ಡ್ರಗ್ಸ್ ವ್ಯಸನದ ದುಷ್ಪರಿಣಾಮ ಅರಿವು ಮೂಡಿಸಲು ಪ್ರಯತ್ನ ಅಗತ್ಯ: ಡಿಸಿಪಿ ಮಿಥುನ್
ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ
ಮಂಗಳೂರು, ಆ.21: ಮಕ್ಕಳು ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿರುವ ಬಗ್ಗೆ ಕೆಲವು ಮಂದಿ ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಡ್ರಗ್ಸ್‌ಗೆ ಬಲಿಯಾಗುವುದರಿಂದ ಯುವ ಶಕ್ತಿ ಸಂಪೂರ್ಣ ನಾಶವಾಗುತ್ತದೆ. ಹಾಗಾಗಿ ಡ್ರಗ್ಸ್ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಪ್ರಯತ್ನ ಅಗತ್ಯವಿದೆ ಎಂದು ಡಿಸಿಪಿ ಮಿಥುನ್ ಎಚ್.ಎನ್. ಹೇಳಿದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಆಫ್ ಸೈಂಟ್ ಅಲೋಶಿಯಸ್ ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಗುರುವಾರ ನಡೆದ ಸೈಬರ್ ಕ್ರೈಮ್ ಮತ್ತು ಮಾದಕ ದ್ರವ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಡ್ರಗ್ಸ್ ಬಗ್ಗೆ ಮಾಹಿತಿ ನೀಡಲು ಕ್ಯೂ ಆರ್ ಕೋಡ್‌ಗಳನ್ನು ಶಾಲಾ ಕಾಲೇಜುಗಳಿಗೆ ನೀಡಲಾಗಿದೆ. ಅದರ ಪ್ರಯೋಜ ನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಡ್ರಗ್ಸ್‌ಗಳಿಂದ ದೂರವಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಡಿಸಿಪಿ ಮಿಥುನ್ ಕರೆ ನೀಡಿದರು.
ಡ್ರಗ್ಸ್ ಮಾಫಿಯಾ ಸರಕಾರವನ್ನೇ ಬದಲಾಯಿಸುವಷ್ಟು ಬಲಿಷ್ಟವಾಗಿದೆ. ಭಾರತದ ಜನಸಂಖ್ಯೆಯ ಶೇ.45ರಷ್ಟು ಮಂದಿ 25 ವರ್ಷ ಪ್ರಾಯದೊಳಗಿನ ಯುವಜನರೇ ಆಗಿರುವುದರಿಂದ ಡ್ರಗ್ಸ್ ವಾಫಿಯಾ ಭಾರತವನ್ನು ಟಾರ್ಗೆಟ್ ಮಾಡುತ್ತಿದೆ. ಡ್ರಗ್ಸ್ ಸೇವನೆಯು ನೆನಪಿನ ಶಕ್ತಿ ಕುಂಠಿತ, ಬೌದ್ಧಿಕ ಬೆಳವಣಿಗೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಡಾ.ಮಹಾಬಲೇಶ್ ಶೆಟ್ಟಿ ಹೇಳಿದರು.
ಡ್ರಗ್ಸ್‌ನಲ್ಲಿ ಕಾನೂನು ಸಮ್ಮತ ಮತ್ತು ನಿಷೇಧಿತ ಡ್ರಗ್ಸ್‌ಗಳೆಂದು ಎರಡು ವಿಧ. ಆದರೆ ಕಾನೂನು ಸಮ್ಮತ ಡ್ರಗ್ಸ್ ಗಳೇ ನಿಷೇಧಿತ ಡ್ರಗ್ಸ್ ಸೇವನೆಗೆ ಕಾರಣವಾಗುತ್ತವೆ. ಅಪಘಾನಿಸ್ಥಾನ, ಪಾಕಿಸ್ತಾನ, ಇರಾನ್, ಥಾಯ್ಲೆಂಡ್ ಮತ್ತು ಬರ್ಮಾ ದೇಶಗಳಲ್ಲಿ ಅತ್ಯಧಿಕ ಪ್ರವಾಣದಲ್ಲಿ ಡ್ರಗ್ಸ್ ಉತ್ಪಾದನೆಯಾಗುತ್ತದೆ. ಭಾರೀ ಹಣ ತರುವ ಉದ್ಯಮ ಇದಾ ಗಿದೆ. ಇದು ಮೆದುಳಿನ ರೋಗವೂ ಹೌದು. ಜೀವನ ಪರ್ಯಂತ ಇದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂದು ಡಾ.ಮಹಾಬಲೇಶ್ ಶೆಟ್ಟಿ ಹೇಳಿದರು.
ಮಂಗಳೂರು ಸಹಾಯಕ ಪೊಲೀಸ್ ಆಯುಕ್ತೆ (ಸಂಚಾರ) ನಜ್ಮಾ ಫಾರೂಕಿ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಾದಕ ದ್ರವ್ಯ ನಿಯಂತ್ರಣ ದಳದ ಸಂಯೋಜಕಿ ಝೀನಾ ಫ್ಲಾವಿಯಾ ಡಿಸೋಜ, ರೋಟರ್ಯಾಕ್ಟ್ ಕ್ಲಬ್ ಆಫ್ ಸೈಂಟ್ ಅಲೋಶಿಯಸ್ ಅಧ್ಯಕ್ಷೆ ಜಾಹ್ನವಿ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.