ಡ ಮನುಷ್ಯರಂತೆ ಬೆಚ್ಚುವಿಗೆ ಹೇಳಿದ್ದರು. ಕಟ್ಟುಮಸ್ತಾದ ಆಳು ಬೆಚ್ಚು ಅದುರಿಹೋಗುವಂತಾಯಿತು. ಅದೇ ರಾತ್ರಿ ಆ ಹುಡುಗಿ ನೇಣು ಹಾಕಿಕೊಂಡು ಸತ್ತಾಗ, ಬೆಚ್ಚು ಮತ್ತಷ್ಟು ಕುಗ್ಗಿಹೋಗಿದ್ದ.

ಪಂಚಾಯ್ತಿ ಎಲೆಕ್ಷನ್ನಿಗೆ ನಿಲ್ಲಲು ಬೆಚ್ಚು ಮನಸ್ಸು ಮಾಡಿದಾಗ, ಊರೆಲ್ಲ ಮೈತುಂಬ ಇರುವೆ ಹರಿದಾಡಿದಂತೆ ಆಡಿತ್ತು. ಲಾಗಾಯ್ತಿನಿಂದ ಪಂಚಾಯ್ತಿಯನ್ನು ಆಳುತ್ತ ಬಂದಿದ್ದವರು ತಕರಾರೆತ್ತುವುದು ಬೇರೆ, ಆದರೆ ಅವನ ಕಡೆಯವರೇ ಬೆಚ್ಚುವಿಗೆ ವಿರುದ್ಧ ನಿಂತರು. ನಮಗೆಲ್ಲ ಅದರ ಉಸಾಬರಿ ಬೇಡವೊ ಎಂದು ಹೇಳುವವರಿಂದ ಹಿಡಿದು, ನೀನು ಎಲೆಕ್ಷನ್ನಿಗೆ ನಿಲ್ಲುವುದೇ ಆದರೆ ನಮಗೆಲ್ಲ ಊರಲ್ಲಿ ಉಳಿಗಾಲ ಇರುವುದಿಲ್ಲ ಎಂದು ಒಳಗಿಂದಲೇ ಅವನನ್ನು ಕೊರೆಯುವಂತೆ ಉಪದೇಶಿಸುವವರವರೆಗೂ ತಕರಾರು ತೆಗೆದವರ ಸಾಲು ದೊಡ್ಡದಿತ್ತು. ‘ನೀವ್ಯಾರೂ ನನ್ನ ಬೆನ್ನಿಗೆ ನಿಲ್ಲಲು ತಯಾರಿಲ್ಲದೇ ಹೋದರೂ ನಾನು ಎಲೆಕ್ಷನ್ನಿಗೆ ನಿಂತೇ ತೀರುವೆ’ ಎಂದುಬಿಟ್ಟಿದ್ದ ಬೆಚ್ಚು ಅವರಿಗೆಲ್ಲ ಸವಾಲು ಹಾಕಿದ ಎನ್ನುವುದಕ್ಕಿಂತಲೂ ಬೇರೆಯದೊಂದು ಭಯಂಕರವಾದುದನ್ನು ಎದುರುಹಾಕಿಕೊಳ್ಳಲು ಸಜ್ಜಾಗಿದ್ದಂತಿತ್ತು.

