ಫಾದರ್ ಮುಲ್ಲರ್‌ನಲ್ಲಿ ರೋಗಶಾಸ್ತ್ರಜ್ಞರ ಸಮ್ಮೇಳನ ಉದ್ಘಾಟನೆ
ಮಂಗಳೂರು: ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ (ಪೆಥಾಲಜಿ) ವಿಭಾಗದ ಆಶ್ರಯದಲ್ಲಿ ಭಾರತೀಯ ಸೈಟೋಲಜಿಸ್ಟ್ ಅಕಾಡೆಮಿ - ಕರ್ನಾಟಕ ಘಟಕದ ಸಹಯೋಗದಲ್ಲಿ 9ನೇ ವಾರ್ಷಿಕ ರಾಜ್ಯ ಸಮ್ಮೇಳನ ಪೆಥಾಲಜಿ ಐಎಸಿ-ಕೆಸಿಸಿಒಎನ್ ಸೋಮವಾರ ಆರಂಭಗೊಂಡಿತು.
ಐಎಸಿ-ಕೆಸಿ ಅಧ್ಯಕ್ಷ ಮತ್ತು ಎಸ್‌ಡಿಎಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕರ್ನಲ್ ಯು.ಎಸ್. ದಿನೇಶ್ ಅವರು ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಸಂಶೋಧನೆ, ಸಹಯೋಗ ಮತ್ತು ಆಧುನಿಕ ರೋಗ ನಿರ್ಣಯದಲ್ಲಿ ಸೈಟಾಲಜಿಯ (ಜೀವಕೋಶ ಶಾಸ್ತ್ರ) ಪ್ರಾಮುಖ್ಯತೆಯನ್ನು ವಿವರಿಸಿದರು.
ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ಫಾ. ಫೌಸ್ಟಿನ್ ಲ್ಯೂಕಾಸ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಮಾನವ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಸಾಮಾಜಿಕ, ಪರಿಸರ ಮತ್ತು ಜೀವನ ಶೈಲಿಯ ಅಂಶಗಳು ಆಳವಾಗಿ ಪ್ರಭಾವ ಬೀರುತ್ತದೆ. ಇಂದು ಸೇವಿಸುವ ಆಹಾರವು, ಹೆಚ್ಚಾಗಿ ಕೀಟನಾಶಕಗಳನ್ನು ಒಳಗೊಂಡಿರುತ್ತದೆ, ಇದು ವ್ಯಕ್ತಿಯ ಆರೋಗ್ಯ ಪಥವನ್ನು ಮೊದಲೇ ನಿರ್ಧರಿಸುತ್ತದೆ ಎಂದರು.
ಫಾದರ್ ಮುಲ್ಲರ್ ವೈದ್ಯಕೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಈಗ ತನ್ನ 145 ವರ್ಷಗಳ ಇತಿಹಾಸವನ್ನು ಹೊಂದಿದೆ. ಅದರ ಶಾಶ್ವತ ಪರಂಪರೆಯ ಭಾಗವಾಗಿರುವ ಸಮರ್ಪಿತ ವೈದ್ಯರ ಕಾರಣದಿಂದಾಗಿ ಸಂಸ್ಥೆ ಅಭಿವೃದ್ಧಿ ಹೊಂದುತ್ತಿದೆ ಎಂದು ಫಾ. ಫೌಸ್ಟಿನ್ ಲ್ಯೂಕಾಸ್ ಲೋಬೊ ನುಡಿದರು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಮತ್ತು ಕನ್ಸಲ್ಟೆಂಟ್ ವೈದ್ಯ ಡಾ. ಜಯಪ್ರಕಾಶ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎಫ್‌ಎಂಎಂಸಿ ಆಡಳಿತಾಧಿಕಾರಿ ಡಾ. ಮೈಕೆಲ್ ಸಂತುಮಯೋರ್, ಎಫ್‌ಎಂಎಂಸಿ ಡೀನ್ ಡಾ. ಆಂಟನಿ ಸಿಲ್ವಾನ್ ಡಿ ಸೋಜ , ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ಟಿ , ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈಯನ್ಸ್‌ನ ಪ್ರಾಂಶುಪಾಲ ಡಾ. ಹಿಲ್ಡಾ ಫೆರ್ನಾಂಡಿಸ್ ಮತ್ತು ಯೆನೆಪೊಯ ವೈದ್ಯಕೀಯ ಕಾಲೇಜಿನ ಆಂಕೊಪಾಥಾಲಜಿಯ ಮುಖ್ಯಸ್ಥೆ ಡಾ. ಮಾಲತಿ ಎಂ ಉಪಸ್ಥಿತರಿದ್ದರು.
ಐಎಸಿ-ಕೆಸಿ ಕಾರ್ಯದರ್ಶಿ ಡಾ. ಪ್ರಿಯಾಂಕಾ ಪಿ ಸ್ವಾಗತಿಸಿದರು. ಡಾ. ರೇಷ್ಮಾ ಜಿ. ಕಿಣಿ ವಂದಿಸಿದರು.