×
Ad

ದಾಮೋದರ ನಿಸರ್ಗ ಸಂಸ್ಮರಣೆ - ಹರಿಕೃಷ್ಣ ಪುನರೂರಿಗೆ ಪ್ರಶಸ್ತಿ

Update: 2025-09-04 20:07 IST

ಮಂಗಳೂರು, ಸೆ.4: ತುಳುನಾಡು, ನುಡಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡಿದ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ನಮ್ಮಲ್ಲಿವೆ. ತುಳು ಚಳುವಳಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಹಿರಿಯರೆಲ್ಲ ಗತಿಸಿ ಹೋಗಿದ್ದಾರೆ. ಯಾವುದಕ್ಕೂ ಒಂದು ತಾರ್ಕಿಕ ಅಂತ್ಯ ಈವರೆಗೆ ಲಭಿಸಿಲ್ಲವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣಕ್ಕೆ ಪ್ರಾಮಾಣಿಕವಾಗಿ ದುಡಿದವರು ಸದಾ ಸ್ಮರಣೀಯರು. ಅಂತಹವರಲ್ಲಿ ಮೂರು ದಶಕ ಗಳಷ್ಟು ಕಾಲ ಕುಡ್ಲ ತುಳುಕೂಟದ ಚುಕ್ಕಾಣಿ ಹಿಡಿದ ದಾಮೋದರ ನಿಸರ್ಗರು ತುಳು ಭಾಷೆ ಮತ್ತು ಸಂಸ್ಕೃತಿಯ ನೈಜ ಹೋರಾಟಗಾರರು ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಬಿ.ದಾಮೋದರ ನಿಸರ್ಗ ಸಂಸ್ಮರಣ ಸಮಿತಿ ವತಿಯಿಂದ ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿದ ದ್ವಿತೀಯ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.

ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ್ ಕುಮಾರ್ ಐತಾಳ್ ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಊರ್ಮಿಳಾ ರಮೇಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

*ಪ್ರಶಸ್ತಿ ಪ್ರದಾನ:ಕಾರ್ಯಕ್ರಮದಲ್ಲಿ ನಿಸರ್ಗ ಅವರ ಪತ್ನಿ ಹೇಮಾ ದಾಮೋದರ ನಿಸರ್ಗ ಮತ್ತು ಮಕ್ಕಳು ಸ್ಥಾಪಿ ಸಿದ ಎರಡನೇ ವರ್ಷದ ’ಬಿ.ದಾಮೋದರ ನಿಸರ್ಗ ಪ್ರಶಸ್ತಿ’ಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅವರಿಗೆ ಪ್ರದಾನ ಮಾಡಲಾಯಿತು.

ತುಳುಕೂಟ ಮತ್ತು ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಹರಿಕಥಾ ಪರಿಷತ್ ಅಧ್ಯಕ್ಷ ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲು , ಲೇಖಕ ಡಾ.ವಸಂತ ಕುಮಾರ್ ಪೆರ್ಲ ಅತಿಥಿಗಳಾಗಿದ್ದರು.

ಮಂಗಳೂರು ತುಳುಕುಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ವಿನ್ಯಾಸ್ ನಿಸರ್ಗ ಪ್ರಶಸ್ತಿ ಪತ್ರ ವಾಚಿಸಿದರು. ನಾಗೇಶ್ ದೇವಾಡಿಗ ಕದ್ರಿ ಪ್ರಾರ್ಥಿಸಿದರು. ಸಂಸ್ಮರಣಾ ಸಮಿತಿಯ ಪ್ರಮುಖರಾದ ಡಾ.ವಿನಯ್ ಜತ್ತನ್ನ, ತ್ರಿದೇವ್ ನಿಸರ್ಗ ಮತ್ತು ಡಾ.ಮೇಘ ತ್ರಿದೇವ್ ನಿಸರ್ಗ ಅತಿಥಿಗಳನ್ನು ಗೌರವಿಸಿದರು. ನಾರಾಯಣ ಬಿ.ಡಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News