×
Ad

ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಇಎಸ್‌ಐ ಸೌಲಭ್ಯ ಪಡೆಯಲು ರೋಗಿಗಳಿಗೆ ಸಮಸ್ಯೆ : ಶಾಸಕ ಕಾಮತ್ ಆರೋಪ

Update: 2025-10-07 18:33 IST

ಮಂಗಳೂರು: ಕಾರ್ಮಿಕರ ಆರೋಗ್ಯ ವಿಮೆ (ಇಎಸ್‌ಐ) ಯೋಜನೆಯಲ್ಲಿ ಚಿಕಿತ್ಸೆ ಪಡೆಯುವ ವಿಮೆದಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದಿಂದಾಗಿ ವೈದ್ಯಕೀಯ ಸೌಲಭ್ಯ ಪಡೆಯುವಲ್ಲಿ ತೀವ್ರ ತೊಂದರೆಯಾಗುತ್ತಿದ್ದು ಇನ್ನೂ ಸಹ ಸರಕಾರ ಎಚ್ಚೆತ್ತುಕೊಳ್ಳದಿರುವುದು ಖಂಡನೀಯ ಎಂದು ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಇಎಸ್‌ಐ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ ಅವಧಿಯು ಕಳೆದ ಸಪ್ಟೆಂಬರ್ 30ನೇ ತಾರೀಕಿನಂದು ಅಂತ್ಯಗೊಂಡಿದೆ. ಹೀಗಾಗಿ ಅಕ್ಟೋಬರ್ 1ರಿಂದ ರೋಗಿಗಳಿಗೆ ತುರ್ತು ಸಂದರ್ಭ ಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ನಾವು ಇಎಸ್‌ಐ ಸೌಲಭ್ಯ ಹೊಂದಿದ್ದರೂ ಯಾಕೆ ಕೊಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದು, ರಾಜ್ಯ ಸರಕಾರದ ತಪ್ಪಿಗೆ ಅಧಿಕಾರಿಗಳು ಪರಿತಪಿಸುವಂತಾಗಿದೆ. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೂ ಮನವಿ ಮಾಡಲಾಗಿದೆ ಎಂದು ಕಾಮತ್ ಮಾಹಿತಿ ನೀಡಿದ್ದಾರೆ.

ರಾಜ್ಯ ಸರಕಾರ ನಿಗದಿತ ಮೊತ್ತವನ್ನು ಪಾವತಿಸಿ ಸೂಕ್ತ ಕ್ರಮ ಕೈಗೊಂಡಿದ್ದರೆ ರೋಗಿಗಳು ಇಂದು ಪರದಾಡುವ ಸ್ಥಿತಿ ಬರುತ್ತಿರಲಿಲ್ಲ. ಇದೇ ವೇಳೆ ಕೇಂದ್ರ ಸರಕಾರದಿಂದ ನೀಡಲ್ಪಡುವ ವೈದ್ಯಕೀಯ ಚಿಕಿತ್ಸೆ ಸೌಲಭ್ಯಗಳು ಮುಂದುವರಿದಿದ್ದು, ರಾಜ್ಯ ಸರಕಾರದ ಅಡಿಯಲ್ಲಿ ಬರುವ ಚಿಕಿತ್ಸೆಗಳು ಮಾತ್ರ ಸಿಗದೆ ರೋಗಿಗಳಿಗೆ ತೊಂದರೆ ಯಾಗಿದೆ. ಆ ಮೂಲಕ ಲಕ್ಷಾಂತರ ಕಾರ್ಮಿಕರ ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುತ್ತಿರುವುದನ್ನು ಬಿಟ್ಟು, ಇಎಸ್‌ಐ ಎಂಬುದು ಕಾರ್ಮಿಕರ ಹಕ್ಕು ಹಾಗೂ ಸಾಮಾಜಿಕ ಭದ್ರತೆಯ ಅಂಶವೆಂಬುದನ್ನು ಮನಗಂಡು ಈ ಕೂಡಲೇ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News