×
Ad

ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

Update: 2025-09-12 18:35 IST

ಮಂಗಳೂರು, ಸೆ.12: ತಿಂಗಳ ಹಿಂದೆ ನಗರದ ನ್ಯೂ ಫೀಲ್ಡ್ ಸ್ಟ್ರೀಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 65 ವರ್ಷ ಪ್ರಾಯದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಆರೋಪಿ ಕೊಡಗು ಜಿಲ್ಲೆಯ ಕುಶಾಲ ನಗರದ ಮುಹಮ್ಮದ್ ರಾಶಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆ.9ರಂದು ರಾತ್ರಿ 8:30ಕ್ಕೆ ಆರೋಪಿಯು ಸ್ಕೂಟರ್‌ನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಳೆದು ಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂದರ್ ಠಾಣೆಯ ಇನ್‌ಸ್ಪೆಕ್ಟರ್ ಅಜ್ಮತ್ ಆಲಿ ಜಿ., ಎಸ್ಸೈ ಪ್ರದೀಪ್ ಟಿ.ಆರ್, ಎಎಸ್ಸೈ ಬಾಬು, ದಾಮೋದರ್ ಮತ್ತು ಸಿಬ್ಬಂದಿಗಳು ಗುರುವಾರ ನಗರದ ಕೇಂದ್ರ ಮಾರುಕಟ್ಟೆ ಬಳಿ ಕಾರ್ಯಾಚರಣೆ ನಡೆಸಿ ಮುಹಮ್ಮದ್ ರಾಶಿಕ್‌ನನ್ನು ಬಂಧಿಸಿದರು. ಆರೋಪಿಯಿಂದ 4.50 ಲಕ್ಷ ರೂ. ಮೌಲ್ಯದ 42 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಇತರ ಆರೋಪಿಗಳು ಭಾಗಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News