ಅವತ್ತೊಂದಿನ ರಾತ್ರಿ ಮನೆಗೆ ವಾಪಸ್ಸು ಬಂದಾಗ ಅವನ ತಾಯಿ ಹೆಂಡತಿಗೆ ಗೊತ್ತಾಗದಂತೆ ಅವನ ಬಳಿ ಒಂದು ಸಂಗತಿ ಹೇಳಿದಳು. ಸಂಜೆ ಬೀಳುತ್ತಿದ್ದ ಹೊತ್ತಿಗೆ ಯಾರೋ ಒಬ್ಬ ಬಂದಿದ್ದನಂತೆ. ಎಲೆಕ್ಷನ್ನಿಗೆ ನಿಲ್ಲೂದೆಲ್ಲ ಬೇಡ ಅಂತ ನಿನ್ನ ಮಗನಿಗೆ ಹೇಳು, ಅವನ ಒಳ್ಳೇದಕ್ಕೇ ಹೇಳುತ್ತಾ ಇದ್ದೇನೆ ಎಂದು ಹೇಳಿ ಹೋದನಂತೆ. ಮತ್ತೆರಡು ದಿನವೂ ಕಳೆದಿರಲಿಲ್ಲ. ಯಾವತ್ತೂ ಬೆಚ್ಚುವಿನ ಮನಸ್ಸಿಗೆ ವಿರುದ್ಧವಾಗಿ ಮಾತಾಡಿರದ ಅವನ ಹೆಂಡತಿ, ಇದೆಲ್ಲ ನಮಗೆ ಬೇಡ ಎಂದು ನಡುಗುತ್ತಲೇ ಹೇಳಿದ್ದಳು. ಯಾಕೆ ಎಂದು ಕೆದಕಿ ಕೇಳಿದ್ದಕ್ಕೆ, ಎಲೆಕ್ಷನ್ನಿಗೆ ನಿಂತು ಏನು ಮಾಡ್ತಾನಂತೆ ನಿನ್ನ ಗಂಡ, ಒಂದು ದೊಡ್ಡ ಮನೆ ಕಟ್ಟಿಸಿಕೊಡ್ತೇವೆ, ಆರಾಮವಾಗಿರಿ ಎಂದು, ನಾಸನಗುಂಡಿಯಿಂದ ನೀರು ತರುತ್ತಿರುವಾಗ ಅಡ್ಡಬಂದು ಒಬ್ಬ ನಾಜೂಕಾಗಿಯೇ ಹೇಳಿದ್ದನೆಂಬುದು ಗೊತ್ತಾಯಿತು. ಅವನು ಅವಳಿಗೆ ಗುರುತಿದ್ದವನೇನೂ ಆಗಿರಲಿಲ್ಲ. ಇಷ್ಟು ಸಣ್ಣ ಊರೊಳಗೆ ಗುರುತಿಲ್ಲದ ಯಾವ ಮಂದಿ ಬಂದು ಓಡಾಡುತ್ತಿದ್ದಾರೆ ಎಂದು ಬೆಚ್ಚು ತಲೆಕೆಡಿಸಿಕೊಂಡ. ತಾನು ಎಲೆಕ್ಷನ್ನಿಗೆ ನಿಲ್ಲುವುದು ಪಂಚಾಯ್ತಿಯನ್ನೇ ಕೈಯಲ್ಲಿಟ್ಟುಕೊಂಡವರಿಗೆ ಬೇಡವಾಗಿದೆ ಎಂಬುದಂತೂ ಅವನಿಗೆ ಖಾತರಿಯಾಯಿತು. ಆದರೆ ಅವನೇನೂ ಮನಸ್ಸು ಬದಲಿಸಲಿಲ್ಲ.

ಎಲೆಕ್ಷನ್ನಿಗೆ ನಿಂತಿರುವುದು ಪಕ್ಕಾ ಆದಮೇಲಂತೂ ಬೆಚ್ಚುವಿನ ಬಗ್ಗೆ ಜನರ ನಡವಳಿಕೆಯೇ ಬದಲಾಗಿತ್ತು. ಏನೊ ಎಂಥದೊ ಎಂದು ತನ್ನ ಬಳಿ ಚೆನ್ನಾಗಿಯೇ ಮಾತಾಡುತ್ತಿದ್ದರೂ, ಎಲ್ಲರ ಎದುರಲ್ಲಿ ಅದೇ ಮಂದಿ ತನ್ನಿಂದ ದೂರವಿರುತ್ತಿದ್ದಾರೆ ಎಂಬುದು ಅವನಿಗೆ ತಿಳಿಯತೊಡಗಿತ್ತು. ಇದ್ದಕ್ಕಿದ್ದಂತೆ ಊರಿಗೆ ತಾನು ಬೇರೆಯವನಾಗುತ್ತಿರುವ ಭಾಸದಲ್ಲಿ ಒಳಗೊಳಗೇ ಬಸವಳಿಯತೊಡಗಿದ. ಒಬ್ಬ ಕೃಷ್ಣ ತಾಂಡೇಲ ಮಾತ್ರ ಹಗಲು ರಾತ್ರಿಯೆನ್ನದೆ ತಾನೇ ಎಲೆಕ್ಷನ್ನಿಗೆ ನಿಂತಿರುವವನಂತೆ ಬೆಚ್ಚುವಿಗಾಗಿ ಕೆಲಸ ಮಾಡುತ್ತಿದ್ದ. ಅವನ ಋಣ ಕಡೆಯವರೆಗೂ ತನ್ನ ಮೇಲಿರುತ್ತದೆ ಎಂದು ಅಂದುಕೊಳ್ಳುತ್ತಿರುವಾಗಲೂ ಬೆಚ್ಚು ಎಂಥದೋ ಬಿಡಿಸಿಕೊಳ್ಳಲಾರದ ಬಲೆಯೊಳಗೆ ಆಗಲೇ ಸಿಕ್ಕಿಬಿದ್ದಿದ್ದೇನೆ ಎಂಬ ಭಾವನೆಯಿಂದ ದಿಗಿಲುಗೊಂಡ.

