ಮಂಗಳೂರು: ರಸ್ತೆಯ ಬದಿಯ ಕಾಂಕ್ರಿಟ್ ಪಿಲ್ಲರ್‌ಗೆ ಆ್ಯಂಬುಲೆನ್ಸ್ ಢಿಕ್ಕಿ; ರೋಗಿ ಮೃತ್ಯು
ಮಂಗಳೂರು, ಅ.14: ನಗರದ ನಂತೂರು ಬಳಿ ರಸ್ತೆಯ ಬದಿಯ ಕಾಂಕ್ರಿಟ್ ಪಿಲ್ಲರ್‌ಗೆ ಆ್ಯಂಬುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ರೋಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ದಾವಣಗೆರೆಯ ಈಸ ಸಾಹೇಬ್ (54) ಎಂಬವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಅ.13ರಂದು ಮುಂಜಾನೆ 4ಕ್ಕೆ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ನಂತೂರು ಬಳಿ ಅಪಘಾತಕ್ಕೀಡಾಗಿತ್ತು. ರೋಗಿ ಈಸ ಸಾಹೇಬ್ ಮೃತಪಟ್ಟರೆ, ವಾಹೀದ ಬಾನು (50) ಮತ್ತು ಹಮೀದಾಬಿ (63) ಹಾಗೂ ಚಾಲಕ ಕರಿಯಪ್ಪ ಎಂಬವರು ಗಾಯಗೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಈಸ ಸಾಹೇಬ್‌ಗೆ ಅ.11ರಂದು ಪಾರ್ಶ್ವವಾಯು ಆಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅ.12ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಕರೆತರಲಾಗುತ್ತಿತ್ತು. ಅ.13ರಂದು ಮುಂಜಾನೆ 4ಕ್ಕೆ ಆ್ಯಂಬುಲೆನ್ಸ್ ನಂತೂರು ಸರ್ಕಲ್ ದಾಟಿತ್ತು. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಾಂಕ್ರೀಟ್‌ನ ಪಿಲ್ಲರ್‌ಗೆ ಆ್ಯಂಬುಲೆನ್ಸ್ ಢಿಕ್ಕಿಯಾಗಿದೆ. ಪರಿಣಾಮ ಈಸ ಸಾಹೇಬ್ ಸ್ಟ್ರೆಚರ್‌ನಿಂದ ಕೆಳಗೆ ಬಿದ್ದಿದ್ದರು. ಬಳಿಕ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ಈಸ ಸಾಹೇಬ್ ಮೃತಪಟ್ಟಿರುವ ಬಗ್ಗೆ ದೃಢೀಕರಿಸಿದ್ದಾರೆ.