ಪ್ರಸಕ್ತ ವರ್ಷ ಭಾರತದಲ್ಲಿ ನಿರುದ್ಯೋಗ ಗರಿಷ್ಠ ಮಟ್ಟಕ್ಕೆ ಏರಿಕೆ: ಶ್ಯಾಮ್ ಸುಂದರ್ ರಾವ್
'ಉದ್ಯೋಗದ ಹಕ್ಕಿಗಾಗಿ' ಡಿವೈಎಫ್ಐ ಯುವಜನ ಜಾಥಾ 3ನೇ ದಿನಕ್ಕೆ
ಕೊಣಾಜೆ: ಕಳೆದ ನಾಲ್ಕು ದಶಕಗಳಲ್ಲಿ ಈ ಬಾರಿ ನಿರುದ್ಯೋಗದ ಸಮಸ್ಯೆ ಭಾರತದ ಯುವ ಸಮೂಹವನ್ನು ಅತಿಯಾಗಿ ಕಾಡುತ್ತಿದ್ದು, ಪ್ರಸಕ್ತ ಭಾರತದಲ್ಲಿ ನಿರುದ್ಯೋಗವು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಖ್ಯಾತ ರಂಗಕರ್ಮಿ ಶ್ಯಾಮ್ ಸುಂದರ್ ರಾವ್ ಹೇಳಿದ್ದಾರೆ.
ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಉದ್ಯೋಗದ ಹಕ್ಕಿಗಾಗಿ ಯುವಜನ ಜಾಥಾದ ಕೊನೆಯ ದಿನದ ಉದ್ಘಾಟನಾ ಸಭೆಯನ್ನು ಉಳ್ಳಾಲದ ಮುಡಿಪುವಿನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
" ಭಾರತದ ಆರ್ಥಿಕ ವ್ಯವಸ್ತೆಯು ಸಂಪೂರ್ಣವಾಗಿ ಹದಗೆಡುತ್ತಾ ಬಂದಿರುವುದರಿಂದ ಯುವಜನರು ಕೂಡಾ ನಿರುದ್ಯೋಗಿಗಳಾಗಿ ಬದಲಾಗುತ್ತಿದ್ದಾರೆ. ಯುವಜನತೆಯ ಕೈಗೆ ಕೆಲಸ ಕೊಡಬೇಕಾಗಿರುವ ನಮ್ಮ ಸರಕಾರೀ ವ್ಯವಸ್ಥೆಗಳು ಕೆಲವೇ ಕೆಲವು ಖಾಸಗೀ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿವೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಬಜೆಟ್ ನಲ್ಲಿ ಅತಿ ಹೆಚ್ಚು ಮೀಸಲಿರಿಸಬೇಕಾದ ಸರಕಾರ ವರ್ಷದಿಂದ ವರ್ಷಕ್ಕೆ ಆರೋಗ್ಯ ಮತ್ತು ಶಿಕ್ಷಣ ರಂಗವನ್ನು ಕಡೆಗಣಿಸುತ್ತಿವೆ. ರಾಜ್ಯ ಸರಕಾರ ಕೂಡಾ ತನ್ನ ಅಧೀನದಲ್ಲಿರುವ ಸರಕಾರೀ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವಜನತೆಯ ಏಳಿಗೆಯನ್ನು ಮಾಡುವುದರ ಜೊತೆಗೆ ಧಾರ್ಮಿಕ ಹೆಸರಿನ ಗಲಭೆಗಳನ್ನು ಮಟ್ಟ ಹಾಕುವಂತಾಗಬೇಕು" ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, "ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಇಲ್ಲಿ ಭದ್ರತೆ ಉದ್ಯೋಗ ಸೃಷ್ಟಿಸುವ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಮತ್ತು ಅವುಗಳಲ್ಲಿ ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ಕಲ್ಪಿಸಬೇಕು. ಜಿಲ್ಲೆಯ ಜನತೆ ಪದವಿಗಳನ್ನು ಹಿಡಿದು ಶಿಕ್ಷಣಕ್ಕೆ ಸಂಬಂಧ ಪಡದೇ ಇರುವ ಉದ್ಯೋಗವನ್ನು ಮಾಡುವ ಪರಿಸ್ಥಿತಿ ನಮ್ಮಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ಸ್ವಾಗತ ಸಮಿತಿಯ ಮುಖಂಡರಾದ ಪುಂಡರೀಕಾಕ್ಷ, ಮಹಾಬಲ ದೆಪ್ಪೆಲಿಮಾರ್, ಅಬ್ದುಲ್ ಖಾದರ್ ಸಣ್ಣಬೈಲ್, ಅಬೂಬಕರ್ ಜಲ್ಲಿ, ರಫೀಕ್ ಹರೇಕಳ, ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ, ಡಿವೈಎಫ್ಐ ಮುಡಿಪು ವಲಯ ನಾಯಕರಾದ ರಝಾಕ್ ಮುಡಿಪು, ರಝಾಕ್ ಮೊಂಟೆಪದವು, ಅಲ್ತಾಫ್ ಮುಡಿಪು ಮುಂತಾದವರು ಭಾಗವಹಿಸಿದ್ದರು.