ದಿಗಿಲು ಮುಗಿಯಲಿಲ್ಲ. ಎಲೆಕ್ಷನ್ನಿನಲ್ಲಿ ಅವನು ಸೋತಿದ್ದ. ಆದರೆ, ತನ್ನೆದುರು ಗೆದ್ದವರನ್ನು ತಾನು ಇಷ್ಟೂ ದಿನವೂ ಸೋಲುವ ಭಯದಲ್ಲಿ ಕೆಡವಿದ್ದೆ ಎಂಬುದು ಗೊತ್ತಾಗಿತ್ತು. ಅದರ ಹೊರತಾಗಿಯೂ, ಅವನನ್ನು ಎಲೆಕ್ಷನ್ನಿನ ಹೊತ್ತಲ್ಲಿ ದೂರವಿಟ್ಟಿದ್ದವರು ಈಗ ನಿಂದಿಸಲು ನಿಂತಿದ್ದರು. ಬೇಡಬೇಡವೆಂದರೂ ಮೈಮೇಲೆ ಎಳೆದುಕೊಂಡೆ, ಈಗ ಏನಾಯ್ತು ನೋಡು ಎಂದರು. ಇನ್ನು ದಿನ ಬೆಳಗಾದರೆ ಅವರದೇ ಮುಖ ನೋಡಿಕೊಂಡು ನೀನು ತಲೆ ತಗ್ಗಿಸಿಕೊಳ್ಳಬೇಕಾಗುತ್ತದೆ ಎಂದು ಅವನನ್ನು ಇನ್ನಷ್ಟು ದುಗುಡಕ್ಕೆ ತಳ್ಳಲು ನೋಡಿದರು. ಆದರೆ ಅವರ ಲೆಕ್ಕಾಚಾರಗಳನ್ನೆಲ್ಲ ಮೀರಿ ಅವನು ಮುಂಚಿನದೇ ಬೆಚ್ಚುವಾಗಿ ನಿಂತ. ಅವನೆದುರು ಗೆದ್ದವರಿಗೂ ಅವನೆಂದರೆ ಒಂದು ಭಯ ಇಟ್ಟುಕೊಂಡೇ ಓಡಾಡುವ ಸ್ಥಿತಿ ತಪ್ಪಲಿಲ್ಲ.

ಇದೆಲ್ಲದರ ಆಚೆಗೆ ಅವನ ಬೆನ್ನ ಹಿಂದೆ ಗೂಢವಾಗಿ ಏನೋ ನಡೆದಿತ್ತು. ಬರುವ ಮಳೆಗಾಲಕ್ಕಾಗಿ ಅದು ಸದ್ದಿಲ್ಲದೆ ಕಾದಂತಿತ್ತು.

