×
Ad

ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಪದ ಕೈಬಿಡದಿದ್ದರೆ ಸಮೀಕ್ಷೆ ಬಹಿಷ್ಕಾರ: ಹಿಂದೂ ಧಾರ್ಮಿಕ ಪ್ರಮುಖರ, ಸಾಧು ಸಂತರ ದುಂಡುಮೇಜಿನ ಸಭೆ ನಿರ್ಣಯ

Update: 2025-09-20 22:34 IST

ಮಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಪಟ್ಟಿಯಲ್ಲಿ ಹಿಂದೂ ಧರ್ಮದ 47 ಉಪಜಾತಿಗಳ ಜೊತೆ ಇರುವ ಕ್ರಿಶ್ಚಿಯನ್ ಪದವನ್ನು ಕೈಬಿಡದಿದ್ದರೆ ಸಮೀಕ್ಷೆಯನ್ನು ಬಹಿಷ್ಕರಿಸಲು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯ ದ.ಕ ಜಿಲ್ಲೆ ವತಿಯಿಂದ ನಗರದ ಬಾಳಂಭಟ್ ಸಭಾಂಗಣದಲ್ಲಿ ಶನಿವಾರ ನಡೆದ ಹಿಂದೂ ಧಾರ್ಮಿಕ ಪ್ರಮುಖರ, ಸಾಧು ಸಂತರ ದುಂಡುಮೇಜಿನ ಸಭೆ ನಿರ್ಣಯ ಕೈಗೊಂಡಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ 47 ಉಪಜಾತಿಗಳ ಪಟ್ಟಿಯನ್ನು ಕೈಬಿಡುವಂತೆ ಸರಕಾರ ಕೂಡಲೇ ಆಯೋಗಕ್ಕೆ ಸೂಚನೆ ನೀಡಬೇಕು. ಹಿಂದೂ ಕ್ರಿಶ್ಚಿಯನ್ ಜಾತಿಯನ್ನು ಜಾತಿಗಣತಿಯಿಂದ ಕೈಬಿಟ್ಟ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಬೇಕು. ಈ ಮಾದರಿಯಲ್ಲೇ ಸಮೀಕ್ಷೆ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಮೀಸಲಾತಿಯಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ. ಆಯೋಗದ ಈ ನಿರ್ಧಾರ ಮತಾಂತರಕ್ಕೆ ಸರಕಾರ ಪ್ರೇರಣೆ ನೀಡಿದಂತಾಗಿದೆ ಎಂದು ಆರೋಪಿಸಿದರು.

ಹಿಂದೂ ಉಪಜಾತಿಗಳ ಜತೆ ಕ್ರಿಶ್ಚಿಯನ್ ಪದ ಬಳಕೆ ಮಾಡಿರುವುದಕ್ಕೆ ಬಿಷಪ್‌ಗಳು ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ಅದರೆ ಅವರು ಈ ಬಗ್ಗೆ ಮಾತನಾಡಿಲ್ಲ. ಕ್ರಿಶ್ಚಿಯನ್ ಪದ ಸೇರಿಸಿರುವುದು ಇನ್ನಷ್ಟು ಮತಾಂತರಕ್ಕೆ ಕುಮ್ಮಕ್ಕು ನೀಡುವ ತಂತ್ರ ಎಂದು ಸಣ್ಣ ಜಾತಿಯವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಜಾತಿ ಗಣತಿಯಲ್ಲಿ ಸರಕಾರವೇ ಗೊಂದಲ ಸೃಷ್ಟಿಸಿದೆ. ಕೆಲವು ಜಾತಿಗಳನ್ನು ಮೀಸಲಾತಿಯಿಂದ ಹೊರಗಿಡುತ್ತಿದೆ. ಕ್ರಿಶ್ಚಿಯನ್ ಮತ್ತು ಮುಸ್ಲಿಮರನ್ನು ಹಿಂದೂ ಜಾತಿಯ ಒಳಗೆ ತಂದಿದೆ. ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಮಾಡೂರು ಶಿವಗಿರಿ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಕಾಣಿಯೂರು ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ಗುರುಪುರ ಜಂಗಮ ಮಠದ ರುದ್ರಮುನಿ ಮಹಾಸ್ವಾಮೀಜಿ, ಮುಳಿಯ ಶಿವಾನಂದ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ಮುಖಂಡ ಪ್ರೊ. ಎಂ.ಬಿ.ಪುರಾಣಿಕ್, ಹಿಂದೂ ಜಾಗರಣ ವೇದಿಕೆಯ ಕೆ.ಟಿ.ಉಲ್ಲಾಸ್,ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News