×
Ad

ಚಿಕಿತ್ಸೆ ಪಡೆದು ಹೋದವರನ್ನು ಕರೆದು ಗೌರವಿಸುವುದು ಪುಣ್ಯದ ಕೆಲಸ: ಡಾ.ತಿಮ್ಮಯ್ಯ

Update: 2025-09-27 18:06 IST

ಮಂಗಳೂರು: ಚಿಕಿತ್ಸೆ ಪಡೆದು ಹೋದವರನ್ನು ಮತ್ತೆ ಕರೆದು ವೈದ್ಯರು ಸನ್ಮಾನ ಮಾಡುವುದು ಪುಣ್ಯದ ಕೆಲಸ, ಹೃದಯಶ್ರೀಮಂತಿಕೆ ಇರುವ ವೈದ್ಯರುಗಳಿಂದ ಮಾತ್ರ ಇಂತಹ ಕಾರ್ಯವನ್ನು ನಿರೀಕ್ಷಿಸಲು ಸಾಧ್ಯ ಎಂದು ದ.ಕ. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ.

ನಗರದ ಇಂಡಿಯಾನಾ ಹಾಸ್ಪಿಟಲ್ ಆಂಡ್ ಹಾರ್ಟ್ ಇನ್‌ಸ್ಟಿಟ್ಯೂಶನ್‌ನಲ್ಲಿ ಶನಿವಾರ ವಿಶ್ವ ಹೃದಯ ದಿನಾಚರಣೆ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ಕೊಲೆಸ್ಟ್ರಾಲ್ ಅಂಶ ಊಹೆಗೂ ಮೀರಿ ಇರುವುದು ಆತಂಕಕಾರಿ ವಿಚಾರವಾ ಗಿದೆ. ಹೃದಯಕ್ಕೆ ಮಾರಕವಾದ ಕೊಲೆಸ್ಟ್ರಾಲ್ ಹೆಚ್ಚಲು ನಮ್ಮ ಜೀವನ ಶೈಲಿ ಮತ್ತು ಆಹಾರಪದ್ಧತಿ ಕಾರಣವಾಗಿದೆ ಎಂದು ಹೇಳಿದರು.

ಅತಿಯಾದ ಉಪ್ಪು ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣ ಇಲ್ಲದಿರುವುದು, ನಿರಂತರ ಮೊಬೈಲ್ ಮತ್ತು ಟಿವಿ ವೀಕ್ಷಣೆ, ಒತ್ತಡ, ನಿದ್ದೆಗೆಟ್ಟು ಕೆಲಸ ಮಾಡುವುದು, ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆ ಹೃದಯದ ಕಾಯಿಲೆಗೆ ಕಾರಣವಾಗುತ್ತದೆ ಎಂದರು.

ದಿಕ್ಚೂಚಿ ಭಾಷಣ ಮಾಡಿದ ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಇಂಟರ್ವೆನಲ್ ಕಾರ್ಡಿಯಾಲಜಿಸ್ಟ್ ಡಾ.ಯೂಸುಫ್ ಕುಂಬ್ಳೆ, ಅವರು ಹೃದಯರಕ್ತನಾಳದ ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಇಂಡಿಯಾನಾ ಆಸ್ಪತ್ರೆ ಮುಂಚೂಣಿಯಲ್ಲಿದೆ. ರಚನಾತ್ಮಕ ಹೃದಯ ಚಿಕಿತ್ಸಾ ವಿಧಾನವನ್ನು ಪ್ರಾರಂಭಿಸಿದ ಆರನೇ ವರ್ಷವನ್ನು ಆಸ್ಪತ್ರೆಯು ಹೆಮ್ಮೆಯಿಂದ ಆಚರಿಸುತ್ತಿದೆ. ವಿಶ್ವ ಹೃದಯ ದಿನವು ಹೃದಯರಕ್ತನಾಳದ ಕಾಯಿಲೆಗಳು, ಅವುಗಳ ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಡಿಯಾನಾ ಆಸ್ಪತ್ರೆ ಶ್ರಮಿಸುತ್ತಿದೆ ಎಂದರು.

ಶೇಕಡಾ 80 ರಷ್ಟು ಅಕಾಲಿಕ ಹೃದಯ ಸಂಬಂಧಿ ಸಾವುಗಳನ್ನು ಆರಂಭಿಕ ತಪಾಸಣೆ, ಕೈಗೆಟುಕುವ ಆರೈಕೆ, ಅಥ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ದೈಹಿಕವಾಗಿ ಸಕ್ರೀಯವಾಗಿರುವುದರ ಮೂಲಕ ತಡೆಗಟ್ಟಬಹುದು ಎಂದು ನುಡಿದರು.

ಈ ಸಂದರ್ಭದಲ್ಲಿ, ಟಿಎವಿಆರ್ , ಟಿಎವಿಐ, ಟಿಎಂವಿಆರ್, ಟಿಐವಿಆರ್ ಮತ್ತು ಮಿಟ್ರಾಕ್ಲಿಪ್ ಕಾರ್ಯವಿಧಾನ ಗಳಂತಹ ಮುಂದುವರಿದ ರಚನಾತ್ಮಕ ಹಾರ್ಟ್ ಇಂಟರ್ವಶನ್ ಚಿಕಿತ್ಸೆಯನ್ನು ಇಂಡಿಯಾನ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪಡೆದ ರೋಗಿಗಳನ್ನು ಸನ್ಮಾನಿಸಲಾಯಿತು.

ಇಂಡಿಯಾನಾ ಆಸ್ಪತ್ರೆಯ ಚೆಯರ್‌ರ್ಮೆನ್ ಡಾ. ಅಲಿ ಕುಂಬ್ಳೆ , ಆಸ್ಪತ್ರೆಯ ನಿರ್ದೇಶಕರಾದ ಡಾ. ಆದಿತ್ಯ ಭಾರದ್ವಾಜ, ಡಾ.ಅಪೂರ್ವ ಶ್ರೀಜಯದೇವ, ಸಿಇಒ ವಿಜಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಗದೀಶ ಎಡಪಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News