ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ: ಕೆನರಾ ಪದವಿ ಪೂರ್ವ ಕಾಲೇಜು ತಂಡ ಪ್ರಥಮ
ಮಿಲಾಗ್ರಿಸ್ ಕಾಲೇಜಿನಲ್ಲಿ ‘ಮಂಥನ್ ’ 2025 ಕಾರ್ಯಕ್ರಮ
ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿಲಾಗಿದ್ದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ ‘ಮಿಲಾಗ್ರಿಸ್ ಮಂಥನ್ -2025’ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜು ತಂಡ ತನ್ನದಾಗಿಸಿಕೊಂಡಿದೆ.
ದ್ವಿತೀಯ ಸ್ಥಾನವನ್ನು ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಪಡೆದಿದೆ.
ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಹಾಗೂ ತುಳು ನಟ ಸ್ವರಾಜ್ ಶೆಟ್ಟಿ ಅವರು ವಿದ್ಯಾರ್ಥಿ ಜೀವನದಲ್ಲೇ ಏನಾದರೊಂದು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಹಾಗಾದರೆ ಮಾತ್ರ ಭವಿಷ್ಯದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕ ರೆ. ಫಾ. ಬೊನವೆಂಚರ್ ನಜರೆತ್ ಮಾತನಾಡಿ ‘ಅಂತರ್ ಕಾಲೇಜು ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ವೈಸರ್ ಜನರಲ್ ಮ್ಯಾಕ್ಸಿಮ್ ಎಲ್. ನೊರೊನ್ಹ ಮಾತನಾಡಿ‘ಜೀವನದಲ್ಲಿ ಸಿಗುವ ಅನುಭವಗಳೆಲ್ಲ ಒಂದೊಂದು ಪಾಠ ಕಲಿಸುತ್ತದೆ. ಇಂತಹ ಸ್ಪರ್ಧೆಗಳು ಕೂಡ ನಿಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುವುದಕ್ಕೆ ಸಾಧ್ಯ’ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಒಟ್ಟು 21 ಕಾಲೇಜಿನಿಂದ 396 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಿಯುಸಿ ವಿದ್ಯಾರ್ಥಿಗಳಿಗಾಗಿ ಫುಟ್ಬಾಲ್ ಪಂದ್ಯಾಟ ನಡೆಯಿತು. 15 ತಂಡಗಳು ಭಾಗವಹಿಸಿದ್ದವು.
ಮಿಲಾಗ್ರಿಸ್ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಮೆಲ್ವಿನ್ ವಾಸ್, ಮಿಲಾಗ್ರಿಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಡಯಾನ ಲೋಬೊ, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಫಾ. ಉದಯ್ ಫೆರ್ನಾಂಡಿಸ್, ಮಿಲಾಗ್ರಿಸ್ ಕಾಲೇಜಿನ ಐಕ್ಯೂ ಎಸಿ ಸಂಚಾಲಕ ಪ್ರೊ. ಚೇತನಾ ಕುಮಾರಿ, ಪ್ರೊ. ಡೆನಿಲ್ ಸೆಲೆಸ್ಟೈನ್ ಡಿ ಕೋಸ್ಟ, ವಿದ್ಯಾರ್ಥಿ ಪ್ರತಿನಿಧಿ ಪ್ರೇಕ್ಷಿಕ ಹಾಗೂ ರೋಹನ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಫಾ.ಡಾ.ಅಲ್ವಿನ್ ಸೆರಾವೊ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಕಾರ್ಯಕ್ರಮದ ಸಂಯೋಜಕ ಉಪಪ್ರಾಂಶುಪಾಲ ಪ್ರೊ.ಗ್ಲೆನ್ಸಿಯಾ ಫೆರ್ನಾಂಡಿಸ್ ವಂದಿಸಿದರು.