ಕೆಂಪು ಕಲ್ಲು , ಮರಳು ವಿತರಣೆಗೆ ತುರ್ತು ಕ್ರಮಕೈಗೊಳ್ಳಲು ಆಗ್ರಹ: ಕಟ್ಟಡ ಕಾರ್ಮಿಕರ ಪ್ರತಿಭಟನಾ ಪ್ರದರ್ಶನ
ಮಂಗಳೂರು, ಆ.18: ಮೂರುವರೆ ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವ ಸೃಷ್ಟಿಯಾಗಿದೆ. ಜಿಲ್ಲಾಡಳಿತದ ಕಠಿಣ ಕ್ರಮಗಳು ಕಟ್ಟಡ ಮತ್ತು ನಿರ್ಮಾಣ ರಂಗಕ್ಕೆ ತೀವ್ರವಾದ ಹೊಡೆತವನ್ನು ನೀಡಿದೆ ಎಂದು ಕಾರ್ಮಿಕರ ಫೆಡರೇಶನ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಯಾದವ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ನಗರದ ಮಿನಿ ವಿಧಾನ ಸೌಧದ ಮುಂದೆ ಸೋಮವಾರ ಸಿಐಟಿಯು ಮತ್ತು ಎಐಟಿಯುಸಿ ನೇತೃತ್ವದ ಕಟ್ಟಡ ಕಾರ್ಮಿಕರ ಸಂಘಟನೆಯ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ಸಂಪೂರ್ಣವಾಗಿ ಬೀದಿ ಪಾಲಾಗಿದ್ದು, ಇದಕ್ಕೆ ಕರ್ನಾಟಕ ರಾಜ್ಯ ಸರಕಾರವು ನೇರ ಹೊಣೆಯಾಗಿದೆ. ಅಕ್ರಮ ದಂಧೆ ತಡೆಯುವ ಕ್ರಮವು ಸ್ವಾಗತಾರ್ಹವಾಗಿದ್ದರೂ ಅದರಿಂದ ಸೃಷ್ಟಿಯಾಗಿರುವಂತಹ ಬೇರೆ ಬೇರೆ ಸಮಸ್ಯೆಗಳಿಗೆ ಸರಕಾರದಿಂದ ಯಾವುದೇ ರೀತಿಯ ಪರಿಹಾರ ಇಲ್ಲದಿರುವುದು ಖಂಡನೀಯ ಎಂದರು.
ಕಟ್ಟಡ ಕಾರ್ಮಿಕರ ರಂಗದ ಕೆಂಪು ಕಲ್ಲಿನ ಕೋರೆ ಪರವಾನಿಗೆ ಪದ್ಧತಿಯಲ್ಲಿ ಸರಳೀಕರಣ ಮತ್ತು ನ್ಯಾಯಯುತ ವಾಗಿರಲಿ. ಕೇರಳದ ಮಾದರಿಯಲ್ಲಿ ರಾಜಧನ ಪದ್ಧತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಾಗಲಿ, ಕರಾವಳಿಗೆ ಮರಳು ನೀತಿ ಜಾರಿಯಾಗಲು ಕರ್ನಾಟಕ ರಾಜ್ಯಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಸಿಕ 10 ಸಾವಿರ ರೂ. ಪರಿಹಾರಕ್ಕೆ ಆಗ್ರಹ: ಕಟ್ಟಡ ಮತ್ತು ಕೋರೆ ಕಾರ್ಮಿಕ ಸಂಘಟನೆ( ಎಐಟಿಯುಸಿ) ಉಪಾಧ್ಯಕ್ಷ ಬಿ.ಶೇಖರ್ ಮೂರುವರೆ ತಿಂಗಳಿನಿಂದ ಕೆಲಸವಿಲ್ಲದೆ ಕಂಗಾಲಾಗಿರುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಮಾಸಿಕವಾಗಿ ರೂ.10,000 ನಂತೆ ಪರಿಹಾರ ಧನವನ್ನು ಸಮಸ್ಯೆ ಇತ್ಯರ್ಥವಾಗುವ ತನಕ ನೀಡಬೇಕೆಂದು ಒತ್ತಾಯಿಸಿದರು.
*ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ: ಪ್ರಾಕೃತಿಕ ಸಂಪನ್ಮೂಲಗಳಿದ್ದರೂ ಅಘೋಷಿತ ಕೆಂಪು ಕಲ್ಲು
ಮತ್ತು ಮರಳು ಅಭಾವದಿಂದಾಗಿ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಅಂಗಡಿ- ಮುಗ್ಗಟ್ಟು, ಲಾರಿ ಮಾಲಕ ಚಾಲಕರು ಮತ್ತು ಆರ್ಥಿಕ ರಂಗ ತೀವ್ರವಾಗಿ ಕುಸಿದಿದೆ. ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮರಳು ಸಮಸ್ಯೆ ಇತ್ಯರ್ಥವನ್ನು ಮಾಡದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾರ್ಮಿಕ ಸಂಘಟನೆಗಳು ಸಮಾನ ಮನಸ್ಕ ಸಂಘಟನೆ ಗಳೊಂದಿಗೆ ಸೇರಿ ತೀವ್ರವಾದ ಪ್ರತಿಭಟನೆಯನ್ನು ಸಂಘಟಿಸುವುದು ಅನಿವಾರ‌್ಯವಾಗಲಿದೆ ಎಂದು ಕಟ್ಟಡ ಕಾರ್ಮಿಕ ಸಂಘಟನೆಯ ಸಿಐಟಿಯುವಿನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿಯವರು ಎಚ್ಚರಿಕೆ ನೀಡಿದರು.
ಮರಳು ಮತ್ತು ಕೆಂಪು ಕಲ್ಲಿನ ಸಮಸ್ಯೆಯನ್ನು ತೀವ್ರಗತಿಯಲ್ಲಿ ಇತ್ಯರ್ಥ ಮಾಡಬೇಕೆಂದು ಕಟ್ಟಡ ಕಾರ್ಮಿಕರ ಸಂಘ ಎಐಟಿಯುಸಿ ಇದರ ಪ್ರಧಾನ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಖಜಾಂಚಿ ಯೋಗೀಶ್ ಜಪ್ಪಿನಮೊಗರು, ಮುಂದಾಳುಗಳಾದ ಜನಾರ್ದನ ಕುತ್ತಾರ್, ಶಂಕರ ಮೂಡಬಿದರೆ, ಚಂದ್ರಹಾಸ ಪಿಲಾರ್, ವಿಶ್ವನಾಥ ಸುಳ್ಯ, ನೋಣಯ್ಯ ಗೌಡ ಕೈಕಂಭ, ರಾಮಚಂದ್ರ ಪಜೀರು, ಕಟ್ಟಡ ಮತ್ತು ಕೋರೆ ಕಾರ್ಮಿಕರ ಸಂಘ ಎಐಟಿಯುಸಿ ಮುಂದಾಳುಗಳಾದ ಎಚ್.ವಿ.ರಾವ್, ಕರುಣಾಕರ ಮಾರಿಪಳ್ಳ, ಶೇಖರ್ ಬಿ, ಸುರೇಶ್ ಬಿ, ವಿ.ಕುಕ್ಯಾನ್ ಮುಂತಾದವರು ವಹಿಸಿದ್ದರು.
ಎಐಟಿಯುಸಿ ಸಂಘಟನೆಯ ಸುರೇಶ್ ಬಂಟ್ವಾಳ ಸ್ವಾಗತಿಸಿ , ಸಿಐಟಿಯುವಿನ ರವಿಚಂದ್ರ ಕೊಂಚಾಡಿ ವಂದಿಸಿದರು.
ಪ್ರಾರಂಭದಲ್ಲಿ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದ ತನಕ ಕಟ್ಟಡ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಿತು.