ವಕ್ಫ್ ತಿದ್ದುಪಡಿ ಕಾಯ್ದೆಯ ಎರಡು ಪ್ರಮುಖ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ತಡೆ: ಸಂಘಟನೆಗಳ ಸ್ವಾಗತ
ಮಂಗಳೂರು, ಸೆ.15: ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ಎರಡು ಪ್ರಮುಖ ನಿಬಂಧನೆಗಳ ಜಾರಿಗೆ ಸುಪ್ರೀಂ ಕೋರ್ಟ್ ಸೋಮವಾರ ತಾತ್ಕಾಲಿಕ ತಡೆ ನೀಡಿದ್ದು, ತೀರ್ಪನ್ನು ಸಂಘಟನೆಗಳು ಸ್ವಾಗತಿಸಿವೆ.
*ಯುನಿವೆಫ್ ಕರ್ನಾಟಕ: 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ಎರಡು ಪ್ರಮುಖ ನಿಬಂಧನೆಗಳ ಜಾರಿಗೆ ಸುಪ್ರೀಂ ಕೋರ್ಟ್ ಸೋಮವಾರ ತಾತ್ಕಾಲಿಕ ತಡೆ ನೀಡಿದೆ. ಇದು ಮುಸ್ಲಿಮರು ಸಹಿತ ಸಂವಿಧಾನ ರಕ್ಷಕರು ನಡೆಸಿದ ಹೋರಾಟದ ಪ್ರಥಮ ಯಶಸ್ಸು ಆಗಿದೆ. ಜಿಲ್ಲಾಧಿಕಾರಿಗೆ ಆಸ್ತಿಯನ್ನು ವಕ್ಫ್ ಆಗಿ ಗುರುತಿಸುವ ಅಧಿಕಾರ ನೀಡುವ ಅಂಶ ಹಾಗು ವಕ್ಫ್ ರಚಿಸಲು ವ್ಯಕ್ತಿ ಕನಿಷ್ಟ 5 ವರ್ಷಗಳ ಕಾಲ ಮುಸ್ಲಿಮರಾಗಿರಬೇಕು ಎಂಬ ಶರ್ತಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ರಾಜ್ಯಸರಕಾರ ಕಾನೂನು ಮಾಡುವ ತನಕ ತಾತ್ಕಾಲಿಕ ತಡೆ ನೀಡಿರುವುದು ಸ್ವಾಗತಾರ್ಹ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
*ಮುಸ್ಲಿಂ ವರ್ತಕರ ಸಂಘ: ಮುಸ್ಲಿಮ್ ಸಮುದಾಯದ ಖಾಸಗಿ ಹಕ್ಕುಗಳನ್ನು ವಕ್ಫ್ ತಿದ್ದುಪಡಿ ಕಾಯ್ದೆಯು ಕಸಿಯುತ್ತಿದೆ ಎಂದು ಮುಸ್ಲಿಮರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಸುಪ್ರೀಂ ಕೋರ್ಟ್‌ನ ಈ ತಾತ್ಕಾಲಿತ ತೀರ್ಪು ನ್ಯಾಯಾಲಯದ ಮೇಲೆ ಸಂವಿಧಾನದ ರಕ್ಷಕರು ಇಟ್ಟ ವಿಶ್ವಾಸದ ಪ್ರತೀಕವಾಗಿದೆ ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.