ರಸ್ತೆ ಗುಂಡಿಯಿಂದ ಲಾರಿಯಡಿಗೆ ಸಿಲುಕಿ ಮಹಿಳೆ ಮೃತ್ಯು ಖಂಡಿಸಿ ಡಿವೈಎಫ್ಐ ನೇತೃತ್ವದಲ್ಲಿ ಧರಣಿ
ಕೂಳೂರು: ರಾಷ್ಟ್ರೀಯ ಹೆದ್ದಾರಿ ಗುಂಡಿಗಳನ್ನು ಮುಚ್ಚದೆ ದ್ವಿಚಕ್ರ ವಾಹನ ಸವಾರರ ಸಾವಿಗೆ ಕಾರಣರಾಗುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಗುಂಡಿಗೆ ಬಿದ್ದು ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ ಮಾಧವಿ ಮತ್ತು ಅಶ್ರಫ್ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಬೇಕು ಮತ್ತು ಶಾಸಕ, ಸಂಸದರ ಬೇಜವಾಬ್ದಾರಿತನ ಖಂಡಿಸಿ ಡಿವೈಎಫ್ಐ ಜಿಲ್ಲಾ ಘಟಕದ ಆಶ್ರಯದಲ್ಲಿ ಕೂಳೂರು ಜಂಕ್ಷನ್‌ನಲ್ಲಿ ಬುಧವಾರ ಬೃಹತ್ ಧರಣಿ ನಡೆಯಿತು.
ಧರಣಿಯಲ್ಲಿ ಭಾಗವಹಿಸ ಮಾತನಾಡಿದ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅವರು, ಅಶ್ರಫ್ ಮತ್ತು ಮಾಧವಿ ಅಪಘಾತ ಪ್ರಕರಣ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದ್ದು, ಅವರ ಸಾವು ಸರಕಾರಿ ಪ್ರಾಯೋಯೋಜಿತ ಕೊಲೆ ಎಂದು ಆರೋಪ ಮಾಡಿದರು.
ಡಿವೈಎಫ್ಐ ಅಶ್ರಫ್ ಅವರ ಮೃತ್ಯುವಿನ ಬಳಿಕ ನಿರಂತರ ಪ್ರತಿಭಟನೆ ಧರಣಿಗಳನ್ನು ನಡೆಸುತ್ತಾ ಬರುತ್ತಿದೆ. ಅವರ ಸಾವಿನ ಬಳಿಕವಾದರೂ ಎಚ್ಚೆತ್ತುಕೊಂಡಿದ್ದರೆ ಮಾಧವಿ ಅವರ ಸಾವು ಸಂಭವಿಸುತ್ತಿರಲಿಲ್ಲ ಎಂದು ನುಡಿದರು.
ಮಾಧವಿ ಅವರ ಮರಣದ ತಕ್ಷಣಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚಲಾಯಿತು. ಗುಂಡಿ ಮುಚ್ಚಲು ಅವರ ಸಾವು ಆಗಬೇಕಿತ್ತಾ ಎಂದು ಅವರು ಹೆದ್ದಾರಿ ಪ್ರಾಧಿಕಾರವನ್ನು ಪ್ರಶ್ನಿಸಿದರು.
ರಸ್ತೆ ಅಪಘಾತದಲ್ಲಿ ಹಿಂದೂ ಮುಸ್ಲಿಂ ಯಾರು ಸತ್ತರೂ ಯಾರೂ ಬರಲ್ಲ. ರೌಡಿ ಶೀಟರ್ ಕೊಲೆಯಾದರೆ ಫಂಡ್ ಸಂಗ್ರಹಿಸುವ ಬಿಜೆಪಿ ಮಾಧವಿ ಸಾವಿನ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ರಸ್ತೆ ಮುಚ್ಚಲು ಹಿಂದುತ್ವ ಸಂಘಟನೆಗಳು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳಿಂದಾಗಿ ದ್ವಿಚಕ್ರ ಸವಾರರು ಸಾಯುತ್ತಿದ್ದಾರೆ. ಜನರ ಜೀವಕ್ಕೆ ಬೆಲೆ ಇಲ್ಲದಾಗಿದೆ. ರಸ್ತೆಯ ನಿರ್ಲಕ್ಷ್ಯತನಕ್ಕೆ ಬಲಿಯಾದ ಕುಟುಂಬಗಳ ನೋವು ಶಾಸಕರು ಸಂಸದರು ಸೇರಿದಂತೆ ನಮ್ಮನ್ನಾಳುವವರಿಗೆ ಶಾಪವಾಗಲಿದೆ ಎಂದು ನುಡಿದ ಇಮ್ತಿಯಾಝ್ ಅವರು, ಮಾಧವಿ ಮತ್ತು ಅಶ್ರಫ್ ಕುಟುಂಬಕ್ಕೆ ನ್ಯಾಯ ಸಿಗಲೇ ಬೇಕು. ಅಲ್ಲಿಯ ವರೆಗೂ ಪ್ರತಿಭಟನೆಗಳು ನಿರಂತರ ನಡೆಯಲಿವೆ ಎಂದರು.
