ಮಂಗಳೂರು: ಕಟ್ಟಡ ನಿರ್ಮಾಣ ಸಂಸ್ಥೆಯ ಕಚೇರಿಯಿಂದ ನಗದು ಕಳವು
Update: 2025-10-14 20:00 IST
ಮಂಗಳೂರು, ಅ.14: ನಗರದ ನವಭಾರತ್ ವೃತ್ತದ ಬಳಿಯ ಕಾಂಪ್ಲೆಕ್ಸ್‌ವೊಂದರಲ್ಲಿ ಕಾರ್ಯಾಚರಿಸುತ್ತಿರುವ ನಿರ್ಮಾಣ ಸಂಸ್ಥೆಯ ಕಚೇರಿಯ ಶಟರ್ ಮುರಿದು ಡ್ರಾವರ್‌ನಲ್ಲಿದ್ದ ಸುಮಾರು 45 ಸಾವಿರ ರೂ.ನಗದು ಕಳವಾಗಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜ್ವಲ್ ಡಿಸೋಜ ಎಂಬವರಿಗೆ ಸೇರಿದ ಸಂಸ್ಥೆ ಇದಾಗಿದ್ದು, ಅ.11ರಂದು ಸಂಜೆ 5:30ಕ್ಕೆ ಕೆಲಸಗಾರ ಬಾಗಿಲು ಮುಚ್ಚಿ ತೆರಳಿದ್ದರು. ಅ.12ರಂದು ಕಚೇರಿ ಮುಚ್ಚಿತ್ತು. ಅ.13ರಂದು ಬೆಳಗ್ಗೆ 9ಕ್ಕೆ ಅಕೌಂಟೆಂಟ್ ಮನು ಪ್ರಕಾಶ ಕಚೇರಿಗೆ ಬಂದಾಗ ಎದುರಿನ ಬಾಗಿಲಿನ ಶಟರ್ ಓಪನ್ ಆಗಿತ್ತು. ಪರಿಶೀಲಿಸಿದಾಗ ಯಾರೋ ಯಾವುದೋ ಆಯುಧದಿಂದ ಕಚೇರಿಯ ಬೀಗ ಒಡೆದು ಒಳಗೆ ಪ್ರವೇಶಿಸಿ ಸಿಸಿ ಕ್ಯಾಮರವನ್ನು ತಿರುಗಿಸುತ್ತಿರುವುದು ಮತ್ತು ಡ್ರಾವರ್‌ನಲ್ಲಿದ್ದ 45,000 ರೂ.ವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.