ಮಂಗಳೂರು| ಅಪರಾಧ ಪತ್ತೆ ಪ್ರಕರಣದಲ್ಲಿ ಕಾರ್ಯಕ್ಷಮತೆ ತೋರಿದ ಪೊಲೀಸರಿಗೆ ಅಭಿನಂದನೆ
ಮಂಗಳೂರು, ಸೆ.12: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಠಾಣೆಯ ಅಪರಾಧ ಪ್ರಕರಣಗಳಲ್ಲಿ ಪತ್ತೆ ಕಾರ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯ ಕ್ಷಮತೆಯನ್ನು ಮೆರೆದ 32 ಮಂದಿ ಪೊಲೀಸ್ ಅಧಿಕಾರಿ ಮತ್ತು 121 ಮಂದಿ ಸಿಬ್ಬಂದಿಗಳನ್ನು ಶುಕ್ರವಾರ ಜಿಲ್ಲಾ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅಭಿನಂದನಾ ಪತ್ರ ಮತ್ತು ನಗದು ಬಹುಮಾನ ನೀಡಿದರು. ಈ ಸಂದರ್ಭ ನಗರದ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಲು ನೆರವಾದ ವಿಶೇಷ ಕಾರ್ಯ ಪಡೆಯ 19 ಮಂದಿ ಸಿಬ್ಬಂದಿಗಳನ್ನು ಪುರಸ್ಕರಿಸಲಾಯಿತು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಅನೇಕ ಎಲ್‌ಪಿಸಿ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ 27 ವರ್ಷದ ಹಿಂದಿನ ಮತೀಯ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಲಾಗಿರುತ್ತದೆ. ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿರುವ 52 ಎನ್‌ಬಿಡಬ್ಲ್ಯು ಆರೋಪಿಗಳನ್ನು ಬಂಧಿಸಲಾಗಿದೆ.
ಸೊತ್ತು ಕಳವು ಪ್ರಕರಣಗಳ ಪೈಕಿ 39 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಮಾಡಿ ಸುಮಾರು 1.5 ಕೋ.ರೂ. ಮೌಲ್ಯದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ಪೆಡ್ಲರ್ಸ್‌ಗಳ ಮೇಲೆ 37 ಪ್ರಕರಣ ದಾಖಲಿಸಿ 73 ಆರೋಪಿಗಳನ್ನು ಬಂಧಿಸಲಾಗಿದೆ. 46 ಡ್ರಗ್ ಪೆಡ್ಲರ್ಸ್‌ಗಳು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ 89 ಪ್ರಕರಣವನ್ನು ದಾಖಲಿಸಲಾಗಿದೆ. 127 ಆರೋಪಿಗಳನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಇಲಾಖೆಯು ತೀವ್ರ ನಿಗಾ ಇಟ್ಟಿದೆ. ದ್ವೇಷ ಭಾಷಣ, ಸಾಮಾಜಿಕ ಜಾಲಾತಾಣ ದಲ್ಲಿ ಅಪಪ್ರಚಾರ, ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ 22 ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.