×
Ad

ರೈತರು ಅನುಭವಿಸುತ್ತಿರುವ ಸಂಕಟದ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯಲಾಗಿದೆ: ಅಶೋಕ್ ರೈ

ಕೃಷಿ ಇಲಾಖೆ ಸೌಲಭ್ಯ ವಿತರಣೆ-ಸಾಧಕ ರೈತರಿಗೆ ಸನ್ಮಾನ

Update: 2025-08-26 19:54 IST

ವಿಟ್ಲ: ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ವಿಟ್ಲದ ಭಗವತಿ ದೇವಸ್ಥಾನದ ಸಭಾಭವನದಲ್ಲಿ ಆತ್ಮ ಯೋಜನೆ ತಾಂತ್ರಿಕ ಕಾರ್ಯಾಗಾರ, ಕಿಸಾನ್ ಗೋಷ್ಟಿ ಹಾಗೂ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ,ಸಹಾಯವನ್ನು ಒದಗಿಸಲು ಶಾಸಕನ ನೆಲೆಯಲ್ಲಿ ಬದ್ಧನಾಗಿರುವುದಾಗಿ ತಿಳಿಸಿದರು.ಅಡಿಕೆ ಬೆಳೆ ಕೊಳೆರೋಗ ದಿಂದ ನಾಶವಾಗಿ ರೈತರು ಅನುಭವಿಸುತ್ತಿರುವ ಸಂಕಟದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ರೈತರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮಾತನಾಡಿ ರೈತರು ದೇಶದ ಬೆನ್ನೆಲುಬು. ರೈತರು ಬೆಲೆ ಕುಸಿತ, ಇಳುವರಿ ಕಡಿಮೆ ಬಗ್ಗೆ ಹೆಚ್ಚು ಚಿಂತಿತರಾಗದೇ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಿ ಎಂದರು.

ರೈತರಿಗೆ ಔಷಧಿ ಸಹಾಯಧನದಲ್ಲಿ ಸಿಗುವ ಔಷಧ ಸಿಂಪಡಣೆ ಯಂತ್ರ, ತುಂತುರು ನೀರಾವರಿ ಸಲಕರಣೆ, ಹುಲ್ಲು ಮತ್ತು ಕಳೆ ತೆಗೆಯುವ ಸಲಕರಣೆ ಮತ್ತಿತರ ಸಲಕರಣೆ ಗೊಬ್ಬರ, ಇತ್ಯಾದಿಗಳನ್ನು ವಿತರಿಸಲಾಯಿತು.

ಕೃಷಿಸಖಿಯರಿಗೆ ಗುರುತುಪತ್ರ ನೀಡಲಾಯಿತು2023-2024ನೇ ಸಾಲಿನ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ವಿಟ್ಲ ಹೋಬಳಿಯ ಕನ್ಯಾನದ ಎನ್. ಕೆ. ಸುರೇಶ ಭಟ್ ಕೊಣಲೆ ಅವರನ್ನು ಸನ್ಮಾನಿಸಲಾಯಿತು.

ವಿಟ್ಲ ಶೋಕಮಾತಾ ಇಗರ್ಜಿಯ ಧರ್ಮಗುರು ಫಾದರ್ ಐವನ್ ಮೈಕೆಲ್ ರೋಡಿಗ್ರಸ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ ಬಲ್ಲಾಳ ಮಾವಂತೂರು, ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ, ರಾಜ್ಯಪ್ರತಿನಿಧಿ ಪದ್ಮನಾಭ ಗೋಳ್ತಮಜಲು, ಅಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕರುಣಾಕರ ವಿ. , ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೇಶಕಿ ಕುಮುದಾ ಮೊದಲಾವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

30 ಫಲಾನುಭವಿಗಳಿಗೆ 4.5 ಲಕ್ಷರೂಗಳ ಸಹಾಯಧನದ ಸಲಕರಣೆಗಳನ್ನು ವಿತರಿಸಲಾಯಿತು.

ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್. ಸ್ವಾಗತಿಸಿದರು ಕೃಷಿ ಸಖಿಯರು ಪ್ರಾರ್ಥನೆ ಹಾಡಿದರು. ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಕುಮುದಾ ಪ್ರಸ್ತಾವನೆಗೈದರು.

ವಿಟ್ಲ ಕೃಷಿ ಇಲಾಖೆಯ ವಿರೂಪಾಕ್ಷ ಹಡಪದ್ ವಂದಿಸಿದರು. ಕೃಷಿ ಇಲಾಖೆ ಅಧಿಕಾರಿ ನಂದನ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News