×
Ad

ಹೊಯ್ಗೆ ಬಜಾರ್- ಕೂಳೂರು ಜಲಮಾರ್ಗದಲ್ಲಿ ರೋರೋ!

ಗುರುಪುರ ಜಲಮಾರ್ಗಗಳ ಅಭಿವೃದ್ಧಿ: ಪರಿಸರ ಸಾರ್ವಜನಿಕ ಸಭೆ

Update: 2025-10-16 16:15 IST

ಮಂಗಳೂರು, ಅ.16: ಹಳೆ ಬಂದರಿನ ಮೀನುಗಾರಿಕಾ ಧಕ್ಕೆಯಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸಾಗರಮಾಲ ಯೋಜನೆಯಡಿ ಹೊಯ್ಗೆ ಬಜಾರ್ - ಕೂಳೂರು ನಡುವಿನ ಜಲಮಾರ್ಗದಲ್ಲಿ ರೋರೋ ಹಡಗುಗಳ ಸಂಚಾರಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿ ಯೋಜನೆ ಪ್ರಸ್ತಾಪಿಸಿದೆ.

ಈ ಬಗ್ಗೆ ಗುರುವಾರ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಹಳೆ ಬಂದರಿನ ಸೌತ್ ವಾರ್ಫ್ ಎ ಗೋದಾಮು ಬಳಿ ಹಮ್ಮಿಕೊಂಡಿದ್ದ ಪರಿಸರ ಸಾರ್ವಜನಿಕ ಸಭೆಯಲ್ಲಿ ಸ್ಥಳೀಯರು ಹಾಗೂ ಪರಿಸರಾಸಕ್ತರಿಂದ ಈ ಯೋಜನೆಗೆ ಆಕ್ಷೇಪ ವ್ಯಕ್ತವಾಗಿದೆ.

ಮೀನುಗಾರ ಮುಖಂಡರು ಯೋಜನೆಯನ್ನು ಸ್ವಾಗತಿಸುವುದಾಗಿ ಹೇಳಿದರಾದರೂ, ಮೀನುಗಾರಿಕಾ ಧಕ್ಕೆಯಲ್ಲಿ ಈಗಾಗಲೇ ಮೀನುಗಾರಿಕೆ ದೋಣಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಮೂರನೇ ಹಂತದ ಜೆಟ್ಟಿ ಕಾಮಗಾರಿಯನ್ನು ಶೀಘ್ರದಲ್ಲಿ ನಡೆಸಬೇಕೆಂದು ಆಗ್ರಹಿಸಿದರು.

ಆರಂಭದಲ್ಲಿ ಪ್ರಸ್ತಾವಿತ ಯೋಜನೆಯ ಬಗ್ಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ವಿವರ ನೀಡಿದರು.

ಮಂಗಳೂರು ತಾಲೂಕಿನ ಗುರುಪುರ ವ್ಯಾಪ್ತಿಯಲ್ಲಿ ಅಂದಾಜು 29.62 ಕೋಟಿ ರೂ. ಗಳ ಜಲಮಾರ್ಗಗಳ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ 2022ರ ಮಾರ್ಚ್ ನಲ್ಲಿ ಪಡೆಯಲಾಗಿದೆ. 13,90,23,325.36 ರೂ. ಗುತ್ತಿಗೆ ಮೊತ್ತದೊಂದಿಗೆ ಟೆಂಡರ್ ವಹಿಸಲಾಗಿದ್ದು, ಈ ಪ್ರದೇಶದಲ್ಲಿ ಹೂಳೆತ್ತುವ ಕೆಲಸ ಕಾರ್ಯವು ಈ ಯೋಜನೆಯಡಿ ನಡೆಯಲಿದೆ. ಮುಖ್ಯವಾಗಿ ಸರಕು ವಾಹನಗಳ ಸಾಗಾಟಕ್ಕೆ ಪೂರಕವಾಗಿ ರೋರೋ ಹಡಗುಗಳ ಸಂಚಾರವು ಕೂಳೂರು ಮತ್ತು ಹೊಯ್ಗೆಬಜಾರ್ ನಡುವೆ ನಡೆಯಲಿದ್ದು, ಎರಡು ಪ್ರದೇಶಗಳಲ್ಲಿ ರೋರೋ ಜೆಟ್ಟಿ ನಿರ್ಮಾಣವಾಗಲಿದೆ. ತಲಾ 400 ಮೆಟ್ರಿಕ್ ಟನ್ ಸಾಗಾಟ ಸಾಮರ್ಥ್ಯದ ಎರಡು ರೋರೋ ಹಡಗುಗಳು ಕಾರ್ಯಾಚರಿಸಲಿದ್ದು, ಪ್ರತಿದಿನ 200 ಪ್ರಯಾಣಿಕರೊಂದಿಗೆ 6 ರೋರೋ ಟ್ರಿಪ್ ಗಳು ಕಾರ್ಯನಿರ್ವಹಿಸಲಿವೆ. ಪ್ರತೀ ಹಡಗು ಆರು ಟ್ರಿಪ್ ನಂತೆ ದಿನಕ್ಕೆ ಒಟ್ಟು 12 ಟ್ರಿಪ್ ಗಳನ್ನು ನಡೆಸಲಿವೆ. ಯೋಜನೆ ಅನುಷ್ಠಾನಕ್ಕೆ 18 ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಈ ಜಲಮಾರ್ಗದ ರೋರೋ ಹಡಗಿನ ಪ್ರಯಾಣವು 8 ಕಿ.ಮೀ.ಗಳದ್ದಾಗಿದ್ದು, 15 ನಿಮಿಷದಲ್ಲಿ ಪ್ರಯಾಣಿಸಬಹುದು. ರಸ್ತೆ ಮಾರ್ಗವಾಗಿ 11.5 ಕಿ.ಮೀ. ಸಾಗಬೇಕಾಗುತ್ತದೆ ಮತ್ತು ಸಾಮಾನ್ಯವಾಗಿ 25ರಿಂದ 30 ನಿಮಿಷ ತಗುಲಿದರೆ, ವಾಹನ ದಟ್ಟಣೆಯ ಸಂದರ್ಭ 45 ನಿಮಿಷಗಳಾಗುತ್ತವೆ. ಎರಡೂ ಪ್ರವೇಶ ದ್ವಾರದ ಜೆಟ್ಟಿಗಳಲ್ಲಿ ರೆಸ್ಟೋರೆಂಟ್, ಶೌಚಾಲಯ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಸೇವೆ ಆರಂಭವಾದರೆ ಕರ್ನಾಟಕದ ಪ್ರಥಮ ಜಲಮಾರ್ಗದ ರೋರೋ ಇದಾಗಲಿದೆ. ಯೋಜನೆಗಾಗಿ ಈಗಾಗಲೇ ಸಿಆರ್ ಝೆಡ್ ಅನುಮತಿ ಪಡಯಲಾಗಿದೆ. ಇದೀಗ ಸಾರ್ವಜನಿಕ ಹಾಗೂ ಪರಿಸರ ಸಭೆ ನಡೆಸಲಾಗುತ್ತಿದೆ ಎಂದವರು ಹೇಳಿದರು.

ಮಂಗಳೂರು ಟ್ರಾಲ್ ಬೋಟ್ ಯೂನಿಯನ್ನ ಅಧ್ಯಕ್ಷ ಚೇತನ್ ಬೆಂಗ್ರೆ ಮಾತನಾಡಿ, ಯೋಜನೆಯಡಿ ಪ್ರಸ್ತಾವಿಸಲಾಗಿರುವ 3 ಮೀಟರ್ ಆಳದ ಡ್ರೆಜ್ಜಿಂಗ್ ಯೋಜನೆಗೆ ಪೂರಕವಾಗಲಿದೆಯೇ ಎಂದು ಪ್ರಶ್ನಿಸಿದರು. ಈಗಾಗಲೇ ಮಂಗಳೂರು ಧಕ್ಕೆಯಲ್ಲಿ 100 ಮೀನುಗಾರಿಕಾ ಬೋಟ್ ನಿಲ್ಲಿಸುವ ಜಾಗದಲ್ಲಿ 1300 ಬೋಟ್ ಗಳನ್ನು ಅಸುರಕ್ಷಿತ ಮಾದರಿಯಲ್ಲಿ ನಿಲ್ಲಿಸಬೇಕಾಗಿದೆ. ಕೆಎಫ್ಡಿಸಿ ಬಳಿ ಮೂರನೇ ಹಂತದ ಅಭಿವೃದ್ಧಿ ಯೋಜನೆಗೆ ಸರಕಾರದಿಂದ 49.5 ಕೋಟಿ ರೂ. ಬಿಡುಗಡೆ ಆಗಿದೆ. ಈ ಯೋಜನೆಗಾಗಿ ಈಗಾಗಲೇ ಕಳೆದ 18 ವರ್ಷಗಳಿಂದ ಮೀನುಗಾರರು ಎದುರು ನೋಡುತ್ತಿದ್ದಾರೆ. ಮುಂದೆ 4 ಮತ್ತು 5ನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡು ಯೋಜನೆ ಆಗಬೇಕಾಗಿದೆ ಎಂದರು.

ಮೀನುಗಾರಿಕಾ ಧಕ್ಕೆಯ ಆಧುನೀಕರಣ ಹಾಗೂ 3ನೇ ಹಂತದ ಅಭಿವೃದ್ಧಿ ಯೋಜನೆಗೆ ಈಗಾಗಲೇ 80 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಆದಾಗ ಮೀನುಗಾರಿಕಾ ಬೋಟುಗಳು ತಂಗಲು ಸಾಕಷ್ಟು ಸ್ಥಳಾವಕಾಶ ದೊರೆಯಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಹೇಳಿದರು.

ಎನ್ಇಸಿಎಫ್ ಸಂಘಟನೆಯ ಶಶಿಧರ ಶೆಟ್ಟಿ ಯೋಜನೆಗೆ ಆಕ್ಷೇಪಿಸಿ, ಹಳೆ ಬಂದರು ಭಾಗದಲ್ಲಿ ಬಂದರು ಭೂಮಿ ಎಂದು ಘೋಷಣೆ ಮಾಡಲು ಸಂಬಂಧಪಟ್ಟ ಆರ್ ಟಿಸಿ ಇದೆಯೇ ಎಂದು ಪ್ರಶ್ನಿಸಿದರು. ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ನದಿ ಪ್ರದೇಶ ಒತ್ತುವರಿಯಾಗಿದೆ. ಪರಿಸರ ಸಮತೋಲನವನ್ನು ಕಾಪಾಡಲು ನದಿಯನ್ನು ಉಳಿಸಬೇಕಾಗಿದೆ. ಈಗಾಗಲೇ ಯೋಜನೆಯ ಟೆಂಡರ್ ಆಗಿದೆ ಎಂದು ಹೇಳಲಾಗಿದೆ. ಆದರೆ ಪರಿಸರ ಸಂಬಂಧಿ ಅನುಮತಿ ದೊರೆಯದೆ ಟೆಂಡರ್ ಆಗಿರುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಡ್ರೆಜ್ಜಿಂಗ್ ಆರಂಭಿಸಿದಾಕ್ಷಣ ಮರಳು ಮಾಫಿಯಾ ಆರಂಭವಾಗುತ್ತದೆ. ತಾಂತ್ರಿಕವಾಗಿ ಈ ಯೋಜನೆ ಯಾವ ರೀತಿ ತಯಾರು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಒದಗಿಸಬೇಕು ಎಂದವರು ಆಗ್ರಹಿಸಿದರು.

ಯೋಜನೆ ಬಗ್ಗೆ ಸಂಬಂಧಪಟ್ಟ ಪರಿಸರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಗರ ಪ್ರದೇಶದಲ್ಲಿ ಯಾವುದೇ ರೀತಿಯ ತೊಂದರೆ, ಅವಘಡ ಸಂಭವಿಸಿದಾಗ ಈ ಮಾರ್ಗವೂ ಒಂದು ರೀತಿಯ ಸಂಪರ್ಕ ವ್ಯವಸ್ಥೆಯಾಗಲಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪ್ರತಿಕ್ರಿಯಿಸಿದರು.

ಮಂಗಳೂರು ಟ್ರಾಲ್ ಬೋಟ್ ಯೂನಿಯನ್ ನ ಉಪಾಧ್ಯಕ್ಷ ಇಬ್ರಾಹೀಂ ಮಾತನಾಡಿ, ಇಂತಹ ರೋರೋ ಸೇವೆ ಕೊಚ್ಚಿನ್, ಗೋವಾ ಮೊದಲಾದ ಕಡೆ ಈಗಾಗಲೇ ಜಾರಿಯಲ್ಲಿದೆ. ಯೋಜನೆ ರೂಪಿಸುವ ಸಂದರ್ಭ ಬ್ರೇಕ್ ವಾಟರ್ ವ್ಯವಸ್ಥೆ ಮಾಡಬೇಕು. ಗುರುಪುರ ಹಾಗೂ ನೇತ್ರಾವತಿ ನದಿಯಲ್ಲಿ ಸಮರ್ಪಕ ಡ್ರೆಜ್ಜಿಂಗ್ ಆಗಬೇಕು. ನಾವು ಈಗಾಗಲೇ 4ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮನವಿ ಮಾಡಿದ್ದೇವೆ. ಈಗ ಆ ನಮ್ಮ ಆಸೆಗೆ ತಣ್ಣೀರೆರಚಿ ಈ ಯೋಜನೆ ಬರುವಂತಾಗಬಾರದು ಎಂದರು.

ಕಸಬಾ ಬೆಂಗರೆ ಜಮಾಅತ್ ಅಧ್ಯಕ್ಷ ಬಿಲಾಲ್ ಮೊಯ್ದಿನ್ ಮಾತನಾಡಿ, ಈ ವ್ಯಾಪ್ತಿಯಲ್ಲಿ 2,000 ಮನೆಗಳಲ್ಲಿ 25,000 ಜನರಿದ್ದಾರೆ. ಈಗಾಗಲೇ ಈ ವ್ಯಾಪ್ತಿಯಲ್ಲಿ ಆಗಿರುವ ಯೋಜನೆಗಳಿಂದ ಉಂಟಾಗಿರುವ ತೊಂದರೆ, ಇಲ್ಲಿನ ಜನರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಅರಿತಕೊಳ್ಳಬೇಕು. ಯಾವುದೇ ರೀತಿಯ ಅನಾಹುತಕ್ಕೆ ಕಾರಣವಾಗದಂತೆ ಕ್ರಮ ಆಗಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಸಾರ್ವಜನಿಕರ ಪರವಾಗಿ ಈ ಯೋಜನೆಗೆ ಸಂಪೂರ್ಣ ಆಕ್ಷೇಪವನ್ನು ವ್ಯಕ್ತಪಡಿಸುವುದಾಗಿ ಹೇಳಿದರು.

ನಗರದ ವಾಹನ ದಟ್ಟಣೆಯನ್ನು ಸರಿಪಡಿಸಲು ರೋರೋ ಯೋಜನೆ ಸಮರ್ಪಕವಲ್ಲ. ಸ್ಮಾರ್ಟ್ ಸಿಟಿ ಯೋಜನೆಯು ಜಾರಿಗೆ ಬಂದಿರುವುದೇ ನಗರದ ಎಂಟು ಮೀನುಗಾರಿಕಾ ವ್ಯಾಪ್ತಿಯ ವಾರ್ಡ್ಗಳ ಅಭಿವೃದ್ದಿಗಾಗಿ. ಆದರೆ ಅದಕ್ಕಾಗಿ ಈಗಾಗಲೇ ಸಾವಿರಾರು ಕೋಟಿ ರೂ. ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗಿದೆ. ಜಲಮಾರ್ಗ ಅಭಿವೃದ್ಧಿ ಮಾಡುವ ಮೊದಲು ಈ ಪರಿಸರದ ನೀರಿನ ಪರೀಕ್ಷೆಯಾಗಲಿದೆ. ಸಾಂಪ್ರದಾಯಿಕ ಮೀನುಗಾರರಿಗೆ ಇದರಿಂದ ತೊಂದರೆ ಆಗಲಿದೆ ಎಂದವರು ಹೇಳಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ (ಪ್ರಭಾರ)ಕೆ. ಕೀರ್ತಿಕುಮಾರ್, ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ ಎಚ್. ಉಪಸ್ಥಿತರಿದ್ದರು.

ನಿಕಟಪೂರ್ವ ಕಾರ್ಪೊರೇಟರ್ ಅಬ್ದುಲ್ಲತೀಫ್ ಮಾತನಾಡಿ, ಈಗಾಗಲೇ ಈ ಪ್ರದೇಶದಲ್ಲಿ ಬಂದಿರುವ ಯೋಜನೆಗಳಿಂದ ನೋವು ಅನುಭವಿಸಿರುವ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಾಗಿದೆ. ಅಕ್ಟೋಬರ್ನಿಂದ ಎಪ್ರಿಲ್ವರೆಗೆ ಇಲ್ಲಿ ಲಕ್ಷದ್ವೀಪದ ಹಡಗುಗಳು ಬರುತ್ತವೆ. ಹಾಗಾಗಿ ಯೋಜನೆಯಿಂದಾಗುವ ಸಮಸ್ಯೆಗಳನ್ನು ಮೊದಲು ನಿವಾರಿಸಬೇಕು ಎಂದರು.

 

ಬೆಂಗರೆ ನಿವಾಸಿ, ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಬ್ದುಲ್ ತಯ್ಯೂಬ್ ಮಾತನಾಡಿ, ಈಗಾಗಲೇ ಈ ಪ್ರದೇಶದಲ್ಲಿ ಕೋಸ್ಟಲ್ ಬರ್ತ್, ಸಾಗರ ಮಾಲಾ ಮೊದಲಾದ ಹಲವು ಯೋಜನೆಗಳಿಂದ ಸ್ಥಳೀಯರು ತೊಂದರೆ ಅನುಭವಿಸಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನಂಬಿ ಬದುಕುವ ಸ್ಥಳೀಯ ಮೀನುಗಾರರಿಗೆ ಈ ಸಭೆಯ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಇಲ್ಲಿ ಈಗಾಗಲೇ ಮೀನುಗಾರಿಕಾ ಬೋಟುಗಳು ನದಿ ಮಧ್ಯೆ ಬೋಟು ನಿಲುಗಡೆ ಮಾಡುವ ಪರಿಸ್ಥಿತಿ ಇದೆ. ನದಿ ಮೀನುಗಾರಿಕೆ ನಡೆಸುವವರಿಗೆ ಜೆಟ್ಟಿ ನಿರ್ಮಾಣದ ಪ್ರಸ್ತಾವ ನೀಡಿ ಹಲವು ವರ್ಷಗಳಾದರೂ ಆಗಿಲ್ಲ. ನದಿ, ಸಮುದ್ರ ನೀರು ಕಲುಷಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯರಾದ ಅರುಣ್ ಕುಮಾರ್ ಮಾತನಾಡಿ, ವಾಹನ ದಟ್ಟಣೆಗೆ ಸಂಬಂಧಿಸಿ ಇದು ಶಾಶ್ವತ ಪರಿಹಾರವಲ್ಲ. ಇದರಿಂದ ಯಾರಿಗೂ ಪ್ರಯೋಜನ ಆಗದು. ಅದರ ಬದಲು ರಿಂಗ್ ರೋಡ್ ಆದರೆ ಉತ್ತಮ ಎಂದು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News