×
Ad

ಕುಂಜತ್ತಬೈಲ್ ಲೇಔಟ್: ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸಚಿವರ ಸೂಚನೆ

Update: 2025-10-27 19:25 IST

ಮಂಗಳೂರು, ಅ.27: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಕುಂಜತ್ತ್‌ಬೈಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಲೇಔಟ್‌ನಲ್ಲಿ ಮೂಲ ಸೌಲಭ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಜನಾಕರ್ಷಣೆ ಗೊಳಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಸೋಮವಾರ ಕುಂಜತ್ತ್‌ಬೈಲ್ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಬಡಾವಣೆಯಲ್ಲಿ ಉದ್ಯಾನವನ, ದಾರಿದೀಪ ಸೇರಿದಂತೆ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಬೇಕು. ನಿವೇಶನಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮತ್ತು ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಕಡೆ ಈ ಬಗ್ಗೆ ಪ್ರಚಾರಪಡಿಸಬೇಕು ಎಂದು ದಿನೇಶ್ ಗುಂಡೂರಾವ್ ಸೂಚಿಸಿದರು.

ಕುಂಜತ್ತಬೈಲ್ ಬಡಾವಣೆಯಲ್ಲಿ ಆಧುನಿಕ ಸೌಲಭ್ಯಗಳು ದೊರಕುವಂತೆ ಅಭಿವೃದ್ಧಿಪಡಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರವು ಈ ಬಗ್ಗೆ ಹೆಚ್ಚು ಒತ್ತು ನೀಡಿ ಬಡಾವಣೆಯನ್ನು ನಿರ್ಮಿಸಬೇಕು. ಕುಂಜತ್ತಬೈಲ್ ಬಡಾವಣೆಯ ನಿವೇಶನ ಮಾರಾಟದಿಂದ ಬಂದ ಹಣದಲ್ಲಿ ನಗರದ ಇನ್ನೊಂದು ಕಡೆ ಬಡಾವಣೆಯನ್ನು ಅಭಿವೃದ್ಧಿಗೊಳಿಸುವಂತೆ ಸಚಿವರು ತಿಳಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಮಾತನಾಡಿ ಈ ಬಡಾವಣೆಯಲ್ಲಿ 208 ನಿವೇಶನಗಳಿವೆ. ಈಗಾಗಲೇ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 18 ಕೊನೆಯ ದಿನವಾಗಿ ರುತ್ತದೆ. ಸಾರ್ವಜನಿಕರಿಗೆ ಅತೀ ಕಡಿಮೆ ದರದಲ್ಲಿ ನಿವೇಶನ ಲಭ್ಯವಾಗಲು ಸೈಟ್ ದರವನ್ನು ಕಡಿಮೆಗೊಳಿಸ ಲಾಗಿದೆ ಎಂದು ಹೇಳಿದರು.

ಬಳಿಕ ಕೊಣಾಜೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಡಾ ವಸತಿ ಬಡಾವಣೆಗೆ ಸಚಿವರು ಭೇಟಿ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ದರ್ಶನ್ ಎಚ್., ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಜೀರ್, ಮುಡಾ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News