×
Ad

ಅಶೀರುದ್ದೀನ್ ಸಾರ್ತಬೈಲ್‌ರ ಕಥಾ ಸಂಕಲನ ʼಪಾಸʼ ಬಿಡುಗಡೆ

Update: 2025-10-31 19:07 IST

ಮಂಗಳೂರು, ಅ.31: ಶಿಕ್ಷಕ ಎಂ. ಅಶೀರುದ್ದೀನ್ ಆಲಿಯಾ ಸಾರ್ತಬೈಲ್‌ರ ಪ್ರಪ್ರಥಮ ಕಥಾ ಸಂಕಲನ ʼಪಾಸʼ ಬಿಡುಗಡೆ ಕಾರ್ಯಕ್ರಮವು ಬಜಾಲ್ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್‌ನ ಮರ್ಹೂಮ್ ಇಬ್ರಾಹಿಂ ಸಯೀದ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಹಿರಿಯ ಸಮಾಜ ಸೇವಕ ಕೆ.ಪಿ. ಕರೀಂ ಟೈಲರ್ ಕಥಾ ಸಂಕಲನ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅನುಭವದಿಂದ ಕಥೆ ಹುಟ್ಟು ಪಡೆಯಲಿದೆ. ಓದುವುದರಿಂದಲೇ ಜ್ಞಾನಾಭಿವೃದ್ದಿ ಆಗಲಿದೆ. ಜೀವನದಲ್ಲಿ ಅನುಭವಗಳನ್ನು ಪಡೆಯುತ್ತಿರಬೇಕು. ಅದು ಬರೆವಣಿಗೆಗೆ ಪೂರಕವಾಗಲಿದೆ ಎಂದರು.

ಉದ್ಯಮಿ ಅಬ್ದುಲ್ ಮುತ್ತಲಿಬ್ ಮಾತನಾಡಿ ಆಶೀರುದ್ದೀನ್ ಚೆನ್ನಾಗಿ ಬರೆದು ಈ ಪುಸ್ತವನ್ನು ಕನ್ನಡ ನಾಡಿಗೆ ಅರ್ಪಿಸಿದ್ದಾರೆ, ಪುಸ್ತಕ ಬರೆಯುವುದು ಸುಲಭದ ಮಾತಲ್ಲ, ಪ್ರಕಟಿಸುವುದೂ ಕೂಡಾ ಕಷ್ಟಕರ, ಇಂದಿನ ಕಾಲದಲ್ಲಿ ಅದೊಂದು ಸವಾಲಾಗಿದೆ. ಇನ್ನೂ ಹೆಚ್ಚು ಹೆಚ್ಚು ಪುಸ್ತಕ ಬರೆದು ಸಾಹಿತ್ಯ ಲೋಕದಲ್ಲಿ ಹೆಸರುಗಳಿಸಲಿ ಎಂದು ಹಾರೈಸಿದರು.

ಕೃತಿಕಾರ ಅಶೀರುದ್ದೀನ್ ಸಾರ್ತಬೈಲ್ ಪಾಸ ಕಥಾಸಂಕಲನದ ಬಗ್ಗೆ ವಿವರಿಸಿದರು. ಶಿಕ್ಷಕಿ ನಾಗರತ್ನ ಮತ್ತು ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಗಫೂರ್ ಕುಳಾಯಿ, ಸ್ನೇಹ ಪಬ್ಲಿಕ್ ಸ್ಕೂಲ್‌ನ ಸಂಚಾಲಕ ಯೂಸುಫ್ ಪಕ್ಕಲಡ್ಕ, ಮುಖ್ಯ ಶಿಕ್ಷಕಿ ಖುರೇಶಾ ನುಸ್ರತ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಿ.ಬಿ., ಉಪಾಧ್ಯಕ್ಷ ಸಲೀಂ ಮಲಾರ್, ಕಾರ್ಯದರ್ಶಿ ಮುಹಮ್ಮದ್ ಫರ್ವೀಝ್ ಮಾತನಾಡಿದರು. ಮರಿಯಮ್ ನೌರೀನ್, ಮೊಯಿದಿನ್ ಪಕ್ಕಲಡ್ಕ, ಫೈರೋಝ್ ಅಬ್ದುಲ್ಲಾ ನದ್ವಿ ಉಪಸ್ಥಿತರಿದ್ದರು.

ಈ ಸಂದರ್ಭ ಕನ್ನಡ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ ಕನ್ನಡ ಭಾಷಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಕನ್ನಡ ಓದುಗ ತೊಂಬತ್ತರ ಹರೆಯದ ಕೆ.ಪಿ. ಕರೀಮ್ ಟೈಲರ್‌ರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಶಾಹಿದ್ ಕಿರಾಅತ್ ಪಠಿಸಿದರು. ಸಹ ಶಿಕ್ಷಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸಹ ಮುಖ್ಯ ಶಿಕ್ಷಕಿ ಪಾವನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News