ಸುರತ್ಕಲ್| ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಖಂಡಿಸಿ ಜನಾಗ್ರಹ ಸಭೆ
ಸುರತ್ಕಲ್ : ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಖಂಡಿಸಿ ಧರ್ಮ ಕ್ಷೇತ್ರ ಸಂರಕ್ಷಣಾ ಸಮಿತಿ ಸುರತ್ಕಲ್ ವತಿಯಿಂದ ಜನಾಗ್ರಹ ಸಭೆಯು ರವಿವಾರ ಸಂಜೆ ವಿದ್ಯಾದಾಯಿನಿ ಶಾಲಾ ಸಭಾಭವನದಲ್ಲಿ ಜರುಗಿತು.
ಈ ಸಂದರ್ಭ ಮಾತನಾಡಿದ ವಸಂತ ಗಿಳಿಯಾರ್, ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ವಿರುದ್ಧ ಜನಾಕ್ರೋಶ ಬುಗಿಲೆದ್ದಿದೆ. ಧರ್ಮಕ್ಷೇತ್ರದ ವಿರುದ್ಧದ ಶಡ್ಯಂತರ ವಿಫಲವಾಗಿದೆ ಎಂದರು.
ಬಳಿಕ ಮಾತನಾಡಿದ ಕಾಸರಗೋಡು ಹಿಂದೂ ಐಕ್ಯ ವೇದಿಯ ಮುಖಂಡ ಕುಂಟಾರು ರವೀಶ್ ತಂತ್ರಿ, ಓರ್ವ ವ್ಯಕ್ತಿಯ ಮೇಲೆ ಬರುವ ಅಪವಾಧಗಳ ಬಗ್ಗೆ ವಿಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು ಎಲ್ಲರಂತೆ ನಾವೂ ದೂಷಿಸಬಾರದು. ಧರ್ಮಸ್ಥಳದ ಮೇಲಿನ ಅಪಪ್ರಚಾರದ ಹಿಂದೆ ಕಾವಂದರನ್ನು ಧರ್ಮ ಪೀಠದಿಂದ ಇಳಿಸಿ ಪೀಠ ಕಬಳಿಸಿಕೊಳ್ಳುವ ಹುನ್ನಾರ ಅಡಗಿದೆ ಎಂದರು.
ಹಿಂದೂ ಸಮಾಜದ ನಾಶ ಮುಸ್ಲಿಮರು, ಕ್ರಿಶ್ಚಿಯನ್ನರಿಂದ ಅಲ್ಲ, ಹಿಂದೂ ಧರ್ಮದಿಂದ ಇತರ ಧರ್ಮಗಳಿಗೆ ಪಲ್ಲಟವಟಗಿರುವ ಮತಿಗೆಟ್ಟ ಹಿಂದೂಗಳಿಂದ ಎಂದರು. ಸಮಾಜದ ಮುಖಂಡರನ್ನು ಮಾನಸಿಕವಾಗಿ ಕುಗ್ಗಿಸಿ ಕ್ಷೇತ್ರಗಳನ್ನು ನಿರ್ನಾಮ ಮಾಡುವ ಹುನ್ನಾರಗಳು ನಡೆಯುತ್ತಿದ್ದು, ಧರ್ಮ ಕ್ಷೇತ್ರ, ಧರ್ಮ ಗುರುಗಳ ವಿರುದ್ಧ ಅಪಪ್ರಚಾರ ಮಾಡುತ್ತಾ ಮುಂದೆ ಬಂದರೆ ಅಂತವರಿಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದ ಅವರು, ಧರ್ಮ ರಕ್ಷಣೆಗೆ ಮುಂದಾಗುವ ನಾಯಕರ ರೋಮವನ್ನೂ ಅಲ್ಲಾಡಿಸಲೂ ಸಾಧ್ಯವಿಲ್ಲ. ಧರ್ಮಸ್ಥಳ ಪ್ರಕರಣವನ್ನು ಎನ್ ಐ ಎ ಗೆ ಹಸ್ತಾಂತರ ಆಗಬೇಕು ಎಂದು ಅವರು ಆಗ್ರಹಿಸಿದರು.
ವಿಶ್ವನಾಥ ದೇವಸ್ಥಾನದ ಅಧ್ಯಕ್ಷ ಕೆ.ಸಿ. ನಾಗೇಂದ್ರ ಭಾರದ್ವಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.
ಸಭೆಯ ವೇದಿಕೆಯಲ್ಲಿ ಮಹಾಬಲ ಪೂಜಾರಿ ಕಡಂಬೋಡಿ, ದಿನಕರ ಅಂಚನ್, ಆನಂದ ಗುರಿಕಾರ, ರಾಘವೇಂದ್ರ ರಾವ್, ಜಗದೀಶ ಗಣೇಶ ಕಟ್ಟೆ, ಎಚ್ . ಶ್ರೀರಂಗ, ಮಂಜು ಕಾವ, ಲಕ್ಷ್ಮಣ ಅಮೀನ್, ಲೀಲಾದರ ಕರ್ಕೆರಾ ಮೊದಲಾದವರು ಇದ್ದರು.
ಜನಾಗ್ರಹ ಸಭೆಗೂ ಮುನ್ನ ಸುರತ್ಕಲ್ ಕರ್ನಾಟಕ ಸೇವಾ ವೃಂದದ ಬಳಿಯಿಂದ ವಿದ್ಯಾದಾಯಿಯಿನ ಸಭಾಂಗಣದ ವರೆಗೆ ಜನಾಗ್ರಹ ಜಾಥಾ ನಡೆಯಿತು.