ಆರೆಸ್ಸೆಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಕೇಳಿದ್ದರಲ್ಲಿ ತಪ್ಪೇನಿದೆ: ಮಂಜುನಾಥ ಭಂಡಾರಿ
ಮಂಗಳೂರು, ಅ. 18: ಆರೆಸ್ಸೆಸ್ ಬುದ್ಧ, ಗಾಂಧಿ, ಬಸವಣ್ಣ ತತ್ವ ಒಪ್ಪುತ್ತದೆಯೇ?ಭಾರತೀಯ ಸಂವಿಧಾನವನ್ನು ಒಪ್ಪುತ್ತದೆಯೇ? ಸರ್ವಧರ್ಮ ಸಮಾನತೆಯನ್ನು ಪ್ರತಿಪದಿಸುತ್ತದೆಯೇ? ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆಯವರು ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಜಗದೀಶ್ ಶೆಟ್ಟರ್ ಕಾಲದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆ, ಪಾರ್ಕ್, ಮಂದಿರ, ಮೈದಾನಗಳಲ್ಲಿ ಅನುಮತಿ ರಹಿತವಾಗಿ ಯಾವುದೇ ಚಟುವಟಿಕೆ ಮಾಡಬಾರದು ಎಂಬ ಸುತ್ತೋಲೆಯನ್ನೇ ಎತ್ತಿ ಹಿಡಿದು ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಸಂಪೂರ್ಣ ಬೆಂಬಲವಿದೆ ಎಂದರು.
ಸರಕಾರಿ ಒಡೆತನ ಇರುವಲ್ಲಿ ಅನುಮತಿ ಪಡೆಯದೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಆರೆಸ್ಸೆಸ್ ತನ್ನ 100ರ ಸಂಭ್ರಮದ ಹೆಸರಿನಲ್ಲಿ ಪಥ ಸಂಚಲನ ನಡೆಸಿ ರಸ್ತೆ ಬ್ಲಾಕ್ ಮಾಡುತ್ತಿರುವ ಬಗ್ಗೆ ಇದೀಗ ಈ ವಿಷಯ ಮುನ್ನಲೆಗೆ ಬಂದಿದೆ. ದೇಶದ ರಾಷ್ಟ್ರಧ್ವಜ ಮೇಲೆ ನಂಬಿಕೆ ಇಲ್ಲ. ರಾಷ್ಟ್ರಗೀತೆಯನ್ನು ಹಾಡದ ಆರೆಸ್ಸೆಸ್ ವಿರುದ್ಧ ಪ್ರಶ್ನಿಸುವ ಅಧಿಕಾರ ನಮಗಿದೆ. ಅದಕ್ಕಾಗಿ ಇಲ್ಲ ಸಲ್ಲದ ಆರೋಪ, ಕೊಲೆ ಬೆದರಿಕೆ ಹಾಕುವುದು, ಮಹಿಳೆಯನ್ನು ದೇವಿ ಎಂದು ಪೂಜಿಸುವವರು ಕೀಳಾಗಿ ಮಾತನಾಡುವುದನ್ನು ಯಾರಾದರೂ ಒಪ್ಪಲು ಸಾಧ್ಯವೇ ಎಂದವರು ಹೇಳಿದರು.
ತಳ ಮಟ್ಟದ ಸಮುದಾಯದ ಮಕ್ಕಳಕೈಗೆ ತ್ರಿಶೂಲ, ಕತ್ತಿ, ಖಡ್ಗ, ಲಾಠಿ ನೀಡುವವರು ಅವರ ಮಕ್ಕಳನ್ನು ಪೆನ್ನು ಕೊಟ್ಟು ಶಿಕ್ಷಣ ಕೊಡಿಸುತ್ತಾರೆ. ನೋಂದಣಿಯೇ ಆಗದ ಸಂಘಟನೆಯೊಂದು 100 ವರ್ಷದ ಪಥ ಸಂಚಲನ ನಡೆಸುತ್ತಿರುವಾಗ ಅದರ ಲೆಕ್ಕ ಕೇಳುವುದರಲ್ಲಿ ತಪ್ಪೇನಿದೆ. ಪ್ರಿಯಾಂಕ್ ಖರ್ಗೆಯವರು ಈ ಮಾತುಗಳನ್ನು ಕೇಳಿರುವುದು. ಬಿಜೆಪಿಯವರಿಗೆ ಗೊತ್ತಿರುವುದು ಎರಡೇ ವಿಷಯ. ಒಂದು ಪಾಕಿಸ್ತಾನ ಮತ್ತೊಂದು ಮುಸಲ್ಮಾನ ಎಂಬುದು ಮಾತ್ರ ಅವರ ಅಜೆಂಡಾ. ಅದು ಬಿಟ್ಟರೆ ಅವರಿಗೆ ಬೇರೆ ರಾಜಕಾರಣವೇ ತಿಳಿದಿಲ್ಲ ಎಂದವರು ಟೀಕಿಸಿದರು.