* * *

ಊರಲ್ಲಿ ಕೃಷ್ಣ ತಾಂಡೇಲನ ಹೆಂಡತಿ ಮಕ್ಕಳ ರೋದನ ನೋಡುವುದಕ್ಕಾಗಲಿಲ್ಲ. ಅಷ್ಟು ವರ್ಷಗಳ ಕೆಳಗೆ ಬೆಚ್ಚುವಿನ ಹೆಂಡತಿ ಮಕ್ಕಳು ಹೀಗೆಯೇ ಗೋಳಾಡುತ್ತಿದ್ದ ದಿನವನ್ನೂ ಕಂಡಿದ್ದೆ. ಅವರ ಸಂಕಟಕ್ಕೆ ಇನ್ನೂ ಒಂದು ಕೊನೆ ಸಿಕ್ಕಿಯೇ ಇಲ್ಲ. ಕೃಷ್ಣ ತಾಂಡೇಲನ ಮಕ್ಕಳಾದರೂ ದೊಡ್ಡವರಾಗಿದ್ಧಾರೆ. ಕೈಗೆ ಬಂದಿದ್ದಾರೆ ಎನ್ನುವಷ್ಟು ಬೆಳೆದಿದ್ದಾರೆ. ಆದರೆ ಪುಟ್ಟ ಪುಟ್ಟ ಮಕ್ಕಳನ್ನು ಎದೆಗವಚಿಕೊಂಡು ಅವತ್ತು ಬೆಚ್ಚುವಿನ ಹೆಂಡತಿ ಕಣ್ಣೀರ ಸಮುದ್ರದಲ್ಲಿ ಮುಳುಗಿದ್ದ ದೃಶ್ಯ ಇವತ್ತಿಗೂ ಕಣ್ಣೊಳಗೇ ಇದೆ, ಎದೆಯನ್ನು ಕಲಕುತ್ತಲೇ ಇದೆ.

ಯಾವತ್ತೋ ಒಂದು ಸಲ ಕೃಷ್ಣ ತಾಂಡೇಲನ ಹೆಂಡತಿ, ‘ಇವರಿಗೆ ನೀವಾದರೂ ಸ್ವಲ್ಪ ಬುದ್ಧಿ ಹೇಳಿ. ಊರನ್ನೇ ಹೊತ್ತುಕೊಂಡಿದ್ದೇನೆ ಅನ್ನೂ ಥರ ಆಡುತ್ತಾರೆ. ನಾಳೆ ಏನಾದರೂ ಹೆಚ್ಚೂ ಕಮ್ಮಿ ಆದರೆ ಏನು ಕತೆ’ ಎಂದು ಅವನೆದುರಲ್ಲೆ ನನ್ನ ಬಳಿ ಗೋಳು ಹೇಳಿಕೊಂಡಿದ್ದಳು. ಎಷ್ಟು ತಡೆದುಕೊಳ್ಳಲು ಅವಳು ಪ್ರಯತ್ನ ಮಾಡಿದರೂ ಕಣ್ಣಿಂದ ನೀರು ಹರಿದಿತ್ತು. ಸೆರಗಿನಿಂದ ಒರೆಸಿಕೊಳ್ಳುತ್ತಿದ್ದವಳನ್ನು ಎದುರಿಸಲಾರದ ರೀತಿಯಲ್ಲಿ ನೋಡುತ್ತ, ‘ಹಾಗೆಲ್ಲ ಎಂಥದೂ ಆಗುವುದಿಲ್ಲ. ಹೆದರುವುದು ಬೇಡ’ ಎಂದು ಧೈರ್ಯ ಹೇಳಿದ್ದೆನಾದರೂ, ನನ್ನ ಮಾತಿನ ಮೇಲೆ ನನಗೇ ನಂಬಿಕೆ ಇರಲಿಲ್ಲ. ನನ್ನಂಥವನು ವಿಚಿತ್ರ ಗಾಂಭೀರ್ಯ ಮೆತ್ತಿಕೊಂಡು ನಡೆದುಕೊಳ್ಳುವುದಕ್ಕೂ ಬೆಚ್ಚು ಅಥವಾ ಕೃಷ್ಣ ತಾಂಡೇಲ ಸೀದಾ ನೀರಿಗಿಳಿದು ಸತ್ಯದ ಜೊತೆ ನಿಕಟವಾಗುವುದಕ್ಕೂ ಅಂತರ ದೊಡ್ಡದಿದೆ ಮತ್ತು ನನ್ನಂಥವನು ಎಲ್ಲದರಿಂದಲೂ ಒಂದು ನಿಶ್ಚಿತ ದೂರ ಕಾಯ್ದುಕೊಳ್ಳುವಲ್ಲಿಂದಲೇ ಈ ವ್ಯತ್ಯಾಸದ ಮಾಪನ ಶುರುವಾಗುತ್ತದೆ ಎಂದು ನನಗೆ ನಾನೇ ಎಷ್ಟೋ ಸಲ ಹೇಳಿಕೊಂಡಿದ್ದೇನೆ. ಬೆಚ್ಚುವಿನಂತೆ ಕೃಷ್ಣ ತಾಂಡೇಲನಂತೆ ನಾನು ಧೈರ್ಯ ತೋರಿಸಲಾರೆ, ನನ್ನ ಪುಗ್ಸಟ್ಟೆ ಫಿಲಾಸಫಿಯೊಳಗೂ ಧೈರ್ಯ ಇರುವುದಿಲ್ಲ ಎಂದು, ಗಂಡನ ಹೆಣದ ಮುಂದೆ ಕೂತು ಮಕ್ಕಳೊಂದಿಗೆ ಕಣ್ಣೀರಾಗುತ್ತಿರುವ ಕೃಷ್ಣ ತಾಂಡೇಲನ ಹೆಂಡತಿಯನ್ನು ನೋಡುವಾಗ ಅನ್ನಿಸಿ ಸಣ್ಣಗೆ ನಡುಗಿದೆ, ನಿಜಕ್ಕೂ ಅಧೀರನಾದೆ.

