×
Ad

ಧರ್ಮಸ್ಥಳ ಪ್ರಕರಣ: ಎಸ್ಐಟಿಯಿಂದ ಮತ್ತೆ ಚಿನ್ನಯ್ಯನ ವಿಚಾರಣೆ

ಎರಡು ದಿನಗಳ ವಿಚಾರಣೆ, ಹೇಳಿಕೆ ದಾಖಲಿಸಲು ಬೆಳ್ತಂಗಡಿ ನ್ಯಾಯಾಲಯ ಅನುಮತಿ

Update: 2025-10-17 14:36 IST

ಫೈಲ್ ಫೋಟೋ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಇದೀಗ ಆರೋಪಿಯಾಗಿ ಜೈಲು ಸೇರಿರುವ ಚಿನ್ನಯ್ಯನ ವಿಚಾರಣೆ ನಡೆಸಲು ಎಸ್ಐಟಿಯು ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದೆ. ಅದರಂತೆ ಅ.17 ಮತ್ತು 18ರಂದು ಚಿನ್ನಯ್ಯನ ವಿಚಾರಣೆ ಹಾಗೂ ಹೇಳಿಕೆ ದಾಖಲಿಸುವ ಕಾರ್ಯ ನಡೆಯಲಿದೆ.

ಚಿನ್ನಯ್ಯ ಆರಂಭದಲ್ಲಿ ತಪ್ಪೊಪ್ಪಿಕೊಂಡ ಬಳಿಕ ಎಸ್.ಐ.ಟಿ ಮುಂದೆ ಹೆಣಗಳನ್ನು ಹೂತು ಹಾಕಿರುವ ಬಗ್ಗೆ ನೀಡಿರುವ ಹೇಳಿಕೆ ಹಾಗೂ ಇದಾದ ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳಲ್ಲಿ ಕೆಲವು ಗೊಂದಲಗಳು ಇರುವುದಾಗಿ ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ಮತ್ತೆ ಚಿನ್ನಯ್ಯನ ಹೇಳಿಕೆ ಪಡೆಯಲು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದರು. ಎಸ್ಐಟಿ ಮನವಿ ಆಲಿಸಿದ ನ್ಯಾಯಾಲಯ ಅ.16ರಂದು ಎರಡು ದಿನಗಳ ಕಾಲ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯ ಹೇಳಿಕೆ ದಾಖಲಿಸಲು ಎಸ್ಐಟಿಗೆ ಅವಕಾಶ ನೀಡಿದೆ.

ಆಗಾಗ ಹೇಳಿಕೆಗಳನ್ನು ಬದಲಿಸುತ್ತಿರುವ ಚಿನ್ನಯ್ಯ ಇದೀಗ ಎಸ್.ಐ.ಟಿ ಮುಂದೆ ಯಾವ ಹೇಳಿಕೆ ನೀಡಿಲಿದ್ದಾನೆ ಎಂಬುದು ಕುತೂಹಲದ ವಿಚಾರವಾಗಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯ ಆರಂಭದಲ್ಲಿ ನೀಡಿದ ಹೇಳಿಕೆಯ ಆಧಾರದಲ್ಲೇ ಎಸ್.ಐ.ಟಿ ರಚನೆಯಾಗಿ ತನಿಖೆ ಆರಂಭಗೊಂಡಿತ್ತು. ತನಿಖೆಯ ನಡುವೆಯೇ ಚಿನ್ನಯ್ಯ ತನ್ನ ಹೇಳಿಕೆ ಬದಲಿಸಿ ತಾನು ಸುಳ್ಳು ಸಾಕ್ಷ್ಯ ನೀಡಿರುವುದಾಗಿ ಹೇಳಿಕೆ ನೀಡಿದ್ದ. ಚಿನ್ನಯ್ಯ ಹೇಳಿಕೆ ಬದಲಿಸಿದ ಬಳಿಕವೂ ಪ್ರಕರಣದ ತನಿಖೆ ಮುಂದುವರಿಸಿರುವ ಎಸ್.ಐ.ಟಿ ಹಲವರ ಹೇಳಿಕೆಗಳನ್ನು ಪಡೆಯುವ ಕಾರ್ಯ ಮಾಡುತ್ತಿದೆ. ಇದೀಗ ಚಿನ್ನಯ್ಯನ ಹೇಳಿಕೆಯಲ್ಲಿ ಗೊಂದಲ ಕಂಡಬಂದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೇಳಿಕೆ ದಾಖಲಿಸುವ ಕಾರ್ಯಕ್ಕೆ ಎಸ್ಐಟಿ ಮುಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News