ಪರಾವಾನಿಗೆ ರಹಿತವಾಗಿ ಶಸ್ತ್ರಾಸ್ತ್ರ ತಯಾರಿಸುವುದು, ಬಳಸುವುದು ನಿಷಿದ್ಧ. ಆರೆಸ್ಸೆಸ್‌ನವರಿಗೆ ತರಬೇತಿಗೆ ಲಾಠಿ ಯಾಕೆ ಅದನ್ನು ನಿಷೇಧಿಸಲು ನಾವು ಹೇಳುತ್ತಿರುವುದು. ರಸ್ತೆ ತಡೆ ಮಾಡಿ ಕಾರ್ಯಕ್ರಮ ನಡೆಸುವ ಯಾವುದೇ ಸಂಘಟನೆಯವರಾದರೂ ಅನುಮತಿ ಪಡೆಯಬೇಕೆಂಬುದು ನಮ್ಮ ಆಗ್ರಹ. ಈ ನಿಟ್ಟಿನಲ್ಲಿ ಕಾನೂನು ಜಾರಿಯಾ ಗಲಿದೆ ಎಂದವರು ಹೇಳಿದರು.
ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್ ಚಟುವಟಿಕೆ ನಡೆದಿಲ್ಲ
ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್‌ಚಟುವಟಿಕೆಗೆ ಅನುಮತಿ ನೀಡಲಾಗಿದೆ, ಬೈಠಕ್ ನಡೆಸಲಾಗಿದೆ ಎಂಬ ಆರೋಪಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಜುನಾಥ ಭಂಡಾರಿ, ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್‌ನ ಯಾವುದೇ ಚಟುವಟಿಕೆ ನಡೆದಿಲ್ಲ. ಸರಕಾರದ ಕೈಗಾರಿಕಾ ಸಂಸ್ಥೆಯ ಮೂಲಕ ರಾಜ್ಯದ ಸುಮಾರು 300 ಕಾಲೇಜುಗಳ ವಿದ್ಯಾರ್ಥಿಗಳ ಭಾಗವಹಿಸಿದ್ದ ‘ಸೃಷ್ಟಿ’ ಎಂಬ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿತ್ತು. ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಕಾರ್ಯಕ್ರಮ ಆದಾಗಿದ್ದು, ಸರಕಾರದ ಹಿರಿಯ ಅಧಿಕಾರಿಗಳು, ವಿವಿಧ ಐಟಿ ಕಂಪನಿಗಳವರು ಅದರಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಸಂಘಟನೆಯಾಗಿ ಎಬಿವಿಪಿ ಬೆಂಬಲ ನೀಡಿತ್ತು. ಅದು ವಿದ್ಯಾರ್ಥಿಗಳ ಪ್ರಾಜೆಕ್ಟ್ ಆಧಾರಿತ ಕಾರ್ಯಕ್ರಮ ಎಂಬ ನೆಲೆಯಲ್ಲಿ ಅವಕಾಶ ನೀಡಲಾಗಿತ್ತೇ ಹೊರತು ಅಲ್ಲಿ ಯಾವುದೇ ಆರೆಸ್ಸೆಸ್ ಚಟುವಟಿಕೆ ಅಥವಾ ಬೈಠಕ್ ನಡೆಸಲಾಗಿಲ್ಲ ಎಂದು ಹೇಳಿದರು.
ಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಾಲೆಟ್ ಪಿಂಟೋ, ಪದ್ಮರಾಜ್, ನೀರಜ್ ಪಾಲ್, ವಿಕಾಸ್ ಶೆಟ್ಟಿ, ಮೆಲ್ವಿನ್ ಡಿಸೋಜಾ, ಶಶಿಧರ ಹೆಗ್ಡೆ, ಚಿತ್ತರಂಜನ್, ನಿತ್ಯಾನಂದ ಶೆಟ್ಟಿ, ಶುಭೋದಯ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
‘ನಾನು ಎನ್‌ಎಸ್‌ಯುಐ ನಾಯಕನಾಗಿದ್ದು, ಬೆಳೆದವನು. ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನನ್ನ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿದ್ದು ನಡೆದುಕೊಂಡು ಬಂದಿದ್ದೇನೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಬರೆದವರು ಯಾವ ನೈತಿಕತೆ ಆಧಾರದಲ್ಲಿ ಕಾಂಗ್ರೆಸ್‌ನ ಎಂಎಲ್‌ಸಿ ಟಿಕೆಟ್ ಕೇಳಿರುವುದು ಎಂಬುದನ್ನು ಆರೋಪ ಮಾಡಿದವರು ಸ್ಪಷ್ಟಪಡಿಸಲಿ’ ಎಂದು ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ ಭಂಡಾರಿ, ಇನ್ನು ಮುಂದೆ ಈ ರೀತಿಯಾಗಿ ಇಂತಹ ಆರೋಪ ಮಾಡಿದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.
ಯಾವುದೇ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಿಗೆ ಎದುರಾದಾಗ ‘ಗುಡ್ ಪರ್ಸನ್ ಇನ್ ರಾಂಗ್ ಪಾರ್ಟಿ (ಒಳ್ಳೆಯ ವ್ಯಕ್ತಿ ತಪ್ಪು ಪಕ್ಷದಲ್ಲಿದ್ದಾನೆ) ಎಂಬ ಹೇಳಿಕೆ ನೀಡುತ್ತಾರೆ. ಅದನ್ನೇ ಕೆಲವರು ಗಾಳವಾಗಿಸಿಕೊಂಡು ನಮ್ಮಲ್ಲಿ ಕೆಲವರು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುತ್ತಾರೆ. ಯಾರ ಜತೆ ಚಕ್ಕಂದ, ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಆರೋಪ ಮಾಡುವವರು ಹೇಳಲಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಎಂದು ಮಂಜುನಾಥ ಭಂಡಾರಿ ಉತ್ತರಿಸಿದರು.