ಇದ್ದಕ್ಕಿದ್ದಂತೆ ವಾತಾವರಣವೇ ಬದಲಾಗುವ ಹಾಗೆ, ಅಳುತ್ತಿದ್ದಾನೊ ಆವೇಶಕ್ಕೊಳಗಾಗಿದ್ದಾನೊ ಅರ್ಥವಾಗದ ಹಾಗೆ ಬೊಬ್ಬೆ ಹೊಡೆಯುತ್ತ ಎದೆ ಬಡಿದುಕೊಳ್ಳುತ್ತ ಅವನೊಬ್ಬನ ಪ್ರವೇಶವಾಯಿತು. ನೋಡುತ್ತಿದ್ದಂತೆ, ಕುಡಿದ ಅಮಲಿನಲ್ಲಿದ್ದಾನೆ ಎನ್ನುವುದು ಖಾತರಿಯಾಯಿತು. ‘ಎಲ್ಲರಿಗೂ ನೀನೊಬ್ಬನೇ ಇರೂದು ಅನ್ನುವವನ ಹಾಗೆ ಸಾಯ್ತಿದ್ದೆಯಲ್ಲೊ. ಈಗ ನೀನೇ ಸತ್ತು ಮಲಗಿದ್ದಿಯಲ್ಲೊ. ಸಾಯಿಸಿದೋರೇನೂ ಉದ್ಧಾರವಾಗೂದಿಲ್ಲ ಬಿಡು. ನಿನ್ನ ಬೆನ್ನಿಗೇ ಅವರೂ ಬರೂದೊಂದೇ ಬಾಕಿ. ನಿನ್ನ ಕೊಂದು ಅವರಿಗೇನು ಸಿಕ್ಕಿದೆಯೊ ಗೊತ್ತಿಲ್ಲ. ಆದರೆ ನೀನಿಲ್ಲಿ ಸತ್ತು ಮಲಗಿರುವಾಗ ನಿಜವಾಗಿಯೂ ಸಾಯ್ತಾ ಇರೂದು ಅವರೇ ಅನ್ನೂದು ಮಾತ್ರ ಸತ್ಯ?‘ ಎಂದೆಲ್ಲ ತೊದಲುತ್ತಲೇ ಕೂಗಾಡಿದ. ‘ಏ ನೀನೇನೂ ಹೆದರಬ್ಯಾಡವೆ, ಏಯ್ ಮಕ್ಕಳಾ ನೀವು ಹೆದರಬೇಡ್ರೊ’ ಎಂದು ಕೃಷ್ಣನ ಹೆಂಡತಿ ಮಕ್ಕಳಿಗೆ ಹೇಳಿದ.

ಯಾರೋ ಅವನನ್ನು ದೂರ ಕರೆದುಕೊಂಡು ಹೋಗುವಂತೆ ಹೇಳಿದರು. ಒಂದಿಷ್ಟು ಜನ ಸೇರಿ ಅವನನ್ನು ಹಿಡಿದು ಎಳೆದುಕೊಂಡೂ ತಳ್ಳಿಕೊಂಡೂ ಹೋದರು. ಹಾಗೆ ಹೋಗುವಾಗಲೂ ಅವನು, ‘ಥೂ ನಿಮ್ಮ, ತಾಕತ್ತು ನನ್ನ ಮೇಲೆ ತೋರಿಸ್ತೀರೇನ್ರೊ. ಇಲ್ಲಿ ಕೊಂದು ಮಲಗಿಸಿದ್ದಾರಲ್ಲ, ಅವರ ಮೇಲೆ ತೋರಿಸ್ರೊ. ಉಪಯೋಗಕ್ಕೆ ಬಾರದೋರು ನೀವು. ಅವರೇನಾದರೂ ನನ್ನ ಕೈಗೆ ಸಿಗಬೇಕು, ಹುಲಿ ಹಾಗೆ ರಕ್ತ ಕುಡೀತೇನೆ’ ಎಂದು ಕೂಗಾಡುತ್ತ ಹೋದವನ ದನಿ ಕ್ಷೀಣವಾಯಿತು. ಅಳುತ್ತಿರುವವರ ಸ್ವರ ಮತ್ತೆ ಕೇಳಿಸತೊಡಗಿತು.

ಕೃಷ್ಣ ತಾಂಡೇಲನ ಮನೆಯವರನ್ನು ಹೇಗೆ ಸಂತೈಸುವುದೊ ತಿಳಿಯದೆ ಮೌನವಾಗಿ ನಿಂತುಬಿಟ್ಟಿದ್ದೆ. ರಾಜು ಹತ್ತಿರ ಬಂದು ಕರೆದ. ಮತ್ತೂ ಕೆಲವು ಗೆಳೆಯರು ಅವನೊಂದಿಗಿದ್ದರು. ಪೋಸ್ಟ್ ಮಾರ್ಟಮ್ಮಿನ ನಂತರ ಬಿಳಿವಸ್ತ್ರದೊಳಗೆ ಸುತ್ತಿದ್ದ ಮತ್ತೊಂದು ಶವ ಮಾತ್ರವಾಗಿ ಮಲಗಿದ್ದ ಕೃಷ್ಣ ತಾಂಡೇಲನ ಮುಖ ನೋಡುವಾಗ, ಅವನ ಜೊತೆ ಮಾತಾಡದೆ ತುಂಬ ಸಮಯವೇ ಆಗಿತ್ತೆಂಬುದು ಬಾಧಿಸಿತು. ಕಳೆದ ವಾರ ಅವನು ಬರೆದಿದ್ದ ವರದಿಯೊಂದನ್ನು ರಾಜು ಮಾತ್ರವಲ್ಲದೆ, ಮತ್ತೊಂದಿಬ್ಬರು ಗೆಳೆಯರು ಕಳಿಸಿದ್ದನ್ನು ಓದಿದ್ದೆ. ಪುಣ್ಯಕೋಟಿಯ ಬೆವರು ಎಂಬ ಆ ವರದಿ ಬೆಚ್ಚುವನ್ನು ಮುಗಿಸಿದವರೆಂಬವರ ಕಥೆಯನ್ನೇ ಬಿಚ್ಚಿಟ್ಟಿತ್ತು. ಅವನ ವಿರುದ್ಧ ಎಲೆಕ್ಷನ್ನಿನಲ್ಲಿ ಆ ವರ್ಷ ಗೆದ್ದಿದ್ದಲ್ಲದೆ, ಮುಂದಿನ ಚುನಾವಣೆಯಲ್ಲೂ ಮತ್ತೆ ಗೆದ್ದಿರುವ ಆ ದೊಡ್ಡ ಮನುಷ್ಯನ ಬಗ್ಗೆ ತನಿಖೆ ಮಾಡಿ ತೆಗೆದಂಥ ವಿವರಗಳನ್ನು ಒಂದೊಂದಾಗಿ ಕೃಷ್ಣ ತಾಂಡೇಲ ಇಟ್ಟಿದ್ದ. ಪ್ರತಿ ವಿವರವೂ ಎದೆ ಝಲ್ಲೆನಿಸುವ ಹಾಗೆ ಇತ್ತು. ಬೆಚ್ಚುವನ್ನು ಮಣಿಸುವುದರಲ್ಲಿ, ಮುಗಿಸುವುದರಲ್ಲಿ ದಣಿದಿದ್ದವರ ಎಳೆಎಳೆಯಾದ ಕಥೆಯಂತಿತ್ತು ಅದು. ಅದರ ನಡುವೆಯೂ, ಬೆಚ್ಚುವಿನ ಭಯದಲ್ಲೇ ಬೆವರುತ್ತಿರುವವರ ಬಗ್ಗೆ ವ್ಯಂಗ್ಯವಾದ ವಾಕ್ಯದೊಂದಿಗೆ ಆ ವರದಿಯನ್ನು ಕೊನೆಗೊಳಿಸಿದ್ದ.

ಕೃಷ್ಣ ತಾಂಡೇಲನ ಜೊತೆ ಕೆಲಸ ಮಾಡಿದ್ದ ಕೆಲವರು ಬಂದಿದ್ದರು. ರಮಾಕಾಂತ ಎಂಬವನು ನನಗೂ ಗೊತ್ತಿದ್ದವನೇ ಆಗಿದ್ದ. ‘ಮೊನ್ನೆ ಬರೆದಿದ್ದ ವರದಿಗೂ ಇದಕ್ಕೂ ಏನಾದರೂ?’ ನನ್ನ ಮಾತು ತುಂಡು ಮಾಡುತ್ತ ಅವನು, ‘ಅವರೇ ಆಗಿದ್ದರೆ ಇಷ್ಟು ವರ್ಷ ಕಾಯುತ್ತಿದ್ದರಾ?’ ಎಂದು ಪಿಸುಗುಟ್ಟಿದ. ‘ಬೆಳಂಬಾರದಲ್ಲಿರುವ ಇವನ ದಾಯಾದಿಗೂ ಇವನಿಗೂ ಬಹಳ ಕಾಲದಿಂದ ವೈಮನಸ್ಯವಂತೆ. ಏನೋ ಆಸ್ತಿ ವಿಷಯ ಇರಬೇಕು. ಯಾರೂ ಬಾಯ್ಬಿಡುತ್ತಿಲ್ಲ’ ಎಂದೂ ಸೇರಿಸಿದ. ಅಷ್ಟರಲ್ಲಿ ಗುಂಪಿನೊಳಗೆ ಸದ್ದೆದ್ದಿತು. ಪುಣ್ಯಕೋಟಿ ಪುಣ್ಯಕೋಟಿ ಎಂದರು. ರಮಾಕಾಂತ ‘ಬಂದೆ ಇರು’ ಎನ್ನುತ್ತ ಅತ್ತ ಹೊರಟ.

ಇಲ್ಲಿ ನನ್ನ ಮುಖವನ್ನೇ ನೋಡಿದ ರಾಜು, ‘ನಿನಗೆ ಹೇಗೆ ಹೇಳುವುದೊ ಗೊತ್ತಾಗುತ್ತಿಲ್ಲ. ಕೃಷ್ಣನಿಗೂ ಬೆಚ್ಚು ಹೆಂಡತಿಗೂ ಸಂಬಂಧವಿದ್ದದ್ದು ಹೌದಂತೆ’ ಎಂದು ತಣ್ಣಗೆಂದರೆ ತಣ್ಣಗಿನ ದನಿಯಲ್ಲಿ ಹೇಳಿದ. ಅವನ ಮುಖ ಬಿಳಿಚಿಕೊಂಡಿತೆಂಬುದನ್ನು ಗಮನಿಸಿದೆ. ಸುತ್ತಲೂ ಜನ ಸೇರಿದ್ದರಿಂದ ಕೃಷ್ಣ ತಾಂಡೇಲನ ಮುಖವನ್ನು ಮತ್ತೆ ನೋಡಲಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News