ಯುಎಚ್‌ಐಡಿ ಸ್ಟಿಕ್ಕರ್ ಅಳವಡಿಕೆ ಮತ್ತು ಜನಗಣತಿಗೆ ಸ್ಪಂದಿಸಿ: ಹಾಜಿ ಮುಹಮ್ಮದ್ ಮಸೂದ್ ಮನವಿ
ಹಾಜಿ ಮುಹಮ್ಮದ್ ಮಸೂದ್
ಮಂಗಳೂರು: ಸರಕಾರವು ಯುಎಚ್‌ಐಡಿ ಸ್ಟಿಕ್ಕರ್‌ಗಳನ್ನು ಅಳವಡಿಸುತ್ತಿರುವ ಮತ್ತು ಜನಗಣತಿ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.
ಕರ್ನಾಟಕದ ಪ್ರತಿ ಮನೆಯ ಬಾಗಿಲಿನಲ್ಲಿ ಈಗ UHID ಸ್ಟಿಕ್ಕರ್‌ಗಳು ಅಳವಡಿಸಲಾಗುತ್ತಿದೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೊದಲ ಹೆಜ್ಜೆ ಇದಾಗಿದೆ. ಈ ಸ್ಟಿಕ್ಕರ್ ಬಗ್ಗೆ ಮತ್ತು ಇದರಲ್ಲಿ ಸರ್ವರ ಪಾತ್ರ ಏನು ಎಂಬುದರ ಕುರಿತು ಆಯೋಗವು ಸಂಪೂರ್ಣ ಮಾಹಿತಿಯನ್ನು ನೀಡಿದೆ.
UHID ಎಂದರೆ ಯೂನಿಕ್ ಹೌಸ್ಹೋಲ್ಡ್ ಐಡೆಂಟಿಫಿಕೇಶನ್ (ಅದ್ವಿತೀಯ ಗೃಹ ಖಾತೆ ಸಂಖ್ಯೆ). ರಾಜ್ಯದ ಪ್ರತಿ ಮನೆಗೂ ಒಂದು ಗುರುತಿಸುವಿಕೆಯ ಸಂಖ್ಯೆಯನ್ನು ನೀಡಲಾಗುತ್ತಿದೆ. ಈ ಸಂಖ್ಯೆಯನ್ನು ಹೊಂದಿರುವ ಸ್ಟಿಕ್ಕರನ್ನು ಆಯೋಗದ ಸಿಬ್ಬಂದಿಗಳು ಪ್ರತಿ ಮನೆಯ ಬಾಗಿಲಿಗೆ ಅಂಟಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಸಿಬ್ಬಂದಿಗಳು ಮನೆಯ ಆರ್‌ಆರ್ ನಂಬರ್ (ಮನೆಯ ವಿದ್ಯುತ್ ಮೀಟರ್ ಸಂಖ್ಯೆ) ಆಧಾರದ ಮೇಲೆ ಪ್ರತಿ ಮನೆಗೆ ಭೇಟಿ ನೀಡಿ ಅಲ್ಲಿ ಅವರು ಹೌಸ್‌ಹೋಲ್ಡ್ ಐಡಿಯನ್ನು ಜನರೇಟ್ ಮಾಡಿದ ಬಳಿಕ ಸ್ಟಿಕ್ಕರ್ ಅಂಟಿಸುತ್ತಾರೆ. ಈ ಸ್ಟಿಕ್ಕರ್ ಮೇಲೆ UHID ಸಂಖ್ಯೆ, ಕ್ಯೂಆರ್ ಕೋಡ್ ಮತ್ತಿತರ ಮಾಹಿತಿಗಳು ಇರುತ್ತವೆ.
ಇದು ಸಮೀಕ್ಷೆಯ ಮುಂದಿನ ಹಂತಗಳಿಗೆ ಅಗತ್ಯವಾಗಿದೆ. ಆ ಬಳಿಕ ಎನ್ಯೂಮರೇಷನ್ ಬ್ಲಾಕ್‌ಗಳನ್ನು ತಯಾರಿಸುತ್ತಾರೆ. ಪ್ರತಿ ಬ್ಲಾಕ್‌ಗೆ ಒಬ್ಬ ಶಿಕ್ಷಕರನ್ನು ನೇಮಿಸಿ ಅವರು ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ. ಸೆ.22ರಿಂದ ಈ ಸಮೀಕ್ಷೆ ಆರಂಭವಾಗಲಿದೆ. ಶಿಕ್ಷಕರು ಮನೆಯ ಸದಸ್ಯರೊಂದಿಗೆ ಮಾತನಾಡಿ ಅವರ ಶೈಕ್ಷಣಿಕ ಮಟ್ಟ, ಆದಾಯ, ಉದ್ಯೋಗ, ಸಾಮಾಜಿಕ ಸ್ಥಿತಿ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಹಿಂದುಳಿದ ವರ್ಗಗಳ ಆಯೋಗವು ಈ ಡೇಟಾವನ್ನು ಬಳಸಿ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಸರಿಯಾದ ಮೀಸಲಾತಿ, ಶಿಕ್ಷಣ ಸೌಲಭ್ಯಗಳು, ಉದ್ಯೋಗ ಅವಕಾಶಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ. ಇದರ ಯಶಸ್ಸಿಗೆ ಪ್ರತಿಯೊಬ್ಬ ನಾಗರಿಕನ ಸಹಕಾರ ಅಗತ್ಯ. ಸಿಬ್ಬಂದಿಗಳು ಬಂದಾಗ ಮಾಹಿತಿ ನೀಡಿ, ಸ್ಟಿಕ್ಕರ್ ಅಂಟಿಸಲು ಅನುಮತಿಸಿ. ಯಾವುದೇ ಕಾರಣಕ್ಕೂ ಸ್ಟಿಕ್ಕರ್ ತೆಗೆಯಬೇಡಿ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.