ಗಾಂಧಿಯನ್ನು ಓದಿ ತಿಳಿದವರು ಅಪಪ್ರಚಾರ ಮಾಡಲಾರರು: ಅರವಿಂದ ಚೊಕ್ಕಾಡಿ
ಮಂಗಳೂರು, ಅ.4: ಸ್ವಾತಂತ್ರ್ಯ ನಂತರದ ಭಾರತದಲ್ಲಿ ವೈಚಾರಿಕ ಪ್ರಜ್ಞೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿಲ್ಲ. ಹಾಗಾಗಿಯೇ ಗಾಂಧಿಯನ್ನು ಕೆಲವರು ದೇವರನ್ನಾಗಿಸದರೆ, ಮತ್ತ ಕೆಲವರು ಶತ್ರುವಾಗಿ ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಗಾಂಧಿಯನ್ನು ಅರಿತವರು ಅಪಪ್ರಚಾರ ಮಾಡಲಾರರು ಎಂದು ಗಾಂಧಿ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಅಭಿಪ್ರಾಯಿಸಿದ್ದಾರೆ.
ತುಳುಭವನದಲ್ಲಿ ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆದ ತುಳುವ ನೆಲದಲ್ಲಿ ಲೋಕಮಾನ್ಯರು ವಿಚಾರಗೋಷ್ಟಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜತೆಗಿನ ಸಂವಾದದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಗಾಂಧೀಜಿ ಕೂಡಾ ನಮ್ಮಂತೆ ಸಾಮಾನ್ಯರು. ಗಾಂಧಿ ಹತ್ಯೆ ಬಳಿಕ ಗೋಡ್ಸೆ ಕೋರ್ಟ್‌ಗೆ ಸಲ್ಲಿಸಿದ್ದ ಮೂರೂವರೆ ಪುಟಗಳ ಹೇಳಿಕೆ ನೀಡಿದ್ದ. ಅದನ್ನು ಗೋಡ್ಸೆ ಸಹೋದರ 150 ಪುಟಗಳ ಪುಸ್ತಕದಲ್ಲಿ ಗಾಂಧಿಯನ್ನು ಅರಿಯದೆ ತನ್ನ ಮಾತುಗಳಲ್ಲಿ ಬಣ್ಣಿಸಿದ್ದ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿ ಬಗ್ಗೆ ಅಪಪ್ರಚಾರಕ್ಕೆ ಕಾರಣವಾಗಿದೆ. ಒಂದು ವಿಷಯವನ್ನು ಹಲವು ರೀತಿಯಲ್ಲಿ ನೋಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಆದರೆ ಸತ್ಯದ ಅನುಸಂಧಾನ ನಡೆದಾಗ ವಾಸ್ತವದ ಅರಿವಾಗುತ್ತದೆ. ಗಾಂಧೀಜಿ ಪರಿಪೂರ್ಣರು ಎಂಬುದನ್ನು ಒಪ್ಪಲಾಗದು. ಆದರೆ ಹಿಂಸೆ ಮತ್ತು ಅಹಿಂಸೆಯ ನಡುವೆ ಹೇಗೆ ಬದುಕಬೇಕು ಎಂಬುದನ್ನು ಗಾಂಧೀಜಿ ನಮಗೆ ತೋರಿಸಿಕೊಟ್ಟಿದ್ದಾರೆ ಎಂದವರು ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಮಂದಿ ಪಾಲು ಪಡೆದಿದ್ದರೂ ಗಾಂಧೀಜಿಯನ್ನು ರಾಷ್ಟ್ರ ಪಿತ ಎಂದು ಯಾಕೆ ಕರೆಯಲಾಗುತ್ತದೆ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ, ರಾಷ್ಟ್ರ ನಿರ್ಮಾಣ ಮಾಡಿದವರನ್ನು ರಾಷ್ಟ್ರಪಿತ ಎಂದು ಕರೆ ಯುವ ಪರಿಪಾಠ ರೋಮನ್‌ನದ್ದು. ರಾಷ್ಟ್ರಪಿತ ಎಂದು ಸಂಬೋಧಿಸಲು ಒಂದಾ ಜನರಿಂದ ಕರೆಯಲ್ಪಡಬೇಕು ಅಥವಾ ಸಂಸತ್ತಿನಲ್ಲಿ ಅದು ಘೋಷಣೆಯಾಗಬೇಕು. ಆದರೆ ಗಾಂಧೀಜಿ ರಾಷ್ಟ್ರಪಿತವೆಂದು ಸಂಸತ್ತಿನಲ್ಲಿ ಘೋಷಣೆ ಯಾಗಿಲ್ಲ. ಬದಲಾಗಿ ಸುಭಾಷ್ ಚಂದ್ರ ಬೋಸ್ ಅವರು ಗಾಂಧೀಜಿಯನ್ನು ಆ ಹೆಸರಿನಲ್ಲಿ ಸಂಬೋಧಿಸಿದರು. ಹಾಗಾಗಿ ಅವರನ್ನು ರಾಷ್ಟ್ರಪಿತ ಎಂದು ಹೇಳಬೇಕಾದವರು ಹೇಳಬಹುದು. ಇದಕ್ಕೆ ಯಾವುದೇ ನಿಯಮ ಇಲ್ಲ. ದೇಶದಲ್ಲಿ ಆ ಸಂದರ್ಭದಲ್ಲಿದ್ದ ವ್ಯವಸ್ಥೆಯನ್ನು ಒಗ್ಗೂಡಿಸಿ ಹೋಳುಗಳಾಗಿ ಹಂಚಿ ಹೋಗಿದ್ದ ಭಾರತದಲ್ಲಿ ರಾಷ್ಟ್ರೀಯ ಪ್ರಜ್ಞೆ ಬಿತ್ತಿದವರು ಗಾಂಧೀಜಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಅರವಿಂದ ಚೊಕ್ಕಾಡಿ ಹೇಳಿದರು.
ಗಾಂಧೀಜಿಯ ಬಗ್ಗೆ ಪಠ್ಯವಿದೆಯಾದರೂ ದೇಶ ವಿಭಜನೆಯ ಕುರಿತಂತೆ ಮಾಹಿತಿ ಇಲ್ಲ. ಹಾಗಾಗಿಯೇ ಹಲವು ತಪ್ಪು ಕಲ್ಪನೆಗಳಿಗೆ ಕಾರಣವಾಗಿದೆ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಅರವಿಂದ ಚೊಕ್ಕಾಡಿ, ಆ ಕಾರ್ಯ ಆಗಬೇಕಾಗಿದೆ. ದೇಶ ವಿಭಜನೆಗೆ ಗಾಂಧೀಜಿಯಾಗಲಿ ಅಥವಾ ಇತರ ಸ್ವಾತಂತ್ರ್ಯ ಹೋರಾಟಗಾರರಾಗಲಿ ಕಾರಣವಲ್ಲ. ಬದಲಾಗಿ ಅದು ಬ್ರಿಟಿಷರ ಪಿತೂರಿ ಎಂಬುದನ್ನು ತಿಳಿದವರು ಯುವಜನಾಂಗಕ್ಕೆ ತಿಳಿಸುವ ಕಾರ್ಯ ಆಗಬೇಕು. ಈ ಬಗ್ಗೆ ಪಠ್ಯ ಪುಸ್ತಕದಲ್ಲಿ ಅಳವಡಿಸಲು ತಾನು ಕೂಡಾ ಶಿಫಾರಸು ಮಾಡುವುದಾಗಿ ಹೇಳಿದರು.
ವಿಚಾರಗೋಷ್ಟಿ ಮತ್ತು ಸಂವಾದ ಕಾರ್ಯಕ್ರಮವನ್ನು ದ.ಕ. ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಸುಂದರ ಬೆಳುವಾಯಿ ಉದ್ಘಾಟಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಆರಂದಲ್ಲಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಕುದ್ಮುಲ್ ರಂಗರಾವ್ ಅವರ ಆದರ್ಶ ಮತ್ತು ಕೊಡುಗೆಗಳ ಬಗ್ಗೆ ಮಾತನಾಡಿದರು. ‘ಸ್ವಾತಂತ್ರ್ಯ ಹೋರಾಟ ದಲ್ಲಿ ಗಾಂಧಿ ಮತ್ತು ವರ್ತಮಾನದಲ್ಲಿ ಗಾಂಧಿ ಬಗ್ಗೆ ಅರವಿಂದ ಚೊಕ್ಕಾಡಿ ಮಾತನಾಡಿದರು. ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.