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಅವರು ಮಾತನಾಡಿ, ಹೆದ್ದಾರಿಯ ಸಮಸ್ಯೆಗಳ ಬಗ್ಗೆ ಇದರಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಶಾಸಕ ಭರತ್ ಶೆಟ್ಟಿಯಾಗಲೀ, ಸಂಸದ ಬೃಜೇಶ್ ಚೌಟ ಅವರೂ ಮಾತನಾಡುವುದಿಲ್ಲ. ಹೆದ್ದಾರಿಯನ್ನು ಏಕಕಾಲಕ್ಕೆ ಪೂರ್ಣ ಪ್ರಮಾಣದಲ್ಲಿ ಸರಿಪಡಿಸಲಾಗದಿದ್ದರೆ ಇಬ್ಬರೂ ರಾಜೀನಾಮೆ ನೀಡಬೇಕು. ರಸ್ತೆಯ ಹೊಂಡಕ್ಕೆ ಬಿದ್ದು ಬಲಿಯಾದವರಿಗೆ ಪರಿಹಾರ ನೀಡಬೇಕು. ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಮಂಜುಳಾ ನಾಯಕ್ ಅವರು, ಒಂದು ಗುಂಡಿ ಮುಚ್ಚಲು ಒಂದು ಜೀವ ಬಲಿ ಬೇಕಾ? ಎಂದು ಪ್ರಶ್ನಿಸಿದರು.
ಭರತ್ ಶೆಟ್ಟಿ ಅವರು ಎರಡೆರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರ ಅಭಿವೃದ್ಧಿ ಶೂನ್ಯ. ಅವರು ಧ್ವೇಷ ಭಾಷಣಗಳನ್ನು ಮಾಡುತ್ತಾ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ಜೊತೆ ಎತ್ತಿಕಟ್ಟಿ ಜಾತಿ ಧರ್ಮಗಳನ್ನು ಒಡೆದು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಕೊಳಕು ಬಾಯಿಗೆ ಹೆದರಿ ಉದ್ಯಮಿಗಳು ಮಂಗಳೂರಿನಲ್ಲಿ ಉದ್ದಿಮೆ ತೆರೆಯಲು ಹೆದರುತ್ತಿದ್ದಾರೆ. ಹಲವರ ಸಾವಿಗೆ ಕಾರಣವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಬೇಕು ಎಂದು ನಾಯಕ್ ಆಗ್ರಹಿಸಿದರು.
ಧರಣಿಯಲ್ಲಿ ಶ್ರೀನಾಥ್ ಕಾಟಿಪಳ್ಳ ಮಾತನಾಡಿದರು. ಮನೋಜ್ ವಾಮಂಜೂರು, ಚರಣ್ ಶೆಟ್ಟಿ, ಕನಕದಾಸ್ ಕೂಳೂರು, ವಿನ್ಸೆನ್ ಕೋಡಿಕಲ್, ಪ್ರಮಿಳಾ ಕಾವೂರು, ತಯ್ಯೂಬ್ ನವೀನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆಗೂ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಶಾಸಕ ಭರತ್ ಶೆಟ್ಟಿ, ಸಂಸದ ಬೃಜೇಶ್ ಚೌಟ ಅವರಿಗೆ ದಿಕ್ಕಾರ ಘೋಷಣೆಗಳನ್ನು ಧರರಣಿ ನಿರತರು ಕೂಗಿದರು.
ಭರತ್ ಶೆಟ್ರೇ ನಿಮ್ಮ ಕೆನ್ನಗೆ ಯಾರು ಭಾರಿಸಬೇಕು : ಮಂಜುಳಾ ನಾಯಕ್
ಸಾರ್ವಜನಿಕರು ಹೋರಾಟ ಮಾಡಿಯೇ ಎಲ್ಲವನ್ನೂ ಪಡೆಯಬೇಕಾಗಿದ್ದರೆ, ಜನಪ್ರತಿನಿಧಿಗಳು ಇರುವುದು ಯಾಕೆ?. ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಮಾತನಾಡಲಾಗದ ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಲು ಹೊರಟಿದ್ದರು. ಈಗ ನಿಮ್ಮ ಕೆನ್ನೆಗೆ ಯಾರು ಹೊಡೆಯಬೇಕು ಎಂದು ಮಂಜುಳಾ ನಾಯಕ್ ಶಾಸಕ ಭರತ್ ಶೆಟ್ಟಿ ಅವರನ್ನು ಪ್ರಶ್ನಿಸಿದರು.
"ಯಾರೋ ಮಾಡಿರುವ ರಸ್ತೆಗೆ ಸಾವರ್ಕರ್ ಹೆಸರಿಡಲು ಹೊರಟಿದ್ದ ಶಾಸಕ ಭರತ್ ಶೆಟ್ಟಿ ಅವರು ಅನೇಕರನ್ನು ಗಂಭೀರವಾಗಿ ಗಾಯಗೊಳಿಸಿದ್ದ, ಅಶ್ರಫ್ ಮತ್ತು ಮಾಧವಿ ಅವರನ್ನು ಬಲಿಪಡೆದ ರಾಷ್ಟ್ರೀಯ ಹೆದ್ದಾರಿಗೆ ನಿಮ್ಮ ತಂದೆಯ ಹೆಸರಿಡುತ್ತೀರಾ? ತಾಕತ್ತಿದ್ದಾರೆ ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ವಿಧಾನ ಸಭೆಯಲ್ಲಿ ಮಾತನಾಡಿ, ಮಾಧವಿ ಮತ್ತು ಅಶ್ರಫ್ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಿ".
- ಬಿ.ಕೆ. ಇಮ್ತಿಯಾಝ್, ಡಿವೈಎಫ್ ಐ ದ.ಕ. ಜಿಲ್ಲಾಧ್ಯಕ